Site icon Vistara News

MQ-9B Drones: ಅಮೆರಿಕದ ಅತ್ಯಾಧುನಿಕ ಎಂಕ್ಯೂ-9ಬಿ ಡ್ರೋನ್‌ ಖರೀದಿಗೆ ಒಪ್ಪಿಗೆ, ಬಂತು ಭಾರತೀಯ ಸೇನೆಗೆ ಭೀಮ ಬಲ

MQ-9B Drones

ನವದೆಹಲಿ: ಅಮೆರಿಕದಿಂದ (America) 31 ಎಂಕ್ಯೂ-9ಬಿ ಶಸ್ತ್ರಸಜ್ಜಿತ ಡ್ರೋನ್‌ಗಳ (MQ-9B armed drones) ಖರೀದಿಗೆ ಭಾರತೀಯ (India) ರಕ್ಷಣಾ ಇಲಾಖೆಯು ತನ್ನ ಒಪ್ಪಿಗೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ (America Visit) ನೀಡಲಿದ್ದು, ಆ ವೇಳೆ ಈ ಕುರಿತು ಅಧಿಕೃತ ಘೋಷಣೆಯಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (DAC) ಸಭೆಯಲ್ಲಿ ಜನರಲ್ ಅಟಾಮಿಕ್ಸ್ ತಯಾರಿಸಿದ ಡ್ರೋನ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಭಾರತ ಖರೀದಿಸಲು ಉದ್ದೇಶಿಸಿರುವ ಡ್ರೋನ್‌ಗಳು 27 ಗಂಟೆಗಳಿಗಿಂತಲೂ ಅಧಿಕ ಕಾಲ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೇ 50 ಸಾವಿರ ಅಡಿಗಳ ಎತ್ತರ ಹಾರಾಟ ಮಾಡಬಲ್ಲವು. ಈ ಡ್ರೋನ್‌ಗಳ ಖರೀದಿಗೆ 3 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯವನ್ನು ನೀಡಲಾಗುತ್ತಿದೆ. ಸದ್ಯ ಖರೀದಿ ಮಾಡಲಾಗುವ ಡ್ರೋನ್‌ಗಳ ಪೈಕಿ 15 ಡ್ರೋನ್‌ಗಳನ್ನು ನೌಕಾ ಪಡೆಗೆ ಮತ್ತು ಭೂಸೇನೆ ಹಾಗೂ ವಾಯು ಪಡೆಗೆ ತಲಾ 8 ಡ್ರೋನ್‌ಗಳನ್ನು ನೀಡಲಾಗುತ್ತಿದೆ.

ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ, ಜೂನ್ 22ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ಡ್ರೋನ್ ಖರೀದಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಬೈಡೆನ್ ಅವರು ಆಯೋಜಿಸಿದ ಮೂರನೇ ಭೇಟಿಯಾಗಿದೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಇತರ ಕ್ಷೇತ್ರಗಳಲ್ಲಿ ಸಹಯೋಗದಲ್ಲಿ ಪ್ರಗತಿಗೆ ಕಾರಣವಾಗಲು ಉಭಯ ನಾಯಕರ ನಡುವಿನ ಮಾತುಕತೆಗಳನ್ನು ಎರಡೂ ಕಡೆಯವರು ಎದುರು ನೋಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: United Nations : ಡ್ರೋನ್​ ಮೂಲಕ ಭಾರತಕ್ಕೆ ಮಾರಕಾಸ್ತ್ರ ರವಾನಿಸುತ್ತಿದೆ ಪಾಕಿಸ್ತಾನ; ವಿಶ್ವ ಸಂಸ್ಥೆಯಲ್ಲಿ ಭಾರತದ ಆರೋಪ

ಈ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಕಳೆದ ಎಂಟು ವರ್ಷಗಳಿಂದ ಮಾತುಕತೆಯಲ್ಲಿ ನಿರತವಾಗಿದ್ದವು. ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಈ ಡ್ರೋನ್‌ಗಳು ಅಗತ್ಯವಾಗಿವೆ. ಸದ್ಯ ಭಾರತೀಯ ನೌಕಾ ಪಡೆಯಲು ಗುತ್ತಿಗೆ ಆಧಾರದ ಮೇಲೆ 2020ರಿಂದ ಅಮೆರಿಕ ಎರಡು ಎಂಕ್ಯೂ-9 ಡ್ರೋನ್‌ಗಳನ್ನು ಬಳಸುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version