ಹೊಸದಿಲ್ಲಿ: ರಾಜತಾಂತ್ರಿಕರ ಹೊರಹಾಕುವಿಕೆ (India Canada Row) ವಿಚಾರಕ್ಕೆ ಸಂಬಂಧಿಸಿ ಇದೀಗ ಅಮೆರಿಕ ಹಾಗೂ ಬ್ರಿಟನ್‌ಗಳು ಕೆನಡಾವನ್ನು ಬೆಂಬಲಿಸಿದ್ದು, ಭಾರತ ವಿರುದ್ಧ ತಿರುಗಿಬಿದ್ದಿವೆ. ಆದರೆ ಭಾರತವು ರಾಜತಾಂತ್ರಿಕರ ಆರೋಪವನ್ನು ತಳ್ಳಿ ಹಾಕಿದ್ದು, ಡೋಂಟ್ ಕೇರ್ ಎಂಬ ಸಂದೇಶ ರವಾನಿಸಿದೆ. ಈ ವಿಚಾರದಲ್ಲಿ ಯಾವುದೇ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.
ಕಳೆದ ಒಂದು ತಿಂಗಳಿನಿಂದ ಭಾರತ ಹಾಗೂ ಕೆನಡಾ ನಡುವೆ ಉಲ್ಬಣಿಸಿರುವ ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ 41 ರಾಜತಾಂತ್ರಿಕರನ್ನು (canada diplomats) ನಿನ್ನೆ ಕೆನಡಾ ಹಿಂದೆಗೆದುಕೊಂಡಿದೆ. 40ಕ್ಕೂ ಅಧಿಕ ಕೆನಡಾ ರಾಜತಾಂತ್ರಿಕರು ಇಲ್ಲಿದ್ದು, ಇವರ ಸಂಖ್ಯೆಯನ್ನು ಇಳಿಸುವಂತೆ ಭಾರತ ಸೂಚನೆ ನೀಡಿತ್ತು. ಹೀಗೆ ಮಾಡುವಂತೆ ಕೆನಡಾವನ್ನು ಒತ್ತಾಯಿಸಬೇಡಿ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಶುಕ್ರವಾರ ಭಾರತೀಯ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿತ್ತು.
“ಭಾರತದಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸೂಚಿಸಿರುವ ಭಾರತ ಸರ್ಕಾರದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಕೆನಡಾದ ರಾಜತಾಂತ್ರಿಕರು ಭಾರತದಿಂದ ನಿರ್ಗಮಿಸುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ” ಎಂದು ಯುಎಸ್ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಈಗ ಹೇಳಿದ್ದಾರೆ. “ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜತಾಂತ್ರಿಕರ ಅಗತ್ಯವಿದೆ. ಕೆನಡಾದ ರಾಜತಾಂತ್ರಿಕರ ಉಪಸ್ಥಿತಿಯನ್ನು ಕಡಿಮೆ ಮಾಡದಿರಲು, ಕೆನಡಾದ ತನಿಖೆಯಲ್ಲಿ ಸಹಕರಿಸಲು ನಾವು ಭಾರತ ಸರ್ಕಾರವನ್ನು ಒತ್ತಾಯಿಸಿದ್ದೇವೆ” ಎಂದು ಯುಎಸ್ ವಿದೇಸಾಂಗ ಇಲಾಖೆ ಹೇಳಿದೆ.
ಪಾಶ್ಚಿಮಾತ್ಯ ಶಕ್ತಿಗಳು ಭಾರತವನ್ನು ಬಹಿರಂಗವಾಗಿ ಖಂಡಿಸಲು ಹಿಂಜರಿಯುತ್ತಿದ್ದರೂ ಸಹ, ಕೆನಡಾದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ವಾಷಿಂಗ್ಟನ್ ಹೇಳಿದೆ. ಸಿಖ್ ಪ್ರತ್ಯೇಕತಾವಾದಿ ನಾಯಕನ ಕೊಲೆ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತವನ್ನು ಲಂಡನ್ ಒತ್ತಾಯಿಸಿದೆ. “ಕೆನಡಾದ ಹಲವಾರು ರಾಜತಾಂತ್ರಿಕರು ಭಾರತವನ್ನು ತೊರೆಯಲು ಕಾರಣವಾದ, ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ನಾವು ಒಪ್ಪುವುದಿಲ್ಲ” ಎಂದು ಬ್ರಿಟನ್ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ವಿಶ್ಲೇಷಕರು ಹೇಳುವ ಪ್ರಕಾರ ಅಮೆರಿಕ ಮತ್ತು ಬ್ರಿಟನ್, ಭಾರತದೊಂದಿಗಿನ ಬಾಂಧವ್ಯವನ್ನು ಹಾಳುಮಾಡಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಏಷ್ಯಾದಲ್ಲಿ ತಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಚೀನಾದ ವಿರುದ್ಧ ಸಮತೋಲನ ಸಾಧಿಲು ಅವುಗಳಿಗೆ ಭಾರತದ ಅಗತ್ಯವಿದೆ. ಆದರೆ ಅಮೆರಿಕದ ಮತ್ತು ಬ್ರಿಟನ್‌ನ ವಿದೇಶಾಂಗ ಕಚೇರಿಗಳ ಶುಕ್ರವಾರದ ಹೇಳಿಕೆಗಳು ಈ ಪ್ರಕರಣದಲ್ಲಿ ಇದುವರೆಗಿನ ನೇರ ಟೀಕೆಗಳಾಗಿವೆ.
ಖಲಿಸ್ತಾನ ಉಗ್ರಗಾಮಿ ಸಂಘಟನೆ ನಾಯಕ, ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಜೂನ್‌ನಲ್ಲಿ ವ್ಯಾಂಕೋವರ್ ಉಪನಗರದಲ್ಲಿ ಹತ್ಯೆಯಾಗಿದ್ದು, ಇದರಲ್ಲಿ ಭಾರತೀಯರ ಗುಪ್ತಚರ ಇಲಾಖೆಯ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಆ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿತ್ತು.
ಕೆನಡಾ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿದೆ. ಹಲವಾರು ಭಾರತೀಯ ನಗರಗಳಲ್ಲಿನ ತನ್ನ ಕಾನ್ಸುಲೇಟ್‌ಗಳಲ್ಲಿ ವೈಯಕ್ತಿಕ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ವೀಸಾ ಪ್ರಕ್ರಿಯೆ ವಿಳಂಬದ ಬಗ್ಗೆ ಎಚ್ಚರಿಸಿದೆ.
ಇದನ್ನೂ ಓದಿ: India Canada Row: ಕೆನಡಾ ಉಪಟಳ; ಬೆಂಗಳೂರಲ್ಲಿ ವೀಸಾ ಸೇವೆ ಸ್ಥಗಿತ, 17 ಸಾವಿರ ಜನ ಅತಂತ್ರ!