ಕೀವ್/ನವದೆಹಲಿ: ಕಳೆದ ಫೆಬ್ರವರಿಯಿಂದಲೂ ಉಕ್ರೇನ್ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ರಷ್ಯಾ ಈಗ ಮತ್ತೆ ತನ್ನ ಆಕ್ರಮಣವನ್ನು ದುಪ್ಪಟ್ಟುಗೊಳಿಸಿದೆ. ರಾಜಧಾನಿ ಕೀವ್ ಸೇರಿ ಪ್ರಮುಖ ನಗರಗಳ ಮೇಲೆ ಸತತವಾಗಿ ಕ್ಷಿಪಣಿಗಳ ಸುರಿಮಳೆಗೈಯುತ್ತಿದೆ. ಹಾಗಾಗಿ, ಉಕ್ರೇನ್‌ನಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು, “ಉಕ್ರೇನ್‌ನಲ್ಲಿರುವ ಭಾರತೀಯರು ಕೂಡಲೇ ವಾಪಸ್ ಬನ್ನಿ ಹಾಗೂ ಭಾರತದಲ್ಲಿರುವವರು (Indian Students) ಉಕ್ರೇನ್‌ಗೆ ತೆರಳಿದಿರಿ” ಎಂದು ಸೂಚಿಸಿದೆ.
ರಾಯಭಾರ ಕಚೇರಿ ಈ ಕುರಿತು ಅಡ್ವೈಸರಿ ಹೊರಡಿಸಿದೆ. “ಉಕ್ರೇನ್‌ನಲ್ಲಿ ಇತ್ತೀಚೆಗೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ನಿರಂತರವಾಗಿ ದಾಳಿ ನಡೆಯುತ್ತಿದ್ದು, ಜನರಲ್ಲಿ ಭೀತಿ ಮೂಡಿದೆ. ಹಾಗಾಗಿ, ಭಾರತದ ವಿದ್ಯಾರ್ಥಿಗಳು ಕೂಡಲೇ ತಾಯ್ನಾಡಿಗೆ ಹೊರಟುಬಿಡಿ. ಭಾರತದಲ್ಲಿರುವವರು ಆ ದೇಶಕ್ಕೆ ತೆರಳದಿರಿ” ಎಂದು ಸೂಚನೆ ನೀಡಿದೆ.
ಆರಂಭದಲ್ಲಿ ರಷ್ಯಾ ತೀವ್ರವಾಗಿ ಆಕ್ರಮಣ ಮಾಡಿದರೂ ಬಳಿಕ ಸುಮ್ಮನಾಗಿತ್ತು. ಹಾಗಾಗಿ, ಭಾರತದ ಒಂದಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಅಧ್ಯಯನಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಇನ್ನೂ ಒಂದಷ್ಟು ವಿದ್ಯಾರ್ಥಿಗಳು ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ, ಈಗ ವ್ಲಾಡಿಮಿರ್ ಪುಟಿನ್ ಸೇನೆಯ ಆಕ್ರಮಣ ಹೆಚ್ಚಾದ ಕಾರಣ ಉಕ್ರೇನ್‌ನಲ್ಲಿರುವ ವಿದೇಶಿಯರು ದೇಶ ತೊರೆಯುತ್ತಿದ್ದಾರೆ. ರಷ್ಯಾದ ಅಧಿಕಾರಿಗಳೇ ಉಕ್ರೇನ್ ತೊರೆಯುತ್ತಿದ್ದಾರೆ. ಹಾಗಾಗಿ, ರಾಯಭಾರ ಕಚೇರಿಯು ಮುಂಜಾಗ್ರತಾ ಕ್ರಮವಾಗಿ ಸೂಚನೆ ನೀಡಿದೆ. ಉಕ್ರೇನ್‌ನಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ.
ಇದನ್ನೂ ಓದಿ | Russia Rape War | ಉಕ್ರೇನ್‌ನಲ್ಲಿರುವ ತನ್ನ ಸೈನಿಕರಿಗೆ ವಯಾಗ್ರ ನೀಡಿದ ರಷ್ಯಾ, ಅತ್ಯಾಚಾರಕ್ಕೆ ಪ್ರಚೋದನೆ!