ಕೋವಿಡ್
iNCOVACC | ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ 19 ಲಸಿಕೆಗೆ ದರ ನಿಗದಿ; ಒಂದು ಡೋಸ್ಗೆ 800 ರೂಪಾಯಿ
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ iNCOVACC ಅಥವಾ BBV154 ಲಸಿಕೆಯು ಪಾತ್ರವಾಗಿದೆ. ಭಾರತ್ ಬಯೋಟೆಕ್ ಈ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ.
ನವ ದೆಹಲಿ: ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ತೆಗೆದುಕೊಳ್ಳುವ ಕೊವಿಡ್ 19 ಲಸಿಕೆ iNCOVACC (BBV154)ಗೆ ಈಗ ಬೆಲೆ ನಿಗದಿಯಾಗಿದೆ. ಈ ಇಂಟ್ರಾನೇಸಲ್ ಲಸಿಕೆಯ ಒಂದು ಡೋಸ್ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (+ ಶೇ.5ರಷ್ಟು ಜಿಎಸ್ಟಿ ಇರಲಿದೆ. ಅಂದರೆ ಒಂದು ಡೋಸ್ಗೆ 840 ರೂ.ಇರಲಿದೆ.) ಇರಲಿದೆ. ಈ ಲಸಿಕೆ ಸದ್ಯ ಡಿಸೆಂಬರ್ 23ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದ್ದು, ಇಲ್ಲಿ ಬೆಲೆ ಒಂದು ಡೋಸ್ಗೆ 325 ರೂಪಾಯಿ ಇರಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎನ್ನಿಸಿರುವ iNCOVACC ನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯು ತಯಾರಿಸಿದೆ. ಈಗಾಗಲೇ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದ 18 ವರ್ಷ ಮೇಲ್ಪಟ್ಟವರು, ಈ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೀಕರಣದ ನಿರ್ವಹಣಾ ವೆಚ್ಚವನ್ನಾಗಿ 150 ರೂಪಾಯಿ ಶುಲ್ಕವನ್ನು ಜನಸಾಮಾನ್ಯರಿಗೆ ವಿಧಿಸಬಹುದಾಗಿದೆ. ಹೀಗೆ ಎಲ್ಲ ಸೇರಿಸಿದರೆ ಈ ಇಂಟ್ರಾನಾಸಲ್ ಕೊವಿಡ್ 19 ಲಸಿಕೆಯ ಒಂದು ಡೋಸ್ ಪಡೆಯಲು ಸುಮಾರು 1000 ರೂಪಾಯಿಯೇ ಖರ್ಚಾಗಬಹುದು.
ಇಡೀ ವಿಶ್ವ ಕೊವಿಡ್ 19 ವಿರುದ್ಧ ಹೋರಾಡುತ್ತಿದ್ದಾಗ ಮೊಟ್ಟಮೊದಲು ಲಸಿಕೆ ತಯಾರು ಮಾಡಿದ್ದು ಭಾರತ. ಆಗ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಭಾರತ್ ಬಯೋಟೆಕ್ ಕಂಪನಿಯೇ ಈಗ ಈ ಇಂಟ್ರಾನಾಸಲ್ ಲಸಿಕೆಯನ್ನು ತಯಾರಿಸಿದೆ. ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಇಂಜೆಕ್ಟ್ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎನ್ನಲಾಗಿದೆ.
ಇದನ್ನೂ ಓದಿ: Coronavirus | ಎಲ್ಲ ರಾಜ್ಯಗಳಲ್ಲೂ ಇಂದು ಅಣಕು ಕಾರ್ಯಾಚರಣೆ, ಏನಿದು ಮಾಕ್ ಡ್ರಿಲ್?
ಕರ್ನಾಟಕ
Covid-19 Scam: 8.6 ಕೋಟಿ ಉಳಿತಾಯ ಮಾಡಿದ್ದಾಗಿ ಸುಳ್ಳು ಹೇಳಿದ ಆರೋಗ್ಯ ಇಲಾಖೆ: ಕೋವಿಡ್ ಹಗರಣ ಬೆಳಕಿಗೆ
ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರವು ನಡೆಸಿರುವ ಖರೀದಿ ವ್ಯವಹಾರಗಳನ್ನು ಪ್ರಮುಖವಾಗಿ ಹಿಮಾಚಲ ಪ್ರದೇಶ ಖರೀದಿಸಿರುವ ದರಗಳೊಂದಿಗೆ ಹೋಲಿಕೆ ಮಾಡಿದಾಗ ಹಗರಣ (Covid-19 Scam) ಬೆಳಕಿಗೆ ಬಂದಿದೆ.
