ಒಟ್ಟಾವ: ಖಲಿಸ್ತಾನ ಭಯೋತ್ಪಾದಕರನ್ನು (Khalistan terrorists) ಬೆಂಬಲಿಸುತ್ತಿರುವ ಕೆನಡಾ, ಭಾರತದ ಜೊತೆಗೆ ಮತ್ತೊಂದು ಕಿರಿಕ್ (India Canada Row) ತೆಗೆದಿದೆ. ದೇಶದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸುತ್ತಿದೆ ಎಂದು ಅಲ್ಲಿನ ಸರ್ಕಾರಿ ನೇಮಕದ ಆಯೋಗವೊಂದು ಪ್ರಧಾನಿಗೆ ವರದಿ ನೀಡಲು ಮುಂದಾಗಿದೆ.
ಕೆನಡಾದ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯೊಂದು, ಚುನಾವಣೆಯಲ್ಲಿ ಭಾರತದ ಸಂಭಾವ್ಯ ಮಧ್ಯಪ್ರವೇಶದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಜಸ್ಟಿನ್ ಟ್ರುಡೊ (Canada PM Justin Trudeau) ಸರ್ಕಾರಕ್ಕೆ ಬುಧವಾರ ತಿಳಿಸಿದೆ.
ದೇಶದ ಚುನಾವಣೆಗಳಲ್ಲಿ ಪ್ರಭಾವ ಬೀರಲು ಚೀನಾ ಪ್ರಯತ್ನಿಸುತ್ತಿದೆ ಎಂಬ ವರದಿಗಳ ನಂತರ, ವಿದೇಶಿ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸಲು ಸೆಪ್ಟೆಂಬರ್‌ನಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಸರ್ಕಾರ ಒಂದು ಆಯೋಗವನ್ನು ಸ್ಥಾಪಿಸಿತ್ತು. ಬುಧವಾರ ನೀಡಿದ ಹೇಳಿಕೆಯಲ್ಲಿ ಆಯೋಗವು, “2019 ಮತ್ತು 2021ರ ಕೆನಡಾದ ಚುನಾವಣೆಗಳಲ್ಲಿ ಭಾರತದ ಹಸ್ತಕ್ಷೇಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ” ಸರ್ಕಾರವನ್ನು ವಿನಂತಿಸಿದೆ.
“ಈ ಸಮಸ್ಯೆಗೆ ಸಂಬಂಧಿಸಿ ಸರ್ಕಾರದೊಳಗಿನ ಮಾಹಿತಿಯ ಹರಿವನ್ನು ಆಯೋಗವು ಪರಿಶೀಲಿಸುತ್ತಿದೆ. ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತದೆ. ವಿದೇಶಿ ಹಸ್ತಕ್ಷೇಪವನ್ನು ಪತ್ತೆಹಚ್ಚಲು ಮತ್ತು ತಡೆಯಲು ಸರ್ಕಾರದ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ ಮತ್ತು ಈ ವಿಷಯಗಳ ಬಗ್ಗೆ ಶಿಫಾರಸುಗಳನ್ನು ಮಾಡುತ್ತದೆ” ಎಂದು ಆಯೋಗವು ಹೇಳಿದೆ.
ಕ್ವಿಬೆಕ್ ನ್ಯಾಯಾಧೀಶ ಮೇರಿ-ಜೋಸಿ ಹೊಗ್ ನೇತೃತ್ವದ ಆಯೋಗವು ಚೀನಾ, ರಷ್ಯಾ ಮತ್ತು ಇತರರಿಂದ ಕೆನಡಾದ ವ್ಯವಹಾರಗಳಲ್ಲಿ ಹಸ್ತಕ್ಷೇಪದ ಪ್ರಯತ್ನದ ಆರೋಪಗಳ ಬಗ್ಗೆ ಸ್ವತಂತ್ರ ಸಾರ್ವಜನಿಕ ವಿಚಾರಣೆಯನ್ನು ನಡೆಸುತ್ತಿದೆ. ಮೇ 3ರೊಳಗೆ ಮಧ್ಯಂತರ ವರದಿಯನ್ನು ಪೂರ್ಣಗೊಳಿಸಿ ಈ ವರ್ಷಾಂತ್ಯದೊಳಗೆ ಅಂತಿಮ ವರದಿ ನೀಡುವ ನಿರೀಕ್ಷೆಯಿದೆ.
ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ (hardeep singh Nijjar) ಹತ್ಯೆಗೆ ಭಾರತೀಯ ಏಜೆಂಟರನ್ನು ಹೊಣೆ ಮಾಡಿರುವ ಕೆನಡಾದ ಆರೋಪಗಳಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹಳಸಿವೆ. ಭಾರತ ಆರೋಪವನ್ನು ತಿರಸ್ಕರಿಸಿದೆ ಮತ್ತು ಪುರಾವೆಯನ್ನು ಒದಗಿಸುವಂತೆ ಕೆನಡಾವನ್ನು ಕೇಳಿದೆ. “ನಾವು ನಿಮಗೆ ಸಹಕರಿಸಲು ಸಿದ್ಧ. ಆದರೆ ನಿರ್ದಿಷ್ಟವಾದ ಪುರಾವೆಗಳನ್ನು ಒದಗಿಸದಿದ್ದರೆ ನಾವು ನಿಮಗೆ ಸಹಾಯ ಮಾಡಲು ಹೇಗೆ ಸಾಧ್ಯ?ʼʼ ಎಂದು ಹೈಕಮಿಷನರ್ ಸಂಜಯ್ ವರ್ಮಾ ಕೇಳಿದ್ದಾರೆ.
ಇದನ್ನೂ ಓದಿ: India Canada Row: ಕೆನಡಿಯನ್ನರಿಗೆ ಭಾರತದ ಇ-ವೀಸಾ ಸೇವೆ ಪುನಾರಂಭ, 2 ತಿಂಗಳ ಬಳಿಕ ಟೆನ್ಷನ್ ತುಸು ರಿಲೀಫ್