ನವ ದೆಹಲಿ: ಭಾರತ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ 2075ರ ವೇಳೆಗೆ ಹೊರಹೊಮ್ಮಲಿದೆ ಎಂದು ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಆಗಿರುವ ಗೋಲ್ಡ್‌ಮನ್ ಸ್ಯಾಕ್ಸ್ (Goldman Sachs) ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ.( Economy of India ) ಆದರೆ ಇದು ಸದ್ಯಕ್ಕೆ ಆಗುವುದಿಲ್ಲ. ಇದಕ್ಕಾಗಿ ಭಾರತ ಸುದೀರ್ಘ ಕಾಯಬೇಕಾಗಿದೆ.
ಭಾರತವು 2075ರ ವೇಳೆಗೆ ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಭಾರತವು ಕೇವಲ ಜಪಾನ್, ಜರ್ಮನಿಯನ್ನು ಮಾತ್ರವಲ್ಲದೆ ಅಮೆರಿಕವನ್ನೂ ಹಿಂದಿಕ್ಕಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ವರದಿ ತಿಳಿಸಿದೆ. ಭಾರತ (India) ಈಗ ಜಗತ್ತಿನ ಐದನೇ ಅತಿ ದೊಡ್ಡ ಎಕಾನಮಿಯಾಗಿದೆ. ಕಳೆದ ವರ್ಷ ಬ್ರಿಟನ್ ಅನ್ನು ಹಿಂದಿಕ್ಕಿದೆ. ಸಂಶೋಧನೆ ಮತ್ತು ತಂತ್ರಜ್ಞಾನ, ಅಧಿಕ ಬಂಡವಾಳ ಹೂಡಿಕೆ, ಕಾರ್ಮಿಕರ ಉತ್ಪಾದಕತೆಯಕಲ್ಲಿ ಹೆಚ್ಚಳದ ಪರಿಣಾಮ (domestic consumtion) ಭಾರತದ ಎಕಾನಮಿ ಮುಂಬರುವ ವರ್ಷಗಳಲ್ಲಿ ಬೆಳೆಯಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ವರದಿ ತಿಳಿಸಿದೆ.
ಮುಂದಿನ ಎರಡು ದಶಕಗಳಲ್ಲಿ ಭಾರತದ ಡಿಪೆಂಡೆನ್ಸಿ ಏಶಿಯೊ (dependency ratio) ಇತರ ಪ್ರಾದೇಶಿಕ ಎಕಾನಮಿಗಿಂತ ಗಣನೀಯ ಕಡಿಮೆಯಾಗಲಿದೆ. ಕೆಲಸ ಮಾಡುವ ವರ್ಗದ ಜನರನ್ನು ಅವಲಂಬಿಸಿದವರ ಸಂಖ್ಯೆಯನ್ನು ಮಾಪನ ಮಾಡುವುದನ್ನು ಡಿಪೆಂಡನ್ಸಿ ರೇಶಿಯೊ ಎನ್ನುತ್ತಾರೆ. ಎಸ್&ಪಿ ಗ್ಲೋಬಲ್ ಮತ್ತು ಮೋರ್ಗಾನ್ ಸ್ಟಾನ್ಲಿಯ ಪ್ರಕಾರ 2030ರ ವೇಳೆಗೆ ಭಾರತವು ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ.
ಭಾರತದಲ್ಲಿ ಹೆಚ್ಚುತ್ತಿರುವ ದುಡಿಯುವ ವರ್ಗದ ಜನತೆ ದೇಶದ ಆರ್ಥಿಕ ಅಭಿವೃದ್ಧಿಯ ಚಾಲಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್‌ನ ಆರ್ಥಿಕ ತಜ್ಞರಾದ ಶಂತನು ಸೇನಗುಪ್ತಾ ತಿಳಿಸಿದ್ದಾರೆ. ಭಾರತ ತನ್ನ ಉತ್ಪಾದನಾ ವಲಯವನ್ನೂ ವಿಸ್ತರಿಸಲಿದೆ. ಸೇವಾ ಕ್ಷೇತ್ರದಲ್ಲೂ ಅಪಾರ ಬೆಳವಣಿಗೆ ದಾಖಲಿಸಲಿದೆ. ಮೂಲ ಸೌಕರ್ಯ ಅಭಿವೃದ್ಧಿಯಾಗಲಿದೆ. ಖಾಸಗಿ ವಲಯ ಪ್ರಗತಿಗೆ ದೊಡ್ಡ ಕಾಣಿಕೆ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.