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ತುರ್ತು ಅಗತ್ಯವಿದ್ದ ಔಷಧೋಪಕರಣಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Covid-19 Scam) ನಡೆದಿದೆ ಎಂಬ ಸಾಮಾನ್ಯ ಮಾತುಗಳಿಗೆ ಈಗ ಪುಷ್ಠಿ ಸಿಕ್ಕಿದೆ. ರಾಜ್ಯಸರ್ಕಾರಕ್ಕೆ 19 ಕೋಟಿ ರೂ. ನಷ್ಟ ಮಾಡಿದ್ದಷ್ಟೆ ಅಲ್ಲದೆ, 8.6 ಕೋಟಿ ರೂ. ಉಳಿತಾಯ ಮಾಡಿದ್ದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೋವಿಡ್-19 ನಿಯಂತ್ರಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ತನ್ನ 12ನೇ ವರದಿಯನ್ನು ಸಲ್ಲಿಸಿದ್ದರಲ್ಲಿ ಅನೇಕ ಅಂಶಗಳನ್ನು ತಿಳಿಸಲಾಗಿದೆ.
ಕರ್ನಾಟಕ ರಾಜ್ಯವು ಐದು ಸಾವಿರ ಪರೀಕ್ಷೆಯ ರಾಸಾಯನಿಕಗಳನ್ನು ಉಪಕರಣಗಳೊಂದಿಗೆ ಉಚಿತವಾಗಿ ಪಡೆದಿದೆ ಹಾಗೂ ಹಿಮಾಚಲ ಪ್ರದೇಶವು ಕೇವಲ ಒಂದು ಸಾವಿರ ಪರೀಕ್ಷಾ ರಸಾಯನಿಕಗಳನ್ನು ಉಚಿತವಾಗಿ ಪಡೆದಿರುತ್ತದೆಯೆಂದು ಆರೋಗ್ಯ ಇಲಾಖೆ ತಿಳಿಸಿತ್ತು. ಇದರ ಪರಿಣಾಮವಾಗಿ ರಾಜ್ಯಕ್ಕೆ ರೂ. 8.60 ಕೋಟಿ ಉಳಿತಾಯವಾಗಿರುತ್ತದೆಯೆಂದು ಇಲಾಖೆ ಹೇಳಿತ್ತು. ಈ ತಿಳಿಸಿರುವ ಅಂಶವನ್ನು ಹಾಗೂ ಇಲಾಖೆಯು ಸಲ್ಲಿಸಿದ್ದ ಅಪೂರ್ಣ ದಾಖಲೆಗಳನ್ನು ಸಮಿತಿಯ ಪರಿಶೀಲಿಸಿದಾಗ, ರಾಜ್ಯ ಸರ್ಕಾರವು ಪ್ರತಿ ಯೂನಿಟ್‌ಗೆ ರೂ. 2,96,180 ಗಳಂತೆ 1195 ಯೂನಿಟ್‌ಗಳನ್ನು ಖರೀದಿಸಿದ್ದು ಗೊತ್ತಾಗಿದೆ. ಅದೇ ವೈಶಿಷ್ಟ್ಯಯತೆಯ ಉಪಕರಣಗಳನ್ನು ಹಿಮಾಚಲ ಪ್ರದೇಶವು ಕೇವಲ 1,30,000 ರೂ. ಗಳ ದರದಲ್ಲಿ ಖರೀದಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 19.86 ಕೋಟಿ ರೂ. ಮೊತ್ತದಷ್ಟು ಅಧಿಕ ವೆಚ್ಚವಾಗಿದೆ.
ಇಷ್ಟಾಗಿಯೂ, ಖರೀದಿಯಲ್ಲಿ 8.60 ಕೋಟಿ ರೂ. ಉಳಿತಾಯವಾಗಿದೆಯೆಂಬ ಇಲಾಖೆಯ ಉತ್ತರವು ಸಮಿತಿಯನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿದೆಯೆಂದು ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ.
