Site icon Vistara News

Boycott Maldives : ಬಂಡುಕೋರರಿಂದ ಮಾಲ್ಡೀವ್ಸ್​​ಅನ್ನು ರಕ್ಷಿಸಿದ್ದೇ ಭಾರತ; ಅದು ಆಪರೇಷನ್‌ ಕ್ಯಾಕ್ಟಸ್‌!

Operation Cactus

ಜನವರಿ 4ರಂದು ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯು ಮಾಲ್ಡೀವ್ಸ್​​ನ ಕೆಲವು ರಾಜಕಾರಣಿಗಳ ಅಸೂಯೆಗೆ ಕಾರಣವಾಗಿದೆ. ಅದನ್ನವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ ರೀತಿಗೆ ಭಾರತ ಹಾಗೂ ದ್ವೀಪ ರಾಷ್ಟ್ರದ ನಡುವಿನ ಸಂಬಂಧ ಹಾಳಾಗಿದೆ. ಪಿಎಂ ಮೋದಿ ಅವರು ಲಕ್ಷ ದ್ವೀಪ ಪ್ರವಾಸದ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ್ದ ಅಲ್ಲಿನ ಜನಪ್ರತಿನಿಧಿಗಳಲ್ಲಿ ಕೆಲವರು ಭಾರತ ತಮ್ಮ ಪ್ರವಾಸೋದ್ಯಮಕ್ಕೆ ಪ್ರತಿಸ್ಪರ್ಧಿಯಾಗಬಹುದು ಎಂಬುದನ್ನು ಅರಿತು ಮಾನಹಾನಿಕರ ಟ್ವೀಟ್​ಗಳನ್ನು ಮಾಡಿದರು. ಕ್ರೋಧಗೊಂಡ ಭಾರತೀಯರು ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ಡೀವ್ಸ್​ ಪ್ರವಾಸಕ್ಕೆ ಮಾಡಿದ್ದ ಬುಕಿಂಗ್​ಗಳನ್ನು (ವಿಮಾನ, ಹೋಟೆಲ್​) ಕ್ಯಾನ್ಸಲ್​ ಮಾಡುವ ಮೂಲಕ ಆ ದೇಶಕ್ಕೆ ಆರ್ಥಿಕವಾಗಿ ಪೆಟ್ಟುಕೊಟ್ಟರು. ಎಚ್ಚೆತ್ತುಕೊಂಡ ಅಲ್ಲಿನ ಸರ್ಕಾರ ಹದಗೆಟ್ಟ ಸಂಬಂಧ ಸುಧಾರಣೆಗೆ ಪ್ರಯತ್ನಗಳನ್ನು ನಡೆಸುತ್ತಿದೆ.

ಮಾಲ್ಡೀವ್ಸ್​​​ನ ಭಾರತ ವಿರೋಧ ತಂತ್ರ ಇದೇ ಮೊದಲಲ್ಲ, ಆರಂಭಿಸಿದ ದಶಕಗಳೇ ಆಯಿತು. ಇಂಡಿಯಾ ಔಟ್​ (India Out) ಎಂಬ ಅಭಿಯಾನ ನಡೆಸುತ್ತಿದೆ. ಹಾಲಿ ಸರ್ಕಾರದ ಚುನಾವಣಾ ಕಾರ್ಯತಂತ್ರವೇ ಆದಾಗಿತ್ತು. ಭಾರತ ವಿರುದ್ಧ ಇಷ್ಟೆಲ್ಲ ದ್ವೇಷ ಸಾಧಿಸುವ ಆ ದೇಶವನ್ನು ರಕ್ಷಿಸಿದ್ದು ಭಾರತ ಎಂಬುದು ವಾಸ್ತವ. 1980ರ ದಶಕದಲ್ಲಿ ಬೃಹತ್​​ ದಂಗೆಯಿಂದ ಕಂಗೆಟ್ಟಿದ್ದ ಮಾಲ್ಡೀವ್ಸ್​ ಸರ್ಕಾರಕ್ಕೆ ಭಾರತ ಮಿಲಿಟರಿ ನೆರವು ನೀಡಿತ್ತು. ಬಂಡುಕೋರರನ್ನು ಮಟ್ಟ ಹಾಕಿದ್ದ ಭಾರತ ಅಲ್ಲಿನ ಅಧ್ಯಕ್ಷರ ತಲೆ ಉಳಿಸಿತ್ತು. ಹೀಗಾಗಿ ಭಾರತೀಯರು ಈಗ ನೆರವು ನೀಡಿದ ಭಾರತಕ್ಕೆ ಮಾಲ್ಡೀವ್ಸ್​ ಎರಡು ಬಗೆಯುತ್ತಿದೆ ಎಂದು ಜನ ಛೀಮಾರಿ ಹಾಕುತ್ತಿದ್ದಾರೆ. ಹಾಗಾದರೆ, ಭಾರತ ನೀಡಿದ್ದ ಮಿಲಿಟರಿ ನೆರವು ಯಾವುದು, ಅದರ ಹೆಸರೇನು, ಹಿನ್ನೆಲೆಯೇನು ಎಂಬೆಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಾಲ್ಡೀವ್ಸ್ ಪ್ರಜಾಪ್ರಭುತ್ವ ಉಳಿಸಿದ್ದ ಆಪರೇಷನ್ ಕ್ಯಾಕ್ಟಸ್

