ಒಟ್ಟಾವ: ಕೆನಡಾ- ಭಾರತದ ನಡುವೆ ಹಳಸುತ್ತಿರುವ ಸಂಬಂಧಗಳ (India Canada Row) ಹಿನ್ನೆಲೆಯಲ್ಲಿ, ಖಲಿಸ್ತಾನ್ ಉಗ್ರಗಾಮಿಗಳ ಗುಂಪಿನ (Khalistan terrorist) ನಾಯಕನೊಬ್ಬ ಕೆನಡಾದಲ್ಲಿರುವ ಹಿಂದೂಗಳಿಗೆ ಜೀವ ಬೆದರಿಕೆ ಒಡ್ಡಿದ್ದಾನೆ.
2019ರಲ್ಲಿ ಭಾರತದಲ್ಲಿ ನಿಷೇಧಿತವಾಗಿರುವ ಖಲಿಸ್ತಾನ್ ಪರ ಗುಂಪು ʼಸಿಖ್ಸ್ ಫಾರ್ ಜಸ್ಟೀಸ್ʼ (sikhs for justice- SFJ) ಕೆನಡಾದಲ್ಲಿ ವಾಸಿಸುವ ಹಿಂದೂಗಳಿಗೆ ಜೀವಬೆದರಿಕೆ ಹಾಕಿದೆ. SFJ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant singh pannun), ಭಾರತವನ್ನು ಬೆಂಬಲಿಸುವವರು ಕೆನಡಾ ತೊರೆಯುವಂತೆ ಹೇಳಿದ್ದಾನೆ. ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿರುವ ಈತನ ವೀಡಿಯೊದಲ್ಲಿ, ಅಕ್ಟೋಬರ್ 29ರಂದು ವ್ಯಾಂಕೋವರ್‌ನಲ್ಲಿ ನಡೆಯುವ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಖಲಿಸ್ತಾನ್ ಪರ ಮತ ಚಲಾಯಿಸುವಂತೆ ಕೆನಡಾದ ಸಿಖ್‌ಗಳಿಗೆ ಕರೆ ನೀಡಿದ್ದಾನೆ.
“ಇಂಡೋ-ಹಿಂದೂಗಳೇ… ಕೆನಡಾವನ್ನು ತೊರೆಯಿರಿ, ಭಾರತಕ್ಕೆ ಹೋಗಿ” ಎಂದು ಪನ್ನುನ್ ಘೋಷಿಸಿದ್ದಾನೆ. ʼʼಖಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿದ್ದಾರೆ ಮತ್ತು ಯಾವಾಗಲೂ ಕೆನಡಾದ ಪರವಾಗಿದ್ದಾರೆ” ಎಂದಿದ್ದಾನೆ ಪನ್ನುನ್. ಭಾರತದಲ್ಲಿ ನಡೆದ ವಿವಿಧ ಖಲಿಸ್ತಾನ್ ಭಯೋತ್ಪಾದಕ ಘಟನೆಗಳ ಹೊಣೆಯನ್ನು ಪನ್ನೂನ್ ಈ ಹಿಂದೆ ಹೊತ್ತುಕೊಂಡಿದ್ದ. ಏಪ್ರಿಲ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಭೇಟಿ ನೀಡಿದ ಸಂದರ್ಭ, ಅವರಿಗೆ ವೀಡಿಯೊ ಮೂಲಕ ಜೀವಬೆದರಿಕೆ ಹಾಕಿದ್ದ. ಇದೇ ವರ್ಷ 2 ತಿಂಗಳಲ್ಲಿ ಮೂವರು ಪ್ರಮುಖ ಖಲಿಸ್ತಾನಿ ನಾಯಕರ ಮರಣದ ನಂತರ ತಲೆಮರೆಸಿಕೊಂಡಿದ್ದಾನೆ. ಇವನು ವಿದೇಶಗಳಲ್ಲಿ ಖಲಿಸ್ತಾನ್ ಪರ ಕಾರ್ಯಕ್ರಮಗಳ ಸಂಯೋಜನೆ, ಭಾರತೀಯ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಇತ್ಯಾದಿ ಕೃತ್ಯಗಳಲ್ಲಿ ತೊಡಗಿಕೊಂಡ ಕುಖ್ಯಾತ.