ಕರ್ನಾಟಕ ಸ್ಟೇಟ್ ಡ್ರಗ್ಸ್, ಲಾಜಿಸ್ಟಿಕ್ಸ್ ಅಂಡ್ ವೇರ್‌ಹೌಸಿಂಗ್ ಸೊಸೈಟಿ ಸಂಸ್ಥೆಯು ಖರೀದಿಸಿರುವ ಪಿ.ಪಿ.ಇ. ಕಿಟ್‌ಗಳ ಬಗ್ಗೆ, ಸ್ಯಾನಿಟೈಸರ್‌ಗಳ ಖರೀದಿ ಮತ್ತು ಪೂರೈಕೆ ಬಗ್ಗೆ, ಖರೀದಿಸಿರುವ ವೆಂಟಿಲೇಟರ್‌ಗಳ ಬಗ್ಗೆ, ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಂದ ಗ್ಲೂಕೋಸ್ ಖರೀದಿಸಿರುವ ಬಗ್ಗೆ ವಿಚಾರಣೆ ನಡೆಸಿದೆ. ಸಿರಿಂಜ್ ಉಪಕರಣಗಳ ಖರೀದಿಯಲ್ಲಿ, ಸರ್ಕಾರಕ್ಕಾದ ನಷ್ಟದ ಬಗ್ಗೆ, ಚೀನಾ ಮೂಲದ ಕಂಪನಿಗಳಿಂದ ಖರೀದಿಸಲಾದ ಮಾಸ್ಕ್ಗಳು, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸಲು ಸಮಿತಿ ವತಿಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದ ಮೂಲಕ ಕಳುಹಿಸಿ, ಅವರಿಂದ ಸೂಕ್ತ ಉತ್ತರವನ್ನು ಪಡೆಯಲು ಸಮಿತಿಯು ತೀರ್ಮಾನಿಸಿತು.
ಆದರೆ, ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆಯಲಾಗಿದ್ದ ಪತ್ರಗಳಲ್ಲಿನ ಅಂಶಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾಗಲೀ ಅಥವಾ ಇಲಾಖಾ ಮುಖ್ಯಸ್ಥರಾಗಲೀ ಯಾವುದೇ ಮಾಹಿತಿಯನ್ನು ಸಮಿತಿಗೆ ಸಲ್ಲಿಸಿರುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ, 2021ರಲ್ಲಿ ಪ್ರತಿ ಯೂನಿಟ್ 3-Part Hematology Cell Countsಗೆ 2,96,180 ರೂ. ದರದಲ್ಲಿ 1,195 ಯೂನಿಟ್‌ಗಳನ್ನು ಟೆಂಡರ್ ಮೂಲಕ ಖರೀದಿಸಿತ್ತು. ಆದರೆ, ಅದೇ ಅವಧಿಯಲ್ಲಿ ಸದರಿ ಉಪಕರಣವನ್ನು ಹಿಮಾಚಲ ಪ್ರದೇಶ ರಾಜ್ಯವು ಪ್ರತಿ ಯೂನಿಟ್‌ಗೆ ಕೇವಲ 1,30,000 ರೂ. ವೆಚ್ಚದಲ್ಲಿ ಖರೀದಿಸಿತ್ತು. ಈ ವ್ಯತ್ಯಾಸವು 19,85,85,100 ರೂ. ಅಧಿಕ ವೆಚ್ಚವಾಗಿದೆ.
ಇದನ್ನೂ ಓದಿ: Oral antiviral for Covid-19 : ಕೋವಿಡ್ ಚಿಕಿತ್ಸೆಗೆ ಬಂತು ಮೊದಲ ಮಾತ್ರೆ, ಯಾರು ಬಳಸಬಹುದು?
ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಸಮಿತಿಗೆ ಇಲಾಖೆಯು ಸಲ್ಲಿಸಿರುವ ಉತ್ತರದಲ್ಲಿ ಪ್ರಮುಖ ದಾಖಲೆಯಾದ ಗುಣ ವೈಶಿಷ್ಠಯತೆ ಬೇಡಿಕೆ ಪಟ್ಟಿಯನ್ನು ಸಲ್ಲಿಸದಿರುವುದನ್ನು ಗಮನಿಸಿರುತ್ತದೆ. ಖರೀದಿಯನ್ನು ಮೂಲ ಬೇಡಿಕೆ ಆಧಾರದ ಮೇಲೆ ಮಾಡಲಾಗಿದೆಯೆಂಬುದನ್ನು ಖಾತ್ರಿ ಮಾಡಿಕೊಳ್ಳಲು ಅವಶ್ಯವಿರುವ ದಾಖಲೆಯನ್ನು ಇಲಾಖೆಯು ಸಲ್ಲಿಸದಿರುವುದರಿಂದ ಖರೀದಿಯ ಪಾರದರ್ಶಕತೆ ಬಗ್ಗೆ ಸಮಿತಿಯು ಸಂಶಯ ವ್ಯಕ್ತ ಪಡಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಿಮಾಚಲ ಪ್ರದೇಶ ರಾಜ್ಯವು 0.5 ಕೆ.ವಿ.ಎ. 15 ನಿಮಿಷಗಳ ಬ್ಯಾಕಪ್ ಸಾಮರ್ಥ್ಯದ ಆಫ್ ಲೈನ್ ಯು.ಪಿ.ಎಸ್.ಅನ್ನು ಖರೀದಿಸಿರುತ್ತದೆ. ಕರ್ನಾಟಕ ರಾಜ್ಯವು 1.0 ಕೆ.ವಿ.ಎ. 60 ನಿಮಿಷಗಳ ಬ್ಯಾಕಪ್ ಸಾಮರ್ಥ್ಯದ ಆನ್‌ಲೈನ್ ಯು.ಪಿ.ಎಸ್. ಖರೀದಿಸಿತ್ತಾದರೂ, ಆನ್‌ಲೈನ್ ಯುಪಿಎಸ್ ವಿತ್ 1.0 ಕೆ.ವಿ.ಎ. ಸಾಮರ್ಥ್ಯದ ಉಪಕರಣದ ವಾಸ್ತವಿಕ ಅವಶ್ಯಕತೆಯನ್ನು ಇಲಾಖೆಯು ಖಚಿತ ಪಡಿಸಿಕೊಂಡಿಲ್ಲ. ಆನ್‌ಲೈನ್ ಯು.ಪಿ.ಎಸ್. ಯಾವಾಗಲೂ ಚಾಲನೆಯಲ್ಲಿರುವುದರಿಂದ, ಅದರ ಜೀವನ ಚಕ್ರ ಆಫ್ ಲೈನ್ ಯು.ಪಿ.ಎಸ್.ಗೆ ತುಲನೆ ಮಾಡಿದರೆ, ಬಹಳ ಕಡಿಮೆ ಅವಧಿಯಾಗಿದ್ದು, ವಾರಂಟಿ ಅವಧಿ ಮುಗಿದ ನಂತರ ಹೆಚ್ಚುವರಿ ಖರ್ಚು-ವೆಚ್ಚಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಕೋವಿಡ್ ಸೋಂಕಿತರಲ್ಲಿ ಕಂಡುಬರುವ ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಆಂಪೋಟೆರಿಸಿನ್‌ನ ವಯಲ್ಸ್ ಖರೀದಿಗಾಗಿ ಮೆ|| ಭಾರತ್ ಸೆರಮ್ಸ್ ಅಂಡ್ ವ್ಯಾಕ್ಸಿನ್ಸ್ ಲಿ., ಸಂಸ್ಥೆಯು ಪ್ರತಿ ವಯಲ್ಸ್‌ಗೆ ಸಲ್ಲಿಸಿದ್ದ 5787.60 ರೂ. ಕನಿಷ್ಟ ದರವಾಗಿದ್ದರಿಂದ, 50,000 ವಯಲ್ಸ್‌ಗಳನ್ನು ಸಂಸ್ಥೆಯಿಂದ ಖರೀದಿಸಲು ಆದೇಶ ನೀಡಲಾಗಿತ್ತೆಂದು ಇಲಾಖೆಯು ತಿಳಿಸಿದೆ. ಆದರೆ, ಎರಡನೇ ಕನಿಷ್ಟ ಬಿಡ್‌ದಾರರಾಗಿದ್ದ ಮೆ|| ಮೈಲಾನ್ ಫಾರ್ಮಾಸಿಟಿಕಲ್ ಸಂಸ್ಥೆಯಿಂದ 6247.50 ರೂ. 25000 ವಯಲ್‌ಗಳನ್ನು ಖರೀದಿಸಿದ್ದರಿಂದ ರೂ. 1.14 ಕೋಟಿ ಅಧಿಕ ವೆಚ್ಚವಾಗಿದೆ ಎಂದು ಸಮಿತಿ ಹೇಳಿದೆ.
