Site icon Vistara News

RSS Baithak | ಭಾರತವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕಿಲ್ಲ, ಅದು ಈಗಲೂ ಹಿಂದು ರಾಷ್ಟ್ರವೇ: ಆರೆಸ್ಸೆಸ್‌ ಪ್ರತಿಪಾದನೆ

RSS hindu rashtra

ರಾಯಪುರ (ಛತ್ತೀಸ್‌ಗಢ): ʻʻಭಾರತವನ್ನು ಹಿಂದು ರಾಷ್ಟ್ರ ಎಂದು ಸರಕಾರ ಘೋಷಣೆ ಮಾಡುವ ಅಗತ್ಯವಿಲ್ಲ. ಇದು ಮೂಲದಲ್ಲೇ ಹಿಂದು ರಾಷ್ಟ್ರವೇ ಆಗಿದೆʼʼ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಪಾದಿಸಿದೆ.

ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಬೈಠಕ್‌ನಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾಹಿತಿ ನೀಡಿದ ಆರೆಸ್ಸೆಸ್ ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಅವರು ಈ ವಿಚಾರವನ್ನು ಪ್ರತಿಪಾದಿಸಿದರು.

ʻʻಹಿಂದು ರಾಷ್ಟ್ರ ಎಂದರೆ ಹಿಂದು ಸಮಾಜ. ರವೀಂದ್ರ ನಾಥ ಠಾಗೋರರು ಕೂಡಾ ಈ ಬಗ್ಗೆ ಹೇಳಿದ್ದಾರೆʼʼ ಎಂದ ಅವರು, ʻʻನಾವು ಯಾವುದೇ ಹೊಸ ಸಮೂಹಗಳಿಂದ ಭಯ ಪಡುವುದಿಲ್ಲ, ಅನ್ಯರನ್ನೂ ನಮ್ಮವರು ಎಂದು ಭಾವಿಸುತ್ತೇವೆʼʼ ಎಂದು ವೈದ್ಯ ಅವರು ಹೇಳಿದರು.

ಸಮಾಜದಲ್ಲಿ ಹಿಂದುತ್ವ ಪ್ರಕಟವಾಗಲಿ
ʻʻಸರ್ಕಾರ ಇದನ್ನು ಹಿಂದು ರಾಷ್ಟ್ರ ಎಂದು ಘೋಷಣೆ ಮಾಡುವ ಅಗತ್ಯವಿಲ್ಲ.‌ ಇದು ಹಿಂದು ರಾಷ್ಟ್ರವೇ. ಇಲ್ಲಿ ಸರ್ಕಾರಕ್ಕಿಂತಲೂ ಸಮಾಜದ ಕೆಲಸ ಹೆಚ್ಚಿದೆ. ಸಮಾಜದಲ್ಲಿ ಹಿಂದುತ್ವ ಪ್ರಕಟ ಮಾಡಲು ಪ್ರಯತ್ನ ಮಾಡಬೇಕು. ಸಮಾಜದ ಎಲ್ಲರೊಳಗೂ ಈಶ್ವರತ್ವ ಇದೆ ಎಂದಮೇಲೆ ಜಾತಿ ಭೇದ ಏಕಿದೆ? ಸ್ತ್ರೀಯರನ್ನು ಏಕೆ ಸಮಾನವಾಗಿ ಕಾಣಲಾಗುತ್ತಿಲ್ಲ? ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ಹಿಂದುತ್ವದ ಪ್ರಕಟೀಕರಣ ಆಗುತ್ತದೆ. ಈ ನಿಟ್ಟಿನಲ್ಲಿ ಧನಾತ್ಮಕ ಬೆಳವಣಿಗೆಗಳು ಕಾಣುತ್ತಿವೆʼʼ ಎಂದರು.

ʻʻಭಾರತೀಯ ವಿವಿಗಳಲ್ಲಿ ಹಿಂದುತ್ವದ ಕುರಿತು ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆʼʼ ಎಂದು ವೈದ್ಯ ಅವರು ಹೇಳಿದರು.

ಭಾರತ್ ಜೋಡೊ ಯಾತ್ರೆಯಲ್ಲಿ ದ್ವೇಷ ಭಾವ
ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರು ಭಾರತ್‌ ಜೋಡೊ ಕಾರ್ಯಕ್ರಮದಲ್ಲಿ ಜೋಡಿಸುವುದಕ್ಕಿಂತಲೂ ದ್ವೇಷ ಭಾವವೇ ವಿಜೃಂಭಿಸುತ್ತಿದೆ ಎಂದು ಡಾ. ಮನಮೋಹನ್‌ ವೈದ್ಯ ಅವರು ಹೇಳಿದರು.
ʻʻಭಾರತವನ್ನು ಯಾರು ಬೇಕಾದರೂ ಜೋಡಿಸಬಹುದು. ಆದರೆ ಆತ್ಮೀಯತೆಯಿಂದ ಜೋಡಿಸಬೇಕೇ ಹೊರತು ಇತರರ ವಿರೋಧದಿಂದ ಅಲ್ಲ. ಹಿಂದುತ್ವದ ಆಧಾರದಲ್ಲಿ ಜೋಡಿಸಿದರೆ ಒಳ್ಳೆಯದುʼʼ ಎಂದ ವೈದ್ಯ ಅವರು, ಈ ಯಾತ್ರೆ ಸ್ವಲ್ಪ ಪೊಲಿಟಿಕಲ್ ಗಿಮಿಕ್ ರೀತಿ ಕಾಣುತ್ತಿದೆ. ದ್ವೇಷವನ್ನು ಇವರು ಹಿಂದಿನಿಂದಲೂ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಅವರ ಪೂರ್ವಜರೂ ಧ್ವೇಷ ಭಾವವನ್ನು ಅನುಸರಿಸಿದರು. ಸಂಘವನ್ನು ನಾಶ ಮಾಡುವ ಪ್ರಯತ್ನ ಮಾಡಿದರುʼʼ ಎಂದು ಹೇಳಿದರು.

ʻʻರಾಷ್ಟ್ರೀಯ ಸ್ವಯಂಸೇವಕ ಸಂಘ ಪೀಳಿಗೆಯಿಂದ ಪೀಳಿಗೆಗೆ ಸತ್ಯದ ಆಧಾರದಲ್ಲಿ ನಡೆಯುತ್ತಿದೆ. ಈ ಯಾತ್ರೆಯಲ್ಲೂ ಧ್ವೇಷ ಭಾವನೆ ಕಾಣುತ್ತಿದೆ. ಇವರ ನಡವಳಿಕೆ ಪ್ರತಿಕ್ರಿಯೆ ನೀಡಲೂ ಯೋಗ್ಯವಲ್ಲ. ಅವರಿಗೆ, ಆರೆಸ್ಸೆಸ್ ಗಣವೇಶ ಬದಲಾಗಿದೆ ಎಂಬ ಮಾಹಿತಿಯೂ ಇಲ್ಲʼʼ ಎಂದರು.

ನಮ್ಮದು ಉದ್ಯೋಗ ಪ್ರಧಾನ ದೇಶ
ʻʻಭಾರತ ಕೃಷಿ ಪ್ರಧಾನ ದೇಶವಲ್ಲ, ಉದ್ಯೋಗ ಪ್ರಧಾನ ದೇಶವಾಗಿತ್ತು. ಭಾರತದಿಂದ ಆಹಾರವನ್ನು ಹೊರಕ್ಕೆ ಮಾರುತ್ತಿರಲಿಲ್ಲ. ಭಾರತದಲ್ಲಿ ಕೃಷಿ ಚೆನ್ನಾಗಿತ್ತು, ಆದರೆ ಅದನ್ನು ರಫ್ತು ಮಾಡುತ್ತಿರಲಿಲ್ಲ. ಚರ್ಮದ ಉತ್ಪನ್ನಗಳು, ಲೋಹ, ಬೆಳ್ಳಿ, ಸಾಂಬಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದೆವು. ಹಾಗಾಗಿ ಭಾರತವನ್ನು ಕೃಷಿ ಪ್ರಧಾನ ದೇಶ ಎನ್ನುವುದಕ್ಕಿಂತ, ಉದ್ಯೋಗ ಪ್ರಧಾನ ದೇಶ ಎನ್ನಬಹುದುʼʼ ಎಂದರು ಡಾ. ವೈದ್ಯ.

ರಾಷ್ಟ್ರೀಯ ಜನಸಂಖ್ಯಾ ನೀತಿ ಬೇಕು
ದೇಶದಲ್ಲಿ ಜನಸಂಖ್ಯಾ ನಿಯಂತ್ರಣದ ಅಗತ್ಯತೆಯನ್ನು, ಅದರಲ್ಲೂ ಒಂದು ಕುಟುಂಬ ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬ ಬಗ್ಗೆ ಸ್ಪಷ್ಟ ನಿಲುವಿನ ಅವಶ್ಯಕತೆಯನ್ನು ಆರೆಸ್ಸೆಸ್‌ ಪ್ರತಿಪಾದಿಸಿದೆ. ʻʻರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಜಾರಿ ಮಾಡಬೇಕು ಎಂದು ಈ ಹಿಂದಿನಿಂದಲೂ ಹೇಳುತ್ತಿದ್ದೇವೆ. ಮುಂದಿನ ಐವತ್ತು ವರ್ಷಗಳ ಸಾಧನ, ಸಂಪನ್ಮೂಲಗಳ ಆಧಾರದಲ್ಲಿ ಸರ್ಕಾರ ನೀತಿ ರೂಪಿಸಬೇಕುʼʼ ಎಂದು ಡಾ. ವೈದ್ಯ ಹೇಳಿದರು.

ಏನಿದು ಸಮನ್ವಯ ಬೈಠಕ್‌?
ರಾಷ್ಟ್ರೀಯ ಸ್ವಯಂಸೇವಕ ಸಂಘದಡಿ ಕಾರ್ಯಾಚರಿಸುತ್ತಿರುವ ೩೬ ಸಂಘಟನೆಗಳ ನಡುವೆ ಸಮನ್ವಯಕ್ಕಾಗಿ ಸೆಪ್ಟೆಂಬರ್‌ ೧೦ರಂದು ಮೂರು ದಿನಗಳ ಈ ಬೈಠಕ್‌ ಆರಂಭಗೊಂಡಿದೆ. ವಿದ್ಯಾ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಸಕ್ಷಮ್‌, ವನವಾಸಿ ಕಲ್ಯಾಣ್ ಆಶ್ರಮ್‌, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್‌, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಜನತಾ ಪಾರ್ಟಿ, ಅಖಿಲ ಭಾರತೀಯ ಮಜ್ದೂರ್ ಸಂಘ ಸೇರಿದಂತೆ ರಾಷ್ಟ್ರೀಯತೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸುವ ೩೬ ಸಂಸ್ಥೆಗಳು ಈ ಸಭೆಯಲ್ಲಿ ಪಾಲ್ಗೊಂಡಿವೆ. ಸಂಘಟನೆಗಳು ತಾವು ಮಾಡುತ್ತಿರುವ ಕೆಲಸ ಮತ್ತು ಮುಂದೆ ಸಮಗ್ರವಾಗಿ ಆಗಬೇಕಾಗಿರುವ ಬದಲಾವಣೆಗಳಿಗೆ ಸಲಹೆ ನೀಡಿವೆ.

ಸರ ಸಂಘ ಚಾಲಕ ಡಾ. ಮೋಹನ್‌ ಭಾಗವತ್‌, ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್‌, ಮನ್‌ಮೋಹನ್‌ ವೈದ್ಯ, ಅರುಣ್‌ ಕುಮಾರ್‌, ಮುಕುಂದ್, ರಾಮ್‌ದತ್‌ ಚಕ್ರಧರ್‌ ಸೇರಿದಂತೆ ಎಲ್ಲ ಸಹ ಸರಕಾರ್ಯವಾಹರು ಈ ಬೈಠಕ್‌ನಲ್ಲಿ ಪಾಲೊಂಡಿದ್ದು, ಸೋಮವಾರ ಸಂಜೆ ಸಮಾರೋಪಗೊಳ್ಳಲಿದೆ.

Exit mobile version