ನವದೆಹಲಿ: 2023-24 ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ (2023-24 Financial Year) ಭಾರತದ ಒಟ್ಟು ದೇಶೀಯ ಉತ್ಪನ್ನ(India GDP Growth) ಶೇ.7.8ಕ್ಕೆ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಗುರುವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ(National Statistical Office – NSO). ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ದರ ಹೆಚ್ಚಾಗಿದೆ. ಆಗ ಶೇ.6.1ರಷ್ಟು ದಾಖಲಾಗಿತ್ತು. ಆದರೆ, ಇದೇ ಅವಧಿಯನ್ನು ಕಳೆದ ವರ್ಷ ಅಂದರೆ 2022-23ಕ್ಕೆ ಹೋಲಿಸಿದರೆ ಈ ಜಿಡಿಪಿ ಪ್ರಮಾಣವು ಕಡಿಮೆಯೇ ಇದೆ.
ಈ ಅಭಿವೃದ್ಧಿ ದರವು ಹಿಂದಿನ ತ್ರೈಮಾಸಿಕದ ಶೇ.6.1 ಹೆಚ್ಚಳವನ್ನು ಮೀರಿದೆ. ಆದಾಗ್ಯೂ, 2022-23ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಾಖಲಾದ ಶೇ.13.1 ಬೆಳವಣಿಗೆ ದರಕ್ಕಿಂತ ವೇಗವು ತುಲನಾತ್ಮಕವಾಗಿ ನಿಧಾನವಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಹೀಗಿದ್ದೂ, ಈ ದರದೊಂದಿಗೆ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆಯು ಶೇಕಡಾ 6.3 ರಷ್ಟಿದೆ.
ಈ ಸುದ್ದಿಯನ್ನೂ ಓದಿ: India’s GDP : ಭಾರತದ ಜಿಡಿಪಿ ಈಗ 3.75 ಲಕ್ಷ ಕೋಟಿ ಡಾಲರ್‌ಗೆ ಏರಿಕೆ, 2014ರಲ್ಲಿ ಎಷ್ಟಿತ್ತು?
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಮಾಹಿತಿಯ ಪ್ರಕಾರ, ಕೃಷಿ ವಲಯವು 3.5 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. 2022-23 ರ ಆರ್ಥಿಕ ವರ್ಷದ ಅದೇ ಅವಧಿಗೆ ಹೋಲಿಸಿದರೆ ಹಾಲಿ ದರವು ಹೆಚ್ಚಾಗಿದ್ದು, ಬೆಳವಣಿಗೆಯನ್ನು ದಾಖಲಿಸಿದೆ. ಈ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕೃಷಿ ವಲಯವು ಶೇ.2.4 ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ, ಇದೇ ಮಾತನ್ನು ಉತ್ಪಾದನಾ ವಲಯಕ್ಕೆ ಹೇಳುವಂತಿಲ್ಲಯ
ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯ ವೇಗವು ಶೇಕಡಾ 4.7 ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಉತ್ಪಾದನಾ ವಲಯವು ಶೇ.6.1ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ಉತ್ಪಾದನಾ ವಲಯವು ಭಾರೀ ಹಿನ್ನಡೆಯನ್ನು ಅನುಭವಿಸಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.