ಆರೋಗ್ಯ
Covid-19 cases: ಪಕ್ಕದ ರಾಜ್ಯದಲ್ಲಿ ಮಿತಿಮೀರುತ್ತಿದೆ ಕೊರೊನಾ ಪ್ರಸರಣ; ಅಲ್ಲಿನ್ನು ಗರ್ಭಿಣಿಯರು, ವೃದ್ಧರಿಗೆ ಮಾಸ್ಕ್ ಕಡ್ಡಾಯ
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಹೊಸ ಅಲೆ ಉದ್ಭವವಾಗುವ ಲಕ್ಷಣ ಗೋಚರಿಸುತ್ತಿದೆ. ದೇಶದಲ್ಲಿ ಶನಿವಾರ 6 ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಶೇ.3ಕ್ಕಿಂತಲೂ ಜಾಸ್ತಿಯಾಗಿದೆ.
ದೇಶದಲ್ಲಿ ಕೊರೊನಾ ಮಿತಿಮೀರುತ್ತಿದೆ. ಶನಿವಾರ 6155 ಕೊರೊನಾ ಕೇಸ್ಗಳು (Covid-19 cases) ಪತ್ತೆಯಾಗಿದ್ದವು. ಅದರಲ್ಲೂ ಈ ಕೇರಳದಲ್ಲಿ ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಶನಿವಾರ 1801 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆ ರಾಜ್ಯದಲ್ಲಿ ಕೊರೊನಾ ನಿರ್ಬಂಧಕ್ಕಾಗಿ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈಗಾಗಲೇ ಕೊರೊನಾ ಸೋಂಕಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಹಾಗೇ, ಕೇರಳದಲ್ಲಿ ಇನ್ನುಮುಂದೆ ವೃದ್ಧರು, ಗರ್ಭಿಣಿಯರು ಮತ್ತು ಹೃದಯ ಸಮಸ್ಯೆ, ಪಾರ್ಶ್ವವಾಯು, ಟೈಪ್ 2 ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾಸ್ಕ್ ಕಡ್ಡಾಯ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮನೆಯಲ್ಲಿ ಗರ್ಭಿಣಿಯರು, ವೃದ್ಧರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರು ಇದ್ದರೆ, ಆ ಮನೆಯಲ್ಲಿರುವ ಇತರ ಸದಸ್ಯರೂ ಸಾರ್ವಜನಿಕ ಪ್ರದೇಶಕ್ಕೆ ಬರುವಾಗ ಮಾಸ್ಕ್ ಧರಿಸಿಯೇ ಬನ್ನಿ’ ಎಂದು ಹೇಳಿದ್ದಾರೆ.
ಕೇರಳದಲ್ಲಿ ಎಲ್ಲ ಕಡೆಗಳಲ್ಲೂ ಕೊರೊನಾ ಹೆಚ್ಚುತ್ತಿದ್ದರೂ ಕೂಡ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇನ್ನು ಇನ್ನು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ನಿಧಾನವಾಗಿ ಏರಿಕೆಯಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೊವಿಡ್ 19 ತಪಾಸಣೆ ಹೆಚ್ಚಿಸಲಾಗಿದೆ. ಸದ್ಯದ ಮಟ್ಟಿಗೆ ಒಟ್ಟಾರೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ 0.8 ಪರ್ಸೆಂಟ್ ಜನರಿಗೆ ಮಾತ್ರ ಆಕ್ಸಿಜನ್ ಬೆಡ್ಗಳು ಬೇಕಾಗುತ್ತಿವೆ ಮತ್ತು ಶೇ.1.2 ಸೋಂಕಿತರು ಐಸಿಯು ಬೆಡ್ಗೆ ದಾಖಲಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೇರಳದಲ್ಲಿ ಕೊರೊನಾದಿಂದ ಸಾಯುತ್ತಿರುವವರಲ್ಲಿ ಶೇ.85ರಷ್ಟು ಮಂದಿ 60ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಇನ್ನು ಶೇ.15ರಷ್ಟು ಸೋಂಕಿತರು, ಅದಾಗಲೇ ಬೇರೆ ಕೆಲವು ಗಂಭೀರ ಕಾಯಿಲೆ ಇರುವವರು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಚೀನಾದಲ್ಲಿ ಶುರುವಾದ ಮೇಲೆ ಮೊದಲು ಕಾಲಿಟ್ಟಿದ್ದೇ ಕೇರಳಕ್ಕೆ. ಅಲ್ಲಿಂದಲೇ ಉಳಿದ ರಾಜ್ಯಗಳಿಗೂ ಹಬ್ಬಿದೆ. ಕಳೆದ ಮೂರೂ ಅಲೆಗಳಲ್ಲಿ ಕೂಡ ಕೇರಳದಲ್ಲಿ ಗರಿಷ್ಠ ಮಟ್ಟದ ಸೋಂಕಿತರು ಇದ್ದರು. ಇದೀಗ ಕೊರೊನಾದ ಹೊಸ ಅಲೆ ಶುರುವಾಗುವ ಲಕ್ಷಣಗಳು ಕಾಣುತ್ತಿದ್ದು, ಕೇರಳ, ಮುಂಬಯಿ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಪ್ರತಿದಿನ ಹೆಚ್ಚೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಇನ್ನು ಪುದುಚೇರಿ ಮತ್ತು ಹರ್ಯಾಣಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Covid 19 Updates: ಕೋವಿಡ್ ಪರಿಸ್ಥಿತಿ ಎದುರಿಸಲು ಏ.10, 11ರಂದು ಆಸ್ಪತ್ರೆಗಳ ಅಣಕು ಪ್ರದರ್ಶನಕ್ಕೆ ಕೇಂದ್ರ ಸೂಚನೆ
ಆರೋಗ್ಯ
Covid 19 Updates: ದೇಶದಲ್ಲಿ ಇಂದು 6 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆ; ಆರೋಗ್ಯ ಸಚಿವರಿಂದ ಉನ್ನತ ಮಟ್ಟದ ಸಭೆ
ದೇಶದಲ್ಲಿ ಪ್ರತಿದಿನ ದಾಖಲಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ 1000 ಗಳಷ್ಟು ಹೆಚ್ಚುತ್ತಿದೆ. ಹೀಗಾಗಿ ದೇಶದಲ್ಲಿನ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಸಲು ಇಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿನ (Coronavirus) ಸನ್ನಿವೇಶ ಕೈಮೀರುತ್ತಿರುವಂತೆ ಭಾಸವಾಗುತ್ತಿದೆ. ಕಳೆದ 24ಗಂಟೆಯಲ್ಲಿ 6050 ಕೋವಿಡ್ ಕೇಸ್ಗಳು ದಾಖಲಾಗಿವೆ. ನಿನ್ನೆ ಗುರುವಾರ 5,333 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆಗಿಂತಲೂ ಇಂದು ಕೋವಿಡ್ 19 ಸೋಂಕಿತರ (Covid 19 Updates) ಸಂಖ್ಯೆಯಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 28,303. ಹಾಗೇ, 24ಗಂಟೆಯಲ್ಲಿ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇಲ್ಲಿಯವರೆಗೆ ಸೋಂಕಿನಿಂದ ಜೀವ ಕಳೆದುಕೊಂಡವರು 5,30,943 ಮಂದಿ.
ದೇಶದಲ್ಲಿ ಕೊರೊನಾ ಮತ್ತೊಂದು ಅಲೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಗ ಸೋಂಕು ಹರಡುತ್ತಿದ್ದರೂ ಅಷ್ಟೊಂದು ಮಾರಣಾಂತಿಕವಾಗಿಲ್ಲ. ಕೋವಿಡ್ 19ನಿಂದ ಸಾವನ್ನಪ್ಪುವವರ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಹೇಳಲಾಗಿದ್ದರೂ, ಹರಡುವಿಕೆ ಜೋರಾಗಿಯೇ ಇದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.3.39ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ ಶೇ.3.0 ಇದೆ. ಜತೆಜತೆಗೆ ಲಸಿಕೀಕರಣ ಕೂಡ ನಡೆಯುತ್ತಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಕೋವಿಡ್ 19 ಲಸಿಕೆ ಸಿಗುವಂತೆ ಮಾಡುವುದೇ ಕೇಂದ್ರದ ಸಂಕಲ್ಪವಾಗಿದೆ.
