Site icon Vistara News

India Canada Row: ಮೆತ್ತಗಾದ ಜಸ್ಟಿನ್‌ ಟ್ರುಡೋ; ಭಾರತ ಅಭಿವೃದ್ಧಿ ಪ್ರಧಾನ ದೇಶ ಎಂದು ಹೇಳಿಕೆ

justin trudeau and narendra modi

ಒಟ್ಟಾವ: ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹಲವು ಆರೋಪಗಳನ್ನು ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಈಗ ಮೆತ್ತಗಾದಂತೆ ಕಾಣುತ್ತಿದೆ. “ಭಾರತವು ಅಭಿವೃದ್ಧಿ ಪ್ರಧಾನ ದೇಶವಾಗಿದೆ. ನಾವು ಯಾವುದೇ ಕಾರಣಕ್ಕೂ ಭಾರತವನ್ನು (India Canada Row) ಪ್ರಚೋದಿಸುವ ಪ್ರಯತ್ನ ಮಾಡುವುದಿಲ್ಲ” ಎಂದು ಜಸ್ಟಿನ್‌ ಟ್ರುಡೋ (Justin Trudeau) ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದ ಜಸ್ಟಿನ್‌ ಟ್ರುಡೋ ಈಗ ಉಲ್ಟಾ ಹೊಡೆದಿದ್ದಾರೆ. “ಭಾರತವು ಅಭಿವೃದ್ಧಿ ಪ್ರಧಾನ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ದೇಶದೊಂದಿಗೆ ನಾವು ಜತೆಗೂಡಿ ಪ್ರಾದೇಶಿಕ ಹಾಗೂ ಜಾಗತಿಕ ಏಳಿಗೆ ದಿಸೆಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಹಾಗಾಗಿ, ನಾವು ಪ್ರಚೋದನೆ ನೀಡುವ ಹಾಗೂ ಯಾವುದೇ ಸಮಸ್ಯೆ ಸೃಷ್ಟಿಸುವ ಪ್ರಯತ್ನ ಮಾಡುವುದಿಲ್ಲ” ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಜಸ್ಟಿನ್‌ ಟ್ರುಡೋ ಹೇಳಿದ್ದಾರೆ.

ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: India Canada Row: ಖಲಿಸ್ತಾನಿ ಬೆದರಿಕೆಗೆ ಹಿಂದೂಗಳು ಹೆದರಲ್ಲ ಎಂದ ತುಮಕೂರು ಮೂಲದ ಕೆನಡಾ ಸಂಸದ ಆರ್ಯ

ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟನೆಗೊಳಿಸಿದ ಬಳಿಕ ಭಾರತವೂ ಹಲವು ಕ್ರಮಗಳ ಮೂಲಕ ತಿರುಗೇಟು ನೀಡಿದೆ. ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನು ಉಚ್ಚಾಟನೆ ಮಾಡುವ ಜತೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವನ್ನೂ ಭಾರತ ಸ್ಥಗಿತಗೊಳಿಸಿದೆ. ಇನ್ನು ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದಿದೆ. ಮತ್ತೊಂದೆಡೆ, ಕೆನಡಾ ಆರೋಪ ಮಾಡುವ ಬದಲು ಸಾಕ್ಷ್ಯ ಒದಗಿಸಲಿ ಎಂದು ಭಾರತ ಪ್ರತ್ಯುತ್ತರ ಕೊಟ್ಟಿದೆ.

Exit mobile version