ಕೆನಡಾದಲ್ಲಿ ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ (hardeep singh nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತ- ಕೆನಡಾ ನಡುವೆ ರಾಜತಾಂತ್ರಿಕ ವಿವಾದ ಉಲ್ಬಣಿಸಿರುವ ನಡುವೆ ಈ ಬೆಳವಣಿಗೆ ನಡೆದಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Canada PM Justin Trudeau) ಹೇಳಿದ್ದರು. ಬಳಿಕ ಭಾರತದ ರಾಯಭಾರಿಯನ್ನು ಹೊರಹಾಕಲಾಗಿತ್ತು. ಪ್ರತಿಯಾಗಿ ಭಾರತವೂ ಕೆನಡಾ ರಾಯಭಾರಿಯನ್ನು ಆಚೆಗಟ್ಟಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಜಸ್ಟಿನ್ ಟ್ರುಡೊ ಹೇಳಿಕೆಯನ್ನು “ಅಸಂಬದ್ಧ ಮತ್ತು ದುರುದ್ದೇಪೂರಿತ” ಎಂದು ತಳ್ಳಿಹಾಕಿದೆ. “ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನುಂಟುಮಾಡುತ್ತಿರುವ ಖಲಿಸ್ತಾನಿ ಭಯೋತ್ಪಾದಕರಿಂದ ಗಮನವನ್ನು ತಪ್ಪಿಸಲು ಯತ್ನಿಸುತ್ತವೆ. ಈ ವಿಷಯದಲ್ಲಿ ಕೆನಡಾ ಸರ್ಕಾರದ ನಿಷ್ಕ್ರಿಯತೆಯು ನಮಗೆ ದೀರ್ಘಕಾಲದ ಕಳವಳದ ವಿಷಯ” ಎಂದು ಹೇಳಿದೆ. ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ನವದೆಹಲಿ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ರಾಜಕೀಯ ವ್ಯಕ್ತಿಗಳು ಖಾಲಿಸ್ತಾನಿ ನಾಯಕರಿಗೆ “ಮುಕ್ತ” ಬೆಂಬಲವನ್ನು ನೀಡಿದ್ದಾರೆ ಎಂದು ದೂರಿದೆ.
ಬುಧವಾರ, ಭಾರತದ ಗುಪ್ತಚರ ಸಂಸ್ಥೆಗಳು ಖಲಿಸ್ತಾನಿ ಪರ ಘಟಕಗಳ (PKE) ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಕೆನಡಾದಲ್ಲಿ ಅವರಿಗೆ ರಾಜಕೀಯ ಬೆಂಬಲ ಹೆಚ್ಚುತ್ತಿದೆ; ಅಲ್ಲಿರುವ ಭಾರತೀಯರು ಮತ್ತು ಭಾರತೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರಮಣಕಾರಿ ಚಟುವಟಿಕೆ ನಡೆಯಬಹುದು ಎಂದು ಎಚ್ಚರಿಕೆ ನೀಡಿವೆ. ಹಿಂದೂ ದೇವಾಲಯಗಳು, ಕೆನಡಾದಲ್ಲಿ ನೆಲೆಸಿರುವ ಭಾರತೀಯರು ಮತ್ತು ಅಲ್ಲಿ ವ್ಯಾಪಾರ ನಡೆಸುತ್ತಿರುವ ಭಾರತೀಯ ಉದ್ಯಮಿಗಳನ್ನು ಗುರಿಯಾಗಿಸಬಹುದು ಎಂದು ಏಜೆನ್ಸಿಗಳು ಹೇಳಿವೆ. ಮುಂದಿನ ದಿನಗಳಲ್ಲಿ PKE ಗಳು ಮತ್ತು ಭಾರತೀಯರ ನಡುವಿನ ಘರ್ಷಣೆಗಳು ವರದಿಯಾಗಬಹುದು ಎಂದಿವೆ.
ಹಿಂದೂ ಮೂಲದ ಕೆನಡಾದ ಸಚಿವೆ ಅನಿತಾ ಆನಂದ್ ಅವರು ಶಾಂತವಾಗಿರುವಂತೆ ಭಾರತೀಯ ಹಾಗೂ ಕೆನಡಾ ಪ್ರಜೆಗಳಿಗೆ ಮನವಿ ಮಾಡಿದ್ದಾರೆ. “ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ನಾವೆಲ್ಲರೂ ಶಾಂತಿ, ಏಕತೆ ಮತ್ತು ಸಹಾನುಭೂತಿಯಿಂದ ಇರೋಣ” ಎಂದಿದ್ದಾರೆ.
ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