ಇಂದು ಉನ್ನತ ಮಟ್ಟದ ಸಭೆ
ದೇಶದಲ್ಲಿ ಪ್ರತಿದಿನ ದಾಖಲಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ 1000 ಗಳಷ್ಟು ಹೆಚ್ಚುತ್ತಿದೆ. ಹೀಗಾಗಿ ದೇಶದಲ್ಲಿನ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಸಲು ಇಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಟ್ಟಿಗೆ ವರ್ಚ್ಯುವಲ್ ಸಭೆ ನಡೆಸಲಿದ್ದಾರೆ. ‘ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇಂದು ಆರೋಗ್ಯ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ, ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪರಿಸ್ಥಿತಿಯ ಬಗ್ಗೆ ವರದಿ ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಈಗಾಗಲೇ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: Covid 19 Updates: ಇಂದು 5000ಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲು; ಐದು ತಿಂಗಳಲ್ಲೇ ಗರಿಷ್ಠ ಸಂಖ್ಯೆ ಇದು!
ಮಹಾರಾಷ್ಟ್ರ-ದೆಹಲಿಯಲ್ಲಿ ಕೊರೊನಾ ಹೆಚ್ಚಳ
ಇಡೀ ದೇಶದಲ್ಲಿ ಕೊರೊನಾ ವೈರಸ್ ಮಿತಿಮೀರುತ್ತಿದ್ದು, ಒಟ್ಟಾರೆ ಹೆಚ್ಚಳದಲ್ಲಿ ಬಹುಪಾಲು ಮಹಾರಾಷ್ಟ್ರ ಮತ್ತು ದೆಹಲಿಯಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಯಲ್ಲಿ 803 ಕೊರೊನಾ ಕೇಸ್ಗಳು ಪತ್ತೆಯಾಗಿದ್ದಾರೆ. ಹಾಗೇ, ಮೂವರು ಮೃತಪಟ್ಟಿದ್ದಾರೆ. ಇದರಲ್ಲಿ 216 ಸೋಂಕಿತರು ಮುಂಬಯಿಯಲ್ಲಿ ಪತ್ತೆಯಾಗಿದ್ದಾರೆ. ಅದು ಬಿಟ್ಟರೆ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 606 ಕೊರೊನಾ ಕೇಸ್ಗಳು ದಾಖಲಾಗಿವೆ. ಕಳೆದ ವರ್ಷದ ಆಗಸ್ಟ್ನಲ್ಲಿ ಬಿಟ್ಟರೆ, ದೆಹಲಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಸೋಂಕಿತರು ಇಂದಿನವರೆಗೆ ಪತ್ತೆಯಾಗಿರಲಿಲ್ಲ. ಅದರಾಚೆ, ಉತ್ತರ ಪ್ರದೇಶ, ಕೇರಳ, ಕರ್ನಾಟಕಗಳಲ್ಲೂ ಕೊರೊನಾ ಪ್ರಮಾಣ ಜಾಸ್ತಿ ಇದೆ.
ಉದ್ಯೋಗ
KEA Recruitment 2023 : ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಸ್ಕ್ ಧರಿಸುವಂತಿಲ್ಲ!
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Recruitment 2023), ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಾಸ್ಕ್ ಧರಿಸಲು ಕೂಡ ಅವಕಾಶ ನೀಡಿಲ್ಲ.
ಬೆಂಗಳೂರು: ದೇಶದಲ್ಲಿ ಕೊರೊನಾ ಭೀತಿ ಇನ್ನೂ ದೂರವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ, ಒಳಾಂಗಣದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶಾಲೆ-ಕಾಲೇಜುಗಳಲ್ಲಿಯೂ ಮಾಸ್ಕ್ ಧರಿಸಬೇಕೆಂದು ಸೂಚಿಸಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನೇಮಕಗಳಿಗೆ (KEA Recruitment 2023) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸುವಂತಿಲ್ಲ ಎಂದು ಸೂಚಿಸಿದೆ!
ಹೌದು, ಕೆಇಎ ಹೀಗೆ ಮಾಸ್ಕ್ ಧರಿಸಬೇಡಿ ಎಂದು ಸೂಚಿಸಲು ಇತ್ತೀಚೆಗೆ ಹೈಟೆಕ್ ಆಗಿ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದೇ ಕಾರಣ. ಕೆಇಎ ಜನವರಿ 29ರಿಂದ ವಿವಿಧ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಡೆಸ್‌ಕೋಡ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮೊದಲಿಗೇ “ಅಭ್ಯರ್ಥಿಗಳು ಯಾವುದೇ ಮಾಸ್ಕ್ ಅನ್ನು ಧರಿಸುವಂತಿಲ್ಲʼʼ ಎಂದು ಸ್ಪಷ್ಟವಾಗಿ ಸೂಚಿಸಿದೆ.
