Site icon Vistara News

India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್‌ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ

Narendra Modi Justin Turdeau And Narendra Modi

ಹೊಸದಿಲ್ಲಿ: ಡಜನ್‌ಗಟ್ಟಲೆ ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವು ಕೆನಡಾಕ್ಕೆ ಮತ್ತೆ ತಾಕೀತು (India Canada Row) ಮಾಡಿದೆ. ಅಕ್ಟೋಬರ್ 10ರೊಳಗೆ ನಿಮ್ಮ 40 ರಾಜತಾಂತ್ರಿಕರನ್ನು ಸ್ವದೇಶಕ್ಕೆ ವಾಪಸ್‌ ಕರೆಸಿಕೊಳ್ಳಿ ಎಂದು ಭಾರತ ತಿಳಿಸಿದೆ.

ಖಲಿಸ್ತಾನ್‌ ಉಗ್ರ (Khalistan terrorist) ಹರ್ದೀಪ್‌ ಸಿಂಗ್‌ ನಿಜ್ಜರ್ (Hardeep singh Nijjar) ಹತ್ಯೆಯ ನಂತರ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ. 41ರಷ್ಟು ಮಂದಿಯನ್ನು ಕಡಿತಗೊಳಿಸಬೇಕು ಎಂದು ಭಾರತ ತಾಕೀತು ಮಾಡಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Canada PM Justin Trudeau) ಇತ್ತೀಚೆಗೆ ಆರೋಪಿಸಿದ್ದರು. ನಂತರ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧ ಅತ್ಯಂತ ಕೆಳಮಟ್ಟಕ್ಕೆ ಹೋಗಿತ್ತು. ಉಭಯ ದೇಶಗಳು ಪರಸ್ಪರರ ಹಿರಿಯ ರಾಜತಾಂತ್ರಿಕರನ್ನು ಹೊರಗೆ ಕಳಿಸಿದ್ದವು. ಭಾರತದಲ್ಲಿ ಭಯೋತ್ಪಾದಕ ಎಂದು ಹೆಸರಿಸಲಾದ ನಿಜ್ಜರ್‌ನನ್ನು ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆ ಗುರುದ್ವಾರದ ಹೊರಗೆ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಕೆನಡಾದ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಟ್ರೂಡೊ, ನಿಜ್ಜರ್ ಅವರ ಹತ್ಯೆಯನ್ನು “ಭಾರತ ಸರ್ಕಾರದ ಏಜೆಂಟರು” ನಡೆಸಿದ್ದಾರೆ ಎಂದು ದೂರಿದ್ದರು. ಆದರೆ ಭಾರತ ಈ ಹೇಳಿಕೆಯನ್ನು “ಅಸಂಬದ್ಧ, “ಪ್ರೇರೇಪಿತ” ಎಂದು ಕರೆದಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವನ್ನು ಸಮರ್ಥಿಸಲು ಕೆನಡಾ ಯಾವುದೇ ಪುರಾವೆಗಳನ್ನು ನೀಡಿಲ್ಲ.

ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರಿಂದಾಗಿ ಉಭಯ ಸರ್ಕಾರಗಳ ನಡುವೆ ಕೆಲವು ವರ್ಷಗಳಿಂದ ಸಮಸ್ಯೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ (S Jaishankar) ಇತ್ತೀಚೆಗೆ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು “ಡೆಡ್‌ಲಾಕ್” ಎಂದು ಕರೆಯಬೇಕಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಕೆನಡಾದ ಕಡೆಯಿಂದ ಬರಬಹುದಾದ ಯಾವುದೇ ಪುರಾವೆ, ದಾಖಲೆಗಳನ್ನು ಪರಿಶೀಲಿಸಲು ಭಾರತ ಸರ್ಕಾರವು ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: India Canada Row: ಕೆನಡಾ ಮಿಲಿಟರಿ ವೆಬ್‌ಸೈಟ್‌ಗೇ ಗುನ್ನಾ ಇಟ್ಟ ಭಾರತೀಯ ಹ್ಯಾಕರ್ಸ್ ಗ್ರೂಪ್!

Exit mobile version