1978ರ ಬಳಿಕ ದ್ವೀಪ ರಾಷ್ಟ್ರ ಆರ್ಥಿಕ ತೊಂದರೆಗಳು ಮತ್ತು ರಾಜಕೀಯ ಅಸ್ಥಿರತೆ ಎದುರಿಸಿತ್ತು. ಈ ಸಮಯದಲ್ಲಿ ಮೌಮೂನ್ ಅಬ್ದುಲ್ ಗಯೂಮ್ ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. ಅಸ್ಥಿರತೆಯ ಕಾರಣಕ್ಕೆ ಅವರ ಸರ್ಕಾರವು 1980, 1983 ಮತ್ತು 1988ರಲ್ಲಿ ಮೂರು ದಂಗೆಗಳನ್ನು ಎದುರಿಸಿತ್ತು. ಅದರಲ್ಲಿ 1988ರಲ್ಲಿ ಭಾರತ ಮಧ್ಯಪ್ರವೇಶಿಸಿ ಮಿಲಿಟರಿ ಕಾರ್ಯಾಚರಣೆ ನಡೆಸಿ ದಂಗೆ ಶಮನಗೊಳಿಸಿ ಮಾಲ್ಡೀವ್ಸ್ ಪ್ರಜಾಪ್ರಭುತ್ವ ಕಾಪಾಡಿತ್ತು. ಅದುವೇ ಆಪರೇಷನ್​ ಕ್ಯಾಕ್ಟಸ್​.

1988ರ ನವೆಂಬರ್ 3ರಂದು ಉಗ್ರಗಾಮಿ ಲಂಕಾ ತಮಿಳು ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಆರ್ಗನೈಸೇಶನ್ ಆಫ್ ತಮಿಳ್ ಈಳಂ (PLOTI) ನ ಸುಮಾರು 400 ಬಂದೂಕುಧಾರಿಗಳು ಮಾಲ್ಡೀವ್ಸ್ ಸ್ಥಳೀಯರ ಜತೆ ಸೇರಿಕೊಂಡು ಅಲ್ಲಿನ ಅಧ್ಯಕ್ಷರ ವಿರುದ್ಧ ದಂಗೆ ಎಬ್ಬಿಸಿದ್ದರು. ಕೆಲವು ದಾಳಿಕೋರರು ಪ್ರವಾಸಿಗರ ವೇಷದಲ್ಲಿ ಮಾಲ್ಡೀವ್ಸ್​ ರಾಜಧಾನಿ ಮಾಲೆಗೆ ನುಗ್ಗಿದ್ದರು. ಭಾರತೀಯ ನೌಕಾಪಡೆಯ ಪ್ರಕಾರ, ದಂಗೆಗೆ ಪ್ರಯತ್ನಿಸಿದ ದಾಳಿಕೋರರು ಸುಮಾರು 300-500 ಸಂಖ್ಯೆಯಲ್ಲಿದ್ದರು. ಮಾಲ್ಡೀವ್ಸ್ ಉದ್ಯಮಿಗಳಾದ ಅಬ್ದುಲ್ಲಾ ಲುತುಫಿ ಮತ್ತು ಅಹ್ಮದ್ ಸಾಗರು ನಾಸಿರ್ ಅವರ ಚಿತಾವಣೆಯಿಂದ ದಂಗೆ ಎದ್ದಿತ್ತು. PLOTE ನಾಯಕ ಉಮಾ ಮಹೇಶ್ವರನ್ ಈ ದಾಳಿಯ ನೇತೃತ್ವ ವಹಿಸಿದ್ದರು.

