Site icon Vistara News

India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ

Narendra Modi And Justin Trudeau

An ant picking up a fight against an elephant; US Taunts Canada On Diplomatic Row With India

ನವದೆಹಲಿ: “ಭಾರತ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ಕೊಡದಿರಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದೇ ಮಾತಿಗೆ ಕುಪಿತಗೊಂಡಿರುವ ಕೆನಡಾದ ಉಪಟಳಗಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಕೆನಡಾದಲ್ಲಿರುವ ಭಾರತದ ರಾಯಭಾರಿಯ ಉಚ್ಚಾಟನೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾ ರಾಯಭಾರಿಯ ಉಚ್ಚಾಟನೆ ಸೇರಿ ಕೆನಡಾ ಕೃತ್ಯಗಳಿಗೆ ಸರಿಯಾದ ಪ್ರತ್ಯುತ್ತರ (India Canada Row) ನೀಡುತ್ತಿದೆ. ಈಗ ಕೆನಡಾದ ಟ್ರಾವೆಲ್‌ ಅಡ್ವೈಸರಿಗೆ ಪ್ರತಿಯಾಗಿ ಭಾರತ ಕೂಡ ಕೆನಡಾದಲ್ಲಿರುವ ಭಾರತೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಟ್ರಾವೆಲ್‌ ಅಡ್ವೈಸರಿ (Travel Advisory) ಹೊರಡಿಸಿದೆ.

“ಕೆನಡಾದಲ್ಲಿ ಭಾರತ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿವೆ. ರಾಜಕೀಯ ಪ್ರೇರಿತ ಅಪರಾಧಗಳು ಮಿತಿಮೀರಿವೆ. ಹಿಂಸಾಚಾರವು ದಿನೇದಿನೆ ಜಾಸ್ತಿಯಾಗುತ್ತಿದೆ. ಅದರಲ್ಲೂ, ಕೆನಡಾದಲ್ಲಿರುವ ಭಾರತೀಯರು ಹಾಗೂ ಭಾರತದ ರಾಜತಾಂತ್ರಿಕ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಹಾಗಾಗಿ ಕೆನಡಾದಲ್ಲಿರುವ ಭಾರತೀಯರು ಕೆನಡಾದಲ್ಲಿರುವ ಹಿಂಸಾತ್ಮಕ ಪ್ರದೇಶಗಳಿಗೆ ಭೇಟಿ ನೀಡಬಾರದು. ಹಾಗೆಯೇ, ಕೆನಡಾಗೆ ತೆರಳುವ ಭಾರತೀಯರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಹಾಗೆಯೇ, ಕೆನಡಾದಲ್ಲಿರುವ ಭಾರತದ ರಾಯಭಾರಿಗಳ ಜತೆ ಸಂಪರ್ಕದಲ್ಲಿರಬೇಕು ಹಾಗೂ ನೋಂದಣಿ ಮಾಡಿಸಿಕೊಳ್ಳಬೇಕು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ಕೆನಡಾ ಅಡ್ವೈಸರಿ ಏನಿತ್ತು?

ಇದಕ್ಕೂ ಮೊದಲು ಭಾರತದಲ್ಲಿರುವ ಕೆನಡಾ ನಾಗರಿಕರಿಗೆ ಕೆನಡಾ ಅಧಿಸೂಚನೆ ಹೊರಡಿಸಿತ್ತು. “ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಿಂಸಾತ್ಮಕ ಪ್ರತಿಭಟನೆಗಳು, ನಾಗರಿಕ ಗಲಭೆ ಹಾಗೂ ಉಗ್ರರ ದಾಳಿಯ ಭೀತಿ ಇದೆ. ಉಗ್ರರು ಹಾಗೂ ಸೈನಿಕರ ಮಧ್ಯೆ ನಿತ್ಯ ಸಂಘರ್ಷಗಳು ನಡೆಯುತ್ತಿವೆ. ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ನಡೆಸುವ ದಾಳಿಯು ನಾಗರಿಕರ ಸಾವಿಗೂ ಕಾರಣವಾಗಿದೆ. ಹಾಗೆಯೇ, ಮಣಿಪುರ ಹಾಗೂ ಅಸ್ಸಾಂನಲ್ಲೂ ತೀವ್ರವಾದಿಗಳ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲೂ ನಾಗರಿಕ ಅಶಾಂತಿ ತಲೆದೋರಿದೆ. ಹಾಗಾಗಿ, ದಾಳಿ, ಹಿಂಸೆಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿರುವ ಕೆನಡಾ ನಾಗರಿಕರು ಜಮ್ಮು-ಕಾಶ್ಮೀರ, ಮಣಿಪುರ ಹಾಗೂ ಅಸ್ಸಾಂಗೆ ತೆರಳಬಾರದು” ಎಂದು ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಅಡ್ವೈಸರಿ ಹೊರಡಿಸಿದೆ.

ಇದನ್ನೂ ಓದಿ: India Canada Row: ಕೆನಡಾದ ಹಿಂದೂಗಳಿಗೆ ಖಲಿಸ್ತಾನ್‌ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಜೀವಬೆದರಿಕೆ

ಕೆಲ ದಿನಗಳ ಹಿಂದಷ್ಟೇ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್‌ ಟ್ರುಡೋ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತಕತೆ ನಡೆಸಿದ್ದರು. ಇದೇ ವೇಳೆ, “ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು” ಎಂದು ಹೇಳಿದ್ದರು. ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಆಗ್ರಹಿಸಿದ್ದರು. ಇದೇ ಕಾರಣಕ್ಕಾಗಿ ಕೆನಡಾ ಸರ್ಕಾರವು ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದೆ ಎಂದು ಹೇಳಲಾಗುತ್ತಿದೆ.

Exit mobile version