ನವ ದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಶನಿವಾರವೂ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ ಕಂಡಿದೆ. ಶುಕ್ರವಾರ (ಜು.1) ರಂದು 17,070 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ (ಜು.2) ಇದು 17,092ಕ್ಕೇರಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,34,86,326 ಕ್ಕೆ ಏರಿಕೆಯಾಗಿದೆ.
ಸದ್ಯ ದೇಶದಲ್ಲಿ ಈವರೆಗೂ 1,09,568 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 2,379 ಪ್ರಕರಣಗಳು ಹೆಚ್ಚಾಗಿದೆ. ಇನ್ನು ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 29 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದ್ದರ ಸಂಖ್ಯೆ 5,25,168 ಕ್ಕೆ ಏರಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ 14,684 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಈವರೆಗೂ 4,28,51,590 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜತೆಗೆ ಲಸಿಕಾ ಅಭಿಯಾನವನ್ನು ಆಯಾ ರಾಜ್ಯಗಳ ಆರೋಗ್ಯ ಇಲಾಖೆ ಚುರುಕುಗೊಳಿಸಿದ್ದು, ಒಂದೇ ದಿನದಲ್ಲಿ 1,09,568 ಡೋಸ್ಗಳ ವಿತರಣೆ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ದೇಶಾದ್ಯಂತ 1,97,84,80,015 ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.
ಇದನ್ನು ಓದಿ| ಕೊರೊನಾ ದಿಢೀರ್ ಏರಿಕೆ; ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತಪಾಸಣೆ ಕಡ್ಡಾಯ