ತಿಂಗಳುಗಳ ಸಿದ್ಧತೆಗಳ ನಂತರ ಬಂಡುಕೋರರು ಮಾಲೆ ಮೇಲೆ ದಾಳಿ ಮಾಡಿದ್ದರು ಎಂಬುದು ದಾಖಲಾಗಿದೆ. ಭಾರೀ ಪ್ರಮಾಣದ ಬಂದೂಕುಗಳು, ಎಕೆ -47 ಗನ್​ಗಳು , ಗ್ರೆನೇಡ್​ಗಳೊಂದಿಗೆ ಬಂದಿದ್ದ ಅವರು ಆಯಕಟ್ಟಿನ ಕಟ್ಟಡಗಳ ಮೇಲೆ ದಾಳಿಯನ್ನು ನಡೆಸಿದ್ದರು. ಪ್ರಮುಖ ಸರ್ಕಾರಿ ಕಟ್ಟಡಗಳು, ವಿಮಾನ ನಿಲ್ದಾಣಗಳು, ಬಂದರುಗಳು, ದೂರದರ್ಶನ ಮತ್ತು ರೇಡಿಯೋ ಕೇಂದ್ರಗಳು ಸೇರಿದಂತೆ ರಾಜಧಾನಿ ಮೇಲೆ ಬಹುತೇಕ ನಿಯಂತ್ರಣ ಪಡೆದುಕೊಂಡಿದ್ದರು. ಮಾಲ್ಡೀವ್ಸ್‌​​ನ ಏಕೈಕ ಸಶಸ್ತ್ರ ಪಡೆ ಎನ್ಎಸ್ಎಸ್​ನ ಪ್ರಧಾನ ಕಚೇರಿಯೂ ಬಂಡುಕೋರರ ವಶವಾಗಿತ್ತು.

ಶಿಕ್ಷಣ ಸಚಿವರ ಒತ್ತೆ

ದಂಗೆಕೋರರು ಮಾಲ್ಡೀವ್ಸ್ ಶಿಕ್ಷಣ ಸಚಿವರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಅದಾದ ಬಳಿಕ ಬಂಧೂಕಧಾರಿಗಳು ಅಧ್ಯಕ್ಷರ ಮನೆ ಮೇಲೆ ದಾಳಿ ಆರಂಭಿಸಿದ್ದರು. ಈ ವೇಳೆ ಮಾಲ್ಡೀವ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾಲ್ಡೀವ್ಸ್ ಅಧ್ಯಕ್ಷ ಗಯೂಮ್ ಅವರನ್ನು ಸುರಕ್ಷಿತ ಮನೆಗೆ ಸೇರಿಸಿದ್ದರು. ಬಳಿಕ ಅಧ್ಯಕ್ಷ ಗಯೂಮ್ ಅಲ್ಲಿಂದಲೇ ಹಲವು ದೇಶಗಳ ಮಿಲಿಟರಿ ನೆರವು ಕೋರಿದ್ದರು. ಅದಕ್ಕೆ ಮೊದಲು ಸ್ಪಂದಿಸಿದ್ದು ಭಾರತ.

ಭಾರತೀಯ ಹೈಕಮಿಷನ್​​ಗೆ ಬೆಳಗ್ಗೆ 6.30ರ ಸುಮಾರಿಗೆ ಈ ಮಾಹಿತಿ ಬಂದಿತ್ತು. ತಕ್ಷಣವೇ ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಬಿಕ್ಕಟ್ಟು ಸಮಿತಿ ಸಭೆ ಕರೆದು ನೆರವು ನೀಡಲು ಒಪ್ಪಿದರು. ಸಂಭಾವ್ಯ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನಾ ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಲಾಗಿತ್ತು.