ಭಾರತದ ಬೆಳವಣಿಗೆಗೆ ಬಂಡವಾಳ ಹೂಡಿಕೆ (capital investment) ನಿರ್ಣಾಯಕವಾಗಲಿದೆ. ಡಿಪೆಂಡೆನ್ಸಿ ರೇಶಿಯೊ ಕಡಿಮೆ ಆಗಿ ಉಳಿತಾಯ ಹೆಚ್ಚಲಿದೆ. ಜನರ ಆದಾಯ ವೃದ್ಧಿಸಲಿದೆ. ಹಣಕಾಸು ಕ್ಷೇತ್ರ ಅನೂಹ್ಯವಾಗಿ ವೃದ್ಧಿಸಲಿದೆ. ಇದು ಮತ್ತಷ್ಟು ಹೂಡಿಕೆಗೆ ಬಂಡವಾಳವಾಗಿ ದೊರೆಯಲಿದೆ ಎಂದು ಶಂತನು ಸೇನಗುಪ್ತ ವಿವರಿಸಿದ್ದಾರೆ.
ಭಾರತದಲ್ಲಿ ಕಳೆದ 15 ವರ್ಷಗಳಲ್ಲಿ ಕಾರ್ಮಿಕ ವರ್ಗದ ತೊಡಗಿಸಿಕೊಳ್ಳುವಿಕೆಯಲ್ಲಿ (participation) ಇಳಿಕೆಯಾಗಿತ್ತು. ವೃತ್ತಿಪರ ವಲಯಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಿಂದಿನಿಂದಲೂ ಇಲ್ಲಿ ಕಡಿಮೆ. ಆದರೆ ಮುಂಬರುವ ವರ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಲಿದೆ. ಸದ್ಯ ಕೇವಲ 20% ಮಹಿಳೆಯರು ಮಾತ್ರ ಔದ್ಯೋಗಿಕ ವಲಯದಲ್ಲಿದ್ದಾರೆ. ಈ ವ್ಯತ್ಯಾಸ ಕಡಿಮೆಯಾಗಲಿದೆ. ಹೆಚ್ಚು ಮಂದಿ ವನಿತೆಯರು ಉದ್ಯೋಗಿಗಳಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ವಿಸ್ತಾರ Explainer : ಆಯಿಲ್ ಇಲ್ಲದಿದ್ರೂ ಇಸ್ರೇಲ್, ಶ್ರೀಮಂತ ದೇಶವಾಗಿದ್ದು ಹೇಗೆ?
ಭಾರತವು ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಗಳನ್ನು ಇಟ್ಟಿದೆ. ಇಂಟರ್‌ನೆಟ್ ಮತ್ತು ಮೊಬೈಲ್ ಸಾಂದ್ರತೆ ದಟ್ಟವಾಗಿದೆ. ವಿಶ್ವದ ಅತಿ ದೊಡ್ಡ ಬಯೊಮೆಟ್ರಿಕ್ ಸಿಸ್ಟಮ್ ಆಧಾರ್ ಸಿಸ್ಟನ್ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ಇದರಿಂದ 104 ಕೋಟಿ ಭಾರತೀಯರನ್ನು ಆನ್‌ಲೈನ್ ನಲ್ಲಿ ಗುರುತಿಸಲು ಹಾದಿ ಸುಗಮವಾಗಿದೆ ಎಂದು ಗೋಲ್ಡ್ ಮನ್ ಸ್ಯಾಕ್ಸ್ ಆರ್ಥಿಕ ತಜ್ಞ ಸೇನಗುಪ್ತಾ ತಿಳಿಸಿದ್ದಾರೆ.