Site icon Vistara News

India Canada Row: ನಿಜ್ಜರ್‌ ಹತ್ಯೆ ಕುರಿತು ಕೆನಡಾ ಯಾವ ದಾಖಲೆಯನ್ನೂ ನೀಡಿಲ್ಲ; ಭಾರತ ಎದುರೇಟು

Justin Trudeau

India violating Vienna Convention Says Canada PM Justin Trudeau

ನವದೆಹಲಿ: ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಆರಂಭವಾದ ಬಳಿಕ ಜಸ್ಟಿನ್‌ ಟ್ರುಡೋ (Justin Trudeau) ಅವರು ಭಾರತದ ವಿರುದ್ಧ ಹಲವು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸರಿಯಾಗಿ ಭಾರತವೂ ತಿರುಗೇಟು ನೀಡುತ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ಕುರಿತು ಭಾರತಕ್ಕೆ ಸಾಕ್ಷ್ಯ ನೀಡಲಾಗಿದೆ ಎಂಬ ಜಸ್ಟಿನ್‌ ಟ್ರುಡೋ ಹೇಳಿಕೆಗೂ ಈಗ ಭಾರತ ಸರಿಯಾದ ಪ್ರತ್ಯುತ್ತರ ನೀಡಿದೆ. “ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಕೆನಡಾ ಯಾವುದೇ ಗುಪ್ತಚರ ಮಾಹಿತಿಯನ್ನೂ ಒದಗಿಸಿಲ್ಲ” ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಎದುರೇಟು ನೀಡಿದ್ದಾರೆ.

“ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಆಗಲಿ, ಅಮೆರಿಕ ಆಗಲಿ ಯಾವುದೇ ಗುಪ್ತಚರ ಮಾಹಿತಿ ಒದಗಿಸಿಲ್ಲ. ಅಷ್ಟಕ್ಕೂ, ನಿಜ್ಜರ್‌ ಹತ್ಯೆಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ನಿಜ್ಜರ್‌ನನ್ನು ಯಾರು ಹತ್ಯೆ ಮಾಡಿದ್ದಾರೆ ಎಂಬ ಕುರಿತು ಮೊದಲು ಕೆನಡಾ ಮಾಹಿತಿ ಒದಗಿಸಲಿ. ಹಾಗೊಂದು ವೇಳೆ, ನಿಜ್ಜರ್‌ ಹತ್ಯೆಯ ಕುರಿತು ಕೆನಡಾ ತನಿಖೆ ಮಾಡಲು ಮುಂದಾದರೆ ಭಾರತ ನೆರವು ನೀಡಲು ಸಿದ್ಧವಿದೆ” ಎಂದು ಹೇಳಿದ್ದಾರೆ. ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಾಗಿದೆ.

ಇದನ್ನೂ ಓದಿ: India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ

ಜಸ್ಟಿನ್‌ ಟ್ರುಡೋ ಆರೋಪವೇನು?

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು.

ಇದರೊಂದಿಗೆ ಭಾರತಕ್ಕೆ ನಾವು ಈಗಾಗಲೇ ಸಾಕ್ಷ್ಯ ನೀಡಿದ್ದೇವೆ, ಆದರೆ ಭಾರತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಜಸ್ಟಿನ್‌ ಟ್ರುಡೋ ಬಿಂಬಿಸಿದ್ದರು. ಆದರೆ, ಅವರು ಬೇರೊಂದು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದರು. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.

Exit mobile version