ನವದೆಹಲಿ: ದೇಶದಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಕ್ರಾಂತಿ ಮಾಡುವ ಜತೆಗೆ ಏಕೀಕೃತ ಪಾವತಿ ವ್ಯವಸ್ಥೆಯು (UPI) ವಿದೇಶಗಳಿಗೂ ಲಗ್ಗೆ ಇಟ್ಟಿದೆ. ಜಗತ್ತಿನ ಹಲವು ರಾಷ್ಟ್ರಗಳು ಯುಪಿಐಅನ್ನು ಅಳವಡಿಸಿಕೊಂಡಿವೆ. ಅಷ್ಟೇ ಅಲ್ಲ, ಯುಪಿಐ ಹಾಗೂ ತಮ್ಮ ದೇಶದ ಆನ್‌ಲೈನ್ ಪಾವತಿ ವ್ಯವಸ್ಥೆ ಜತೆ ಲಿಂಕ್ ಮಾಡಿಕೊಂಡಿವೆ. ಇದರ ಬೆನ್ನಲ್ಲೇ, ಭಾರತದ ಯುಪಿಐ ಹಾಗೂ ಶ್ರೀಲಂಕಾದ ಲಂಕಾ ಪೇ ಶೀಘ್ರದಲ್ಲೇ ಲಿಂಕ್ ಆಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Modi On UPI) ತಿಳಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ಸಹಕಾರದಲ್ಲಿ ಹಲವು ಯೋಜನೆಗಳಿಗೆ ವಿಡಿಯೊ ಮೆಸೇಜ್ ಮೂಲಕ ಚಾಲನೆ ನೀಡಿದ ಮೋದಿ, ಇದೇ ವೇಳೆ ಯುಪಿಐ ಹಾಗೂ ಲಂಕಾ ಪೇ ಲಿಂಕ್ ಕುರಿತು ಘೋಷಣೆ ಮಾಡಿದರು. “ಭಾರತ ಹಾಗೂ ಶ್ರೀಲಂಕಾ ಫಿನ್‌ಟೆಕ್ (ಫೈನಾನ್ಶಿಯಲ್ ಟೆಕ್ನಾಲಜಿ), ಇಂಧನ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಂಬಂಧ ಹೊಂದಿದೆ. ಶೀಘ್ರದಲ್ಲಿಯೇ ಭಾರತದ ಯುಪಿಐ ಹಾಗೂ ಶ್ರೀಲಂಕಾದ ಲಂಕಾ ಪೇಗಳನ್ನು ಲಿಂಕ್ ಮಾಡಲಾಗುತ್ತದೆ. ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ” ಎಂದು ಘೋಷಿಸಿದ್ದಾರೆ.
Ferry services between India and Sri Lanka will enhance connectivity, promote trade and reinforce the longstanding bonds between our nations. https://t.co/VH6O0Bc4sa
— Narendra Modi (@narendramodi) October 14, 2023
ಕೇಂದ್ರ ಸರ್ಕಾರವು ದೇಶದಲ್ಲಿ ಆನ್‌ಲೈನ್ ವಹಿವಾಟು ಏಳಿಗೆಗಾಗಿ ಯುಪಿಐ ವ್ಯವಸ್ಥೆ ಜಾರಿಗೆ ತಂದಿದೆ. ಇದರ ತಂತ್ರಜ್ಞಾನದ ಕುರಿತು ಕೂಡ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿವೆ. ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಯುಪಿಐ ಮೂಲಕ ಒಂದು ಸಾವಿರ ಕೋಟಿಗಿಂತ ಅಧಿಕ ವಹಿವಾಟುಗಳು ಆಗಿವೆ.
ಯುಪಿಐ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ
ಯುಪಿಐ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಸುಧಾರಣೆ ಮಾಡಿದೆ. ನಿಯರ್-ಫೀಲ್ಡ್ ಕಮ್ಯುನಿಕೇಷನ್ (Near-Field Communication-NFC) ತಂತ್ರಜ್ಞಾನದ ಮೂಲಕ ಗ್ರಾಹಕರು ಆಫ್‌ಲೈನ್‌ನಲ್ಲಿದ್ದಾಗಲೂ ಹಣ ಪಾವತಿ ಮಾಡಬಹುದಾಗಿದೆ. ಯಾವುದೇ ಮಳಿಗೆ, ಅಂಗಡಿಗಳಲ್ಲಿ ಸ್ಮಾರ್ಟ್‌ಫೋನ್ ಟ್ಯಾಪ್ ಮಾಡಿ ಪಾಯಿಂಟ್-ಆಫ್-ಸೇಲ್ ಮಷೀನ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಇದರಿಂದ ಆಫ್‌ಲೈನ್ ಜತೆಗೆ ಕ್ಷಿಪ್ರವಾಗಿ ಹಾಗೂ ಸುರಕ್ಷಿತವಾಗಿ ಹಣ ಪಾವತಿ ಸಾಧ್ಯವಾಗಲಿದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: UPI Payment: ತಪ್ಪು ಯುಪಿಐ ವಿಳಾಸಕ್ಕೆ ಹಣ ಪಾವತಿಸಿದಿರಾ? ಅದನ್ನು ಮರಳಿ ಪಡೆಯೋದು ಹೇಗೆ?
ಈಗ ಯಾವ ದೇಶದಲ್ಲಿದೆ ಯುಪಿಐ?
ಜಗತ್ತಿನ ಹತ್ತಾರು ದೇಶಗಳು ಈಗಾಗಲೇ ಯುಪಿಐ ಅಳವಡಿಸಿಕೊಂಡಿವೆ. ಸಿಂಗಾಪುರ, ಯುಎಇ, ಸೌದಿ ಅರೇಬಿಯಾ, ಮಲೇಷ್ಯಾ, ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಟ್ಜರ್‌ಲ್ಯಾಂಡ್ ಸೇರಿ ಹಲವು ರಾಷ್ಟ್ರಗಳಲ್ಲಿ ಯುಪಿಐ ಜಾರಿಯಲ್ಲಿದೆ. ಆಯಾ ದೇಶಗಳ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಜತೆ ಯುಪಿಐ ಕೈಜೋಡಿಸಿದ್ದು, ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ.