ನವ ದೆಹಲಿ: ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ತೆಗೆದುಕೊಳ್ಳುವ ಕೊವಿಡ್ 19 ಲಸಿಕೆ iNCOVACC (BBV154)ಗೆ ಈಗ ಬೆಲೆ ನಿಗದಿಯಾಗಿದೆ. ಈ ಇಂಟ್ರಾನೇಸಲ್ ಲಸಿಕೆಯ ಒಂದು ಡೋಸ್ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (+ ಶೇ.5ರಷ್ಟು ಜಿಎಸ್ಟಿ ಇರಲಿದೆ. ಅಂದರೆ ಒಂದು ಡೋಸ್ಗೆ 840 ರೂ.ಇರಲಿದೆ.) ಇರಲಿದೆ. ಈ ಲಸಿಕೆ ಸದ್ಯ ಡಿಸೆಂಬರ್ 23ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದ್ದು, ಇಲ್ಲಿ ಬೆಲೆ ಒಂದು ಡೋಸ್ಗೆ 325 ರೂಪಾಯಿ ಇರಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎನ್ನಿಸಿರುವ iNCOVACC ನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯು ತಯಾರಿಸಿದೆ. ಈಗಾಗಲೇ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದ 18 ವರ್ಷ ಮೇಲ್ಪಟ್ಟವರು, ಈ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೀಕರಣದ ನಿರ್ವಹಣಾ ವೆಚ್ಚವನ್ನಾಗಿ 150 ರೂಪಾಯಿ ಶುಲ್ಕವನ್ನು ಜನಸಾಮಾನ್ಯರಿಗೆ ವಿಧಿಸಬಹುದಾಗಿದೆ. ಹೀಗೆ ಎಲ್ಲ ಸೇರಿಸಿದರೆ ಈ ಇಂಟ್ರಾನಾಸಲ್ ಕೊವಿಡ್ 19 ಲಸಿಕೆಯ ಒಂದು ಡೋಸ್ ಪಡೆಯಲು ಸುಮಾರು 1000 ರೂಪಾಯಿಯೇ ಖರ್ಚಾಗಬಹುದು.
ಇಡೀ ವಿಶ್ವ ಕೊವಿಡ್ 19 ವಿರುದ್ಧ ಹೋರಾಡುತ್ತಿದ್ದಾಗ ಮೊಟ್ಟಮೊದಲು ಲಸಿಕೆ ತಯಾರು ಮಾಡಿದ್ದು ಭಾರತ. ಆಗ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಭಾರತ್ ಬಯೋಟೆಕ್ ಕಂಪನಿಯೇ ಈಗ ಈ ಇಂಟ್ರಾನಾಸಲ್ ಲಸಿಕೆಯನ್ನು ತಯಾರಿಸಿದೆ. ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಇಂಜೆಕ್ಟ್ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎನ್ನಲಾಗಿದೆ.
ಇದನ್ನೂ ಓದಿ: Coronavirus | ಎಲ್ಲ ರಾಜ್ಯಗಳಲ್ಲೂ ಇಂದು ಅಣಕು ಕಾರ್ಯಾಚರಣೆ, ಏನಿದು ಮಾಕ್ ಡ್ರಿಲ್?