Site icon Vistara News

India Canada Row: ಕೆನಡಿಯನ್ನರಿಗೆ ಭಾರತದ ಇ-ವೀಸಾ ಸೇವೆ ಪುನಾರಂಭ, 2 ತಿಂಗಳ ಬಳಿಕ ಟೆನ್ಷನ್‌ ತುಸು ರಿಲೀಫ್

justin trudeau and narendra modi

ಹೊಸದಿಲ್ಲಿ: ಸುಮಾರು ಎರಡು ತಿಂಗಳ ರಾಜತಾಂತ್ರಿಕ ಸಮರದ (India Canada Row) ನಂತರ ಭಾರತವು ಕೆನಡಾದ ಪ್ರಜೆಗಳಿಗೆ ಎಲೆಕ್ಟ್ರಾನಿಕ್ ವೀಸಾ (E Visa) ಸೇವೆಗಳನ್ನು ಪುನರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆನಡಾದಲ್ಲಿ ನೆಲೆಸಿದ್ದ ಖಲಿಸ್ತಾನಿ ಭಯೋತ್ಪಾದಕ (Khalistan terrorist) ಹರ್ದೀಪ್ ಸಿಂಗ್ ನಿಜ್ಜರ್‌ನನ್ನು (Hardeep singh Nijjar) ಜೂನ್‌ನಲ್ಲಿ ಅಪರಿಚಿತರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ “ಭಾರತ ಸರ್ಕಾರದ ಏಜೆಂಟರು” ಭಾಗಿಯಾಗಿದ್ದಾರೆ ಎಂಬ ಕೆನಡಾದ ಹೇಳಿಕೆಗಳ ನಂತರ ನಡೆದ ರಾಜತಾಂತ್ರಿಕ ಗದ್ದಲದ ಸಂದರ್ಭದಲ್ಲಿ ಸೆಪ್ಟೆಂಬರ್ 21ರಂದು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಪ್ರವಾಸಿ ವೀಸಾ ಸೇರಿದಂತೆ ಎಲ್ಲಾ ವೀಸಾ ಸೇವೆಗಳು ಪುನಾರಂಭಗೊಂಡಿವೆ. ವ್ಯಾಪಾರ ಮತ್ತು ವೈದ್ಯಕೀಯ ವೀಸಾ ಸೇವೆಗಳು ಕಳೆದ ತಿಂಗಳು ಪುನಾರಂಭಗೊಂಡಿದ್ದವು. ಸೆಪ್ಟೆಂಬರ್‌ನಲ್ಲಿ, ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು “ಮುಂದಿನ ಸೂಚನೆಯವರೆಗೆ” ಸ್ಥಗಿತಗೊಳಿಸಿತ್ತು.

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ (Justin Trudeau) ಹೇಳಿಕೆ ಬಳಿಕ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಯುದ್ಧ ಶುರುವಾಗಿತ್ತು. ಪರಸ್ಪರ ತಲಾ ಒಬ್ಬ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದ್ದವು. ಭಾರತ ಉಭಯ ದೇಶಗಳ ಮಿಷನ್‌ಗಳಿಗೆ ನಿಯೋಜಿಸಲಾದ ಹಿರಿಯ ಅಧಿಕಾರಿಗಳ ಸಂಖ್ಯೆಯಲ್ಲಿ “ಸಮಾನತೆ”ಯನ್ನು ಒತ್ತಾಯಿಸಿತ್ತು. ಅಂದರೆ ಅಧಿಕಾರಿಗಳ ಸಂಖ್ಯೆಯಲ್ಲಿ ಕಡಿತ ಮಾಡಲು ಕೆನಡಾಗೆ ಸೂಚಿಸಿತ್ತು.

ಎರಡೂ ದೇಶಗಳು ತಮ್ಮ ಪ್ರಜೆಗಳಿಗೆ ʼಎಚ್ಚರಿಕೆಯಿಂದ ಪ್ರವಾಸ ಮಾಡಿʼ ಸಲಹೆಗಳನ್ನು ನೀಡಿಕೊಂಡಿವೆ. ಭಾರತವು ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಮತ್ತು ಪ್ರಯಾಣ ಮಾಡುವವರಿಗೆ ʼರಾಜಕೀಯ ಪ್ರೇರಿತʼ ʼದ್ವೇಷದ ಅಪರಾಧʼಗಳ ದೃಷ್ಟಿಯಿಂದ ʼಅತ್ಯಂತ ಎಚ್ಚರಿಕೆʼಯನ್ನು ವಹಿಸುವಂತೆ ಸಲಹೆ ನೀಡಿದೆ. ಉಭಯ ದೇಶಗಳು ದೀರ್ಘಾವಧಿಯಿಂದ ಬಾಕಿ ಉಳಿದಿರುವ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಸಹ ತಡೆಹಿಡಿದಿವೆ.

ಭಾರತ ಸರ್ಕಾರವು ನಿಜ್ಜರ್‌ನ ಹತ್ಯೆಯಲ್ಲಿ ಭಾಗಿಯಾಗಿದೆ ಎಂಬ ʼಅಸಂಬದ್ಧʼ ಮತ್ತು ʼಪ್ರಚೋದಿತʼ ಆರೋಪಗಳನ್ನು ಭಾರತ ಪದೇ ಪದೆ ಮತ್ತು ದೃಢವಾಗಿ ನಿರಾಕರಿಸಿದೆ ಮತ್ತು ಸಾಕ್ಷ್ಯವನ್ನು ಹಂಚಿಕೊಳ್ಳಲು ಒತ್ತಾಯಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕಳೆದ ವಾರ ಭಾರತದ ಬೇಡಿಕೆಯನ್ನು ಪುನರುಚ್ಚರಿಸಿದ್ದರು. “ನಾವು ತನಿಖೆಯನ್ನು ತಳ್ಳಿಹಾಕುತ್ತಿಲ್ಲ. ಆದರೆ ನಿಮ್ಮಲ್ಲಿ ಕಾರಣವಿದ್ದರೆ ಮಾತ್ರ ಅಂತಹ ಆರೋಪ ಮಾಡಿ, ದಯವಿಟ್ಟು ನಮ್ಮೊಂದಿಗೆ ಪುರಾವೆಗಳನ್ನು ಹಂಚಿಕೊಳ್ಳಿ” ಎಂದಿದ್ದರು.

ಇದನ್ನೂ ಓದಿ: India Canada Row: ತನಿಖೆ ಓಕೆ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ; ಜೈಶಂಕರ್‌ ತಿರುಗೇಟು

Exit mobile version