ಕರ್ನಲ್ ಸುಭಾಷ್ ಸಿ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಆಗ್ರಾದಲ್ಲಿ ಬೀಡುಬಿಟ್ಟಿರುವ 50ನೇ ಸ್ವತಂತ್ರ ಪ್ಯಾರಾಚೂಟ್ ಬ್ರಿಗೇಡ್ ಗೆ ತಿಳಿಸಲಾಯಿತು. ರಾತ್ರಿ 9.30ರ ಸುಮಾರಿಗೆ ವಾಯುಪಡೆಯ 44 ಸ್ಕ್ವಾಡ್ರನ್, ಪ್ಯಾರಾಚೂಟ್ ಬ್ರಿಗೇಡ್​ ಮಾಲ್ಡೀವ್ಸ್​​ನ ಮುಖ್ಯ ವಿಮಾನ ನಿಲ್ದಾಣವಾದ ಹುಲ್ಹುಲೆಗೆ ಬಂದಿಳಿದಿತ್ತು. ಅದೇ ಸಮಯದಲ್ಲಿ, ಭಾರತೀಯ ನೌಕಾಪಡೆಯು ಮಾಲ್ಡೀವ್ಸ್ ಕಡೆಗೆ ಹಡಗುಗಳನ್ನು ಕಳುಹಿಸಿತ್ತು. ಪ್ಯಾರಾಟ್ರೂಪ್​ ಸೇರಿದಂತೆ ಸುಮಾರು 1,600 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆಪರೇಷನ್​ ಕ್ಯಾಕ್ಟಸ್ ಗಂಭೀರವಾಗಿ ಆರಂಭಗೊಂಡಿತ್ತು.

ಇದನ್ನೂ ಓದಿ : Boycott Maldives: ಮಾಲ್ಡೀವ್ಸ್‌ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?

ತಲ್ಲಣಗೊಂಡ ಬಂಡುಕೋರರು

ಭಾರತೀಯ ಪಡೆಗಳ ಆಗಮನದ ಸುದ್ದಿಯು ಬಂಡುಕೋರರ ಸ್ಥೈರ್ಯಗುಂದಿಸಿತ್ತು. ಅವರು ಭಾರತೀಯ ಸೈನಿಕರ ಕೈಯಲ್ಲಿ ಸಾಯುವುದನ್ನು ತಪ್ಪಿಸಲು ಅಲ್ಲಿಂದ ಪಲಾಯನ ಮಾಡಿದರು. ದ್ವೀಪ ರಾಷ್ಟ್ರಕ್ಕೆ ಹೋಗಿದ್ದ ಭಾರತೀಯ ಸೈನಿಕರು ಕಾನೂನು ಮತ್ತು ಸುವ್ಯವಸ್ಥೆ ಪುನಃಸ್ಥಾಪಿಸಿದ್ದರು. ದ್ವೀಪದಲ್ಲಿ ಉಳಿದ ಬಂಡುಕೋರರನ್ನು ತಟಸ್ಥಗೊಳಿಸಿದ್ದರು. ನವೆಂಬರ್ 4ರಂದು ಮುಂಜಾನೆ 5 ಗಂಟೆಯ ಹೊತ್ತಿಗೆ ಪಡೆ ಅಧ್ಯಕ್ಷ ಗಯೂಮ್ ಅವರು ಮರು ಅಧಿಕಾರ ವಹಿಸಿಕೊಂಡರು.

ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭಾರತೀಯ ವಾಯುಪಡೆಯ ಅಶೋಕ್ ಚೋರ್ಡಿಯಾ ಅವರು ತಮ್ಮ ಪುಸ್ತಕ ಆಪರೇಷನ್ ಕ್ಯಾಕ್ಟಸ್ (2018)ನಲ್ಲಿ, ಬಂಡುಕೋರರಿಗೆ ಭಾರತೀಯ ಪಡೆಗಳ ನಿಜವಾದ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ನಮ್ಮ ಸಂಖ್ಯೆಯನ್ನು ಅತಿಯಾಗಿ ಅಂದಾಜು ಮಾಡಿದ್ದರು. ಹೆದರಿ ಪಲಾಯನ ಮಾಡಿದರು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Boycott Maldives: `ಭಾರತವೇ ನಮ್ಮ 911′ ಎಂದ ಮಾಲ್ಡೀವ್ಸ್ ಮಾಜಿ ಸಚಿವೆ

