ಹೊಸದಿಲ್ಲಿ: ʼಮಸೀದಿಯ ಆಜಾನ್ ಶಬ್ದಮಾಲಿನ್ಯ ಎಂದಾದರೆ, ಭಜನೆ ಶಬ್ದಮಾಲಿನ್ಯ (Noise pollution) ಆಗುವುದಿಲ್ಲವೇ?ʼ ಎಂದು ಗುಜರಾತ್ ಹೈಕೋರ್ಟ್ (Gujarat High court) ಪ್ರಶ್ನಿಸಿದೆ. ಲೌಡ್‌ಸ್ಪೀಕರ್‌ಗಳಲ್ಲಿ ಆಜಾನ್ ಪ್ರಸಾರ ಮಾಡುವುದಕ್ಕೆ ತಡೆ ಹಾಕಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಅದು ತಳ್ಳಿ ಹಾಕಿದೆ.
ಆಜಾನ್ ಶಬ್ದ ಮಾಲಿನ್ಯ ಉಂಟುಮಾಡುತ್ತದೆ ಎಂಬುದನ್ನು ಗುಜರಾತ್ ಹೈಕೋರ್ಟ್ ಒಪ್ಪಿಕೊಳ್ಳಲಿಲ್ಲ. ಜಸ್ಟಿಸ್ ಸುನೀತಾ ಅಗರ್‌ವಾಲ್, ಜಸ್ಟಿಸ್ ಅನಿರುದ್ಧ ಪಿ ಮಾಯೀ ಅವರಿದ್ದ ಪೀಠ, ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ʼಸಂಪೂರ್ಣವಾಗಿ ಅಪಾರ್ಥದಿಂದ ಸಲ್ಲಿಸಲ್ಪಟ್ಟದ್ದುʼ ಎಂದು ಕರೆಯಿತು. ಅರ್ಜಿದಾರರು ಆಜಾನ್ ಧ್ವನಿಯು ನಿಗದಿತ ಡೆಸಿಬಲ್‌ಗಳನ್ನು ಮೀರುತ್ತದೆ ಎಂಬುದಕ್ಕೆ ಸರಿಯಾದ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದಿತು.
ಆಜಾನ್ ಮೂಲ ಮನುಷ್ಯನ ಧ್ವನಿ. ಅದರಿಂದ ವಾತಾವರಣದಲ್ಲಿ ಡೆಸಿಬಲ್‌ಗಳು ಹೆಚ್ಚಾಗಿ ಜನತೆಗೆ ಸಮಸ್ಯೆ ಉಂಟುಮಾಡುತ್ತದೆ ಎಂದು ಒಪ್ಪಲಾಗುವುದಿಲ್ಲ. ನಿಮ್ಮ ದೇವಸ್ಥಾನಗಳಲ್ಲಿ ನೀವು ಆರತಿ, ಭಜನೆ ಎಲ್ಲವನ್ನೂ ಮುಂಜಾನೆ 3 ಗಂಟೆಗೆ ಧ್ವನಿವರ್ಧಕಗಳಲ್ಲಿ ಪ್ರಸಾರ ಮಾಡುತ್ತೀರಿ. ಅದೂ ತಾಳ, ನಗಾರಿ ಸಮೇತ. ಅದು ಯಾರಿಗೂ ಧ್ವನಿಮಾಲಿನ್ಯ ಉಂಟುಮಾಡುವುದಿಲ್ಲವೇ? ಗಂಟೆ ಜಾಗಟೆಗಳ ಧ್ವನಿಯು ದೇವಾಲಯದ ಒಳಗೇ ಉಳಿಯತ್ತದೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಬಜರಂಗ ದಳ ಲೀಡರ್ ಶಕ್ತಿಸಂಹ ಝಲಾ ಎಂಬವರು, ಆಜಾನ್‌ಗಳನ್ನು ಧ್ವನಿವರ್ಧಕಗಳ ಮೂಲಕ ದಿನದಲ್ಲಿ ಐದು ಬಾರಿ ಜೋರಾಗಿ ಪ್ರಸಾರ ಮಾಡುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ; ಜನಜೀವನಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಶಬ್ದ ಮಾಲಿನ್ಯವನ್ನು ಅಳೆಯಲು ವೈಜ್ಞಾನಿಕ ವಿಧಾನವಿದೆ. ಆದರೆ ಅರ್ಜಿದಾರರು ಹತ್ತು ನಿಮಿಷಗಳ ಅಜಾನ್ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಡೇಟಾವನ್ನು ಒದಗಿಸಲು ವಿಫಲರಾಗಿದ್ದಾರೆ. ಧ್ವನಿವರ್ಧಕಗಳ ಮೂಲಕ ಅಜಾನ್ ನಡೆಯುವ ನೆರೆಹೊರೆಯಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮಗಳ ಜನರು ವಾಸಿಸುತ್ತಿದ್ದಾರೆ ಮತ್ತು ಇದು ಆರೋಗ್ಯದ ಅಪಾಯಗಳು ಮತ್ತು ಅnನುಕೂಲತೆಯನ್ನು ಉಂಟುಮಾಡುತ್ತದೆ ಎಂಬುದು ಅರ್ಜಿದಾರರ ಏಕೈಕ ವಾದವಾಗಿದೆ ಎಂದು ಗುಜರಾತ್ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: Bengal Violence: ಆಜಾನ್ ಕೂಗುವಾಗಲೇ ರಾಮನವಮಿ ಮೆರವಣಿಗೆ ಏಕೆ? ಹಿಂಸೆಗೆ ಬಂಗಾಳ ಮೌಲ್ವಿ ಸಮರ್ಥನೆ