Site icon Vistara News

ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Illegal beef trade

Illegal beef trade

ಭೋಪಾಲ್‌: ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಧ್ಯ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅಪರಾಧಿಗಳ ಅನಧಿಕೃತ ಕಟ್ಟಡ ನಿರ್ನಾಮ ಮಾಡಿ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಅಂತಹದ್ದೇ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡು ದೇಶದ ಗಮನ ಸೆಳೆದಿದೆ. ಅಕ್ರಮವಾಗಿ ಬೀಫ್‌ ವ್ಯಾಪಾರ ಮಾಡುತ್ತಿದ್ದ (Illegal beef trade), 11 ಮಂದಿ ಮುಸ್ಲಿಮರು ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಮನೆಗಳನ್ನು ಕೆಡವಿ ಹಾಕಿದೆ.

ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯ ಹೊಂದಿರುವ ಮಾಂಡ್ಲಾದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿನ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ ಈ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ʼʼನೈನ್ಪುರದ ಭೈನ್ವಾಹಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹಸುಗಳನ್ನು ಮಾಂಸಕ್ಕಾಗಿ ಕೂಡಿಡಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಈ ಕ್ರಮ ಕೈಗೊಂಡಿದ್ದಾರೆʼʼ ಎಂದು ಮಾಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ಪಿಟಿಐಗೆ ತಿಳಿಸಿದ್ದಾರೆ. “ಪೊಲೀಸ್‌ ತಂಡ ದಾಳಿ ನಡೆಸಿದಾಗ ಆರೋಪಿಗಳ ಹಿತ್ತಿಲಿನಲ್ಲಿ ಮಾಂಸಕ್ಕಾಗಿ 150 ಹಸುಗಳನ್ನು ಕಟ್ಟಿ ಹಾಕಿರುವುದು ಕಂಡು ಬಂದಿತ್ತು. ಜತೆಗೆ ಎಲ್ಲ 11 ಆರೋಪಿಗಳ ಮನೆಗಳ ರೆಫ್ರಿಜರೇಟರ್ ಗಳಿಂದ ಹಸುವಿನ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಗಳ ಕೊಬ್ಬು, ಜಾನುವಾರುಗಳ ಚರ್ಮ ಮತ್ತು ಮೂಳೆಗಳು ಸಹ ದಾಳಿ ವೇಳೆ ಕಂಡು ಬಂದಿದೆ. ಅವುಗಳನ್ನು ಕೋಣೆಯಲ್ಲಿ ತುಂಬಿಡಲಾಗಿತ್ತುʼʼ ಎಂದು ಅವರು ಹೇಳಿದ್ದಾರೆ.

ದೃಢಪಡಿಸಿದ ವೈದ್ಯರು

ʼʼದಾಳಿ ವೇಳೆ ಪತ್ತೆಯಾಗಿರುವುದು ಗೋಮಾಂಸ ಎನ್ನುವುದನ್ನು ಸ್ಥಳೀಯ ಸರ್ಕಾರಿ ಪಶುವೈದ್ಯರು ದೃಢಪಡಿಸಿದ್ದಾರೆ. ದ್ವಿತೀಯ ಡಿಎನ್ಎ ವಿಶ್ಲೇಷಣೆಗಾಗಿ ನಾವು ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿದ್ದ ಕಾರಣ ಅವುಗಳನ್ನು ನೆಲಸಮಗೊಳಿಸಲಾಗಿದೆ” ಎಂದು ರಜತ್ ಸಕ್ಲೇಚಾ ವಿವರಿಸಿದ್ದಾರೆ.

10 ಆರೋಪಿಗಳಿಗಾಗಿ ಶೋಧ

ಹಸುಗಳು ಮತ್ತು ಗೋಮಾಂಸವನ್ನು ವಶಪಡಿಸಿಕೊಂಡ ನಂತರ ಶುಕ್ರವಾರ ರಾತ್ರಿ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಉಳಿದ 10 ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ: Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

ಗೋಶಾಲೆಗೆ ರವಾನೆ

“ದಾಳಿ ವೇಳೆ ಪತ್ತೆಯಾದ 150 ಹಸುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನ್ಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಹಸು ಕಳ್ಳ ಸಾಗಾಣಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮಧ್ಯ ಪ್ರದೇಶದಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದ್ದು, ಇಂತಹ ಕೃತ್ಯ ಎಸಗಿದರೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಕಾನೂನು ಇದೆʼʼ ಎಂದು ಎಸ್‌ಪಿ ರಜತ್ ಸಕ್ಲೇಚಾ ಹೇಳಿದ್ದಾರೆ. ಅಪರಾಧಿಗಳ ಪೈಕಿ ಇಬ್ಬರ ಅಪರಾಧ ಹಿನ್ನೆಲೆಯನ್ನು ಸಂಗ್ರಹಿಸಲಾಗಿದೆ ಮತ್ತು ಉಳಿದ ವ್ಯಕ್ತಿಗಳ ಪೂರ್ವಾಪರಗಳ ಬಗ್ಗೆ ಕಂಡುಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಅವರು ವಿವರಿಸಿದ್ದಾರೆ. ಎಲ್ಲ ಆರೋಪಿಗಳು ಮುಸ್ಲಿಮರು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version