ಒತ್ತೆಯಾಳುಗಳನ್ನು ಬಿಡಿಸಿದ್ದರು

ಪಲಾಯನ ಮಾಡುವ ಹಾದಿಯಲ್ಲಿ ಬಂಡುಕೋರರು ವ್ಯಾಪಾರಿ ಹಡಗೊಂದನ್ನು ಒತ್ತೆ ಇಟ್ಟುಕೊಂಡು ಸಾರಿಗೆ ಸಚಿವ ಅಹ್ಮದ್ ಮುಜುತಾಬಾ ಸೇರಿದಂತೆ ಏಳು ಒತ್ತೆಯಾಳುಗಳ ಸಮೇತ ಶ್ರೀಲಂಕಾದ ಕಡೆಗೆ ಪರಾರಿಯಾಗಲು ಯತ್ನಿಸಿದ್ದರು. ಭಾರತೀಯ ಪ್ಯಾರಾಟ್ರೂಪ್​ಗಳು ಪಲಾಯನ ಮಾಡುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿ ಒತ್ತೆಯಾಳುಗಳನ್ನು ರಕ್ಷಿಸಿತ್ತು. ಯುದ್ಧನೌಕೆಗಳಾದ ಐಎನ್ಎಸ್ ಬೆಟ್ವಾ (ಕೊಚ್ಚಿಯಿಂದ ನಿಯೋಜಿಸಲಾಗಿದೆ) ಮತ್ತು ಐಎನ್ಎಸ್ ಗೋಧಾವರಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಆರಂಭದಲ್ಲಿ ಪ್ರತಿರೋಧ ಒಡ್ಡಿದ್ದ ಬಂಡುಕೋರರು ಬಳಿಕ ಭಾರತದ ದಾಳಿ ತಡೆಯಲು ಸಾಧ್ಯವಾಗದೇ ಶರಣಾಗಿದ್ದರು.

ವರದಿಗಳ ಪ್ರಕಾರ, ದಂಗೆಯ ಪ್ರಯತ್ನದಲ್ಲಿ ಸುಮಾರು 19 ಮಂದಿ ಮೃತಪಟ್ಟಿದ್ದರು. ದಂಗೆಯಲ್ಲಿ ಹಲವು ಪ್ರವಾಸಿಗರು ಪ್ರಾಣ ಬಿಟ್ಟಿದ್ದರು. ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಬಂಡುಕೋರರನನ್ನು ಬಂಧಿಸಲಾಗಿತ್ತು. ದಂಗೆ ಪ್ರಯತ್ನದ ಮಾಸ್ಟರ್ ಮೈಂಡ್ ಮಾಲ್ಡೀವ್ಸ್ ಉದ್ಯಮಿ ಅಬ್ದುಲ್ಲಾ ಲುತುಫಿ ಮತ್ತು ಇತರ ಮೂವರಿಗೆ ಮರಣದಂಡನೆಯೂ ಘೋಷಣೆಯಾಗಿತ್ತು. ನಂತರ ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರ ಕೋರಿಕೆಯ ಮೇರೆಗೆ ಶಿಕ್ಷೆಯ ಪ್ರಮಾಣ ಬದಲಾಯಿಸಲಾಗಿತ್ತು.

ಎರಡೂ ದೇಶಗಳ ಸಂಬಂಧ ವೃದ್ಧಿ

ಮಾಲ್ಡೀವ್ಸ್​​ನಲ್ಲಿ ಪ್ರಜಾಪ್ರಭುತ್ವ ಪುನರ್​ ಸ್ಥಾಪಿಸಿದ ಭಾರತೀಯ ಪ್ಯಾರಾಟ್ರೂಪ್​ 15 ದಿನ ಅಲ್ಲೇ ಉಳಿದತ್ತು. ಈ ಕಾರ್ಯಾಚರಣೆಯು ಎರಡು ನೆರಯ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಿತ್ತು. ಆಪರೇಷನ್ ಕ್ಯಾಕ್ಟಸ್​​ ಬಗ್ಗೆ ಭಾರತವು ಜಾಗತಿಕ ಮೆಚ್ಚುಗೆ ಗಳಿಸಿತ್ತು. ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಇದನ್ನು “ಪ್ರಾದೇಶಿಕ ಸ್ಥಿರತೆಗೆ ಅಮೂಲ್ಯ ಕೊಡುಗೆ” ಎಂದು ಬಣ್ಣಿಸಿದ್ದರು. ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್, “ಭಾರತಕ್ಕಾಗಿ ದೇವರಿಗೆ ಧನ್ಯವಾದಗಳು” ಎಂದು ಹೇಳಿದ್ದರು. ಆದಾಗ್ಯೂ ಕಳೆದ ಕೆಲವು ದಶಕಗಳಲ್ಲಿ ಕೆಲವು ರಾಜಕೀಯ ಶಕ್ತಿಗಳು ಚೀನಾ ಪರ ‘ಇಂಡಿಯಾ ಔಟ್’ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಗಳು ಹಾಳಾಗಿವೆ.

Exit mobile version