ಪಿಎಸ್‌ಐ, ಕೆಪಿಟಿಸಿಎಲ್ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲ ಅಭ್ಯರ್ಥಿಗಳು ಬ್ಲೂಟೂತ್ ಇತ್ಯಾದಿ ಆಧುನಿಕ ಉಪಕರಣಗಳ್ನು ಬಳಸಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆಇಎ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಇದರ ಭಾಗವಾಗಿ ಮಾಸ್ಕ್ ಧರಿಸಲೂ ಅವಕಾಶ ನೀಡಿಲ್ಲ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಕ್ಕೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಕ್ಕೆ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ.
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಡ್ರೆಸ್‌ಗಳನ್ನು ಧರಿಸಬಾರದು ಎಂದು ಸೂಚಿಸಲಾಗಿದೆ. ಪೂರ್ಣತೋಳಿನ ಬಟ್ಟೆಗಳನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ.
ಎತ್ತರದ ಹಿಮ್ಮಡಿಯ ಬೂಟುಗಳು ಮತ್ತು ಅಡಿಭಾಗ ಹೊಂದಿರುವ ಬೂಟುಗಳನ್ನು ಹಾಕಬಾರದು. ಸ್ಯಾಂಡಲ್, ಚಪ್ಪಲಿಗಳನ್ನೇ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿಸಲಾಗಿದೆ. ಕಿವಿಯೋಲೆಗಳು, ಉಂಗುರಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು, ಬಳೆಗಳು ಇಂತಹ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ಕೂಡ ನಿಷೇಧಿಸಲಾಗಿದ್ದು, ಹಿಜಾಬ್, ಬುರ್ಖಾ ಧರಿಸಿ ಬರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪುರುಷ ಅಭ್ಯರ್ಥಿಗಳು ಕೂಡ ಅರ್ಧ ತೋಳಿನ ಶರ್ಟ್‌ಗಳನ್ನೇ ಧರಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ ಜಿಪ್ ಇರುವ ಪಾಕೆಟ್‌ಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕುರ್ತಾ ಪೈಜಾಮವನ್ನು ಹಾಕಿಕೊಂಡು ಬರುವಂತಿಲ್ಲ. ಯಾವುದೇ ಲೋಹದ ಆಭರಣಗಳನ್ನು ಧರಿಸಿಕೊಂಡು ಬರುವಂತಿಲ್ಲ. ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕೆಇಎ ತಿಳಿಸಿದೆ.
ಡ್ರೆಸ್‌ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂಟೂತ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.
ಯಾವುದೇ ರೂಪದಲ್ಲಿ ಆಹಾರ ಪದಾರ್ಥಗಳು-ಪ್ಯಾಕ್ ಮಾಡಲಾದ ಅಥವಾ ಅನ್‌ಪ್ಯಾಕ್ ಆಹಾರ ಪದಾರ್ಥಗಳನ್ನು ಸಹ ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದಾದರೂ ಬಾಟಲಿ ಪಾರದರ್ಶಕವಾಗಿರಬೇಕು. ಅದಕ್ಕೆ ಯಾವುದೇ ಲೇಬಲ್ ಇರಬಾರದು ಎಂದು ಸೂಚಿಸಲಾಗಿದೆ.
ಪೆನ್ಸಿಲ್, ಪೇಪರ್, ಎರೇಸರ್, ಮಾಪಕಗಳು, ಜ್ಯಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರಗೊಳಗೆ ಒಯ್ಯುವುದನ್ನು ನಿಷೇಧಿಸಲಾಗಿದೆ. ವ್ಯಾಲೆಟ್‌ಗಳು, ಗಾಗಲ್ಸ್, ಬೆಲ್ಸ್‌ಗಳು, ಕ್ಯಾಪ್‌ಗಳು, ಪರಿಕರಗಳು, ಕ್ಯಾಮೆರಾ ಮತ್ತು ಆಭರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಯ್ಯಲು ಅನುಮತಿಸಲಾಗುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | KEA Recruitment 2023 : ಕೆಇಎನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ, ಪ್ರವೇಶ ಪತ್ರ ಬಿಡುಗಡೆ
-
ವಿದೇಶ18 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ16 hours ago
PSI Scam : ಪಿಎಸ್‌ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ11 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ12 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ18 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ16 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ8 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