ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಾಕಿಸ್ತಾನ, ಜಮ್ಮು-ಕಾಶ್ಮೀರ, ಅಣುಬಾಂಬ್ ಸೇರಿ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಅದರಲ್ಲೂ, “ಪಾಕಿಸ್ತಾನದ ಬಳಿ ಅಣುಬಾಂಬ್ ಇವೆ. ಭಾರತವು ಪಾಕಿಸ್ತಾನಕ್ಕೆ ಗೌರವ ಕೊಡಬೇಕು” ಎಂಬುದಾಗಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ನೀಡಿದ ಹೇಳಿಕೆಗೆ ಖುದ್ದು ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಮಣಿಶಂಕರ್ ಅಯ್ಯರ್ ಹೇಳಿಕೆಗೆ ಬಿಜೆಪಿ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಮಣಿಶಂಕರ್ ಅಯ್ಯರ್ ‘ಅಣುಬಾಂಬ್’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಕ್ರಿಯಿಸಿದ್ದು, “ನಾನೇ ಪಾಕಿಸ್ತಾನಕ್ಕೆ (Pakistan) ಹೋಗಿ, ಆ ದೇಶದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಇಂಡಿಯಾ ಟಿವಿ ಚಾನೆಲ್ ಜತೆ ಸಂವಾದ ನಡೆಸುವ ವೇಳೆ, ಮಣಿಶಂಕರ್ ಅಯ್ಯರ್ ಹೇಳಿಕೆ ಕುರಿತು ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ಉತ್ತರ ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್ ಅಯ್ಯರ್ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದಾರೆ.
पाकिस्तान से डरो, क्योंकि उसके पास परमाणु बम है, देखिए इस पर पीएम मोदी ने क्या जवाब दिया…
— Shubham Rai (@shubhamrai80) May 23, 2024
@narendramodi | @PMOIndia @BJP4India pic.twitter.com/C0KnWkVsqX
ಕೆಲ ದಿನಗಳ ಹಿಂದೆಯೂ ಮಣಿಶಂಕರ್ ಅಯ್ಯರ್ ಹೇಳಿಕೆ ವಿರುದ್ಧ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು. “ಪಾಕಿಸ್ತಾನದ ಕುರಿತು ಕಾಂಗ್ರೆಸ್ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ನೆರೆಯ ರಾಷ್ಟ್ರದ ಬಳಿ ಅಣು ಬಾಂಬ್‌ಗಳಿವೆ ಎಂಬುದಾಗಿ ಅವರು ಹೆದರಿಸುತ್ತಾರೆ. ಆದರೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್‌ಗಳಿವೆ ಹಾಗೂ ಅವುಗಳನ್ನು ನಿರ್ವಹಣೆ ಮಾಡಲು ಆಗದಂತಹ, ಅದಕ್ಕೆ ಹಣವೇ ಇಲ್ಲದಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂಬುದಾಗಿ ಚುನಾವಣೆ ರ‍್ಯಾಲಿಯಲ್ಲಿ ಹೇಳಿದ್ದರು.
ಮಣಿಶಂಕರ್ ಅಯ್ಯರ್ ಹೇಳಿದ್ದೇನು?
“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್ ಹೇಳಿದ್ದರು.
ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ರ್‍ಯಾಲಿಯಲ್ಲಿ ಜನವೋ…ಜನ! ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ-ವಿಡಿಯೋ ವೈರಲ್