ನವ ದೆಹಲಿ : ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬುಧವಾರ (ಜೂ.29) 14,506 ಕೊರೊನಾ ಕೇಸ್ಗಳು ದಾಖಲಾಗಿದ್ದವು. ಆದರೆ, ಗುರುವಾರ (ಜೂ.30) ಒಂದೇ ದಿನ ಹೊಸದಾಗಿ 18,819 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,34,52,164 ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಲ್ಲಿ 122 ದಿನಗಳ ನಂತರ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿ ದಾಟಿದ್ದು, (1,04,555) ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 39 ಮಂದಿ ಮೃತಪಟ್ಟಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 5,25,116 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ| ಮತ್ತೆ ಕೊರೊನಾ ಏರಿಕೆ: ಕಳೆದ 24 ಗಂಟೆಯಲ್ಲಿ 14,506 ಕೇಸ್, 30 ಸಾವು
ಒಟ್ಟಾರೆ ದೇಶದಲ್ಲಿ 0.24% ಪಾಸಿಟಿವಿಟಿ ದರ ಇದ್ದು, ಪ್ರತಿನಿತ್ಯ 4.16% ರಷ್ಟು ಪಾಸಿಟಿವಿಟಿ ರೇಟ್ ದಾಖಲಾಗುತ್ತಿದೆ. ಬುಧುವಾರಕ್ಕೆ ಹೋಲಿಸಿಕೊಂಡರೆ ಇಂದು (ಗುರುವಾರ) 4,953 ಹೊಸ ಕೇಸ್ಗಳು ಹೆಚ್ಚಾಗಿದ್ದು, ಕೊರೊನಾ ನಾಲ್ಕನೇ ಅಲೆಯ ಭೀತಿ ಶುರು ಮಾಡಿದೆ. ಸದ್ಯಕ್ಕೆ ದೇಶದಲ್ಲಿ ಈವರೆಗೆ 4,28,22,493 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದಲ್ಲಿ ಕಳೆದ ಕೆಲ ವಾರದಿಂದ ಕೊರೊನಾ ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರ್ಕಾರ, ಆಯಾ ರಾಜ್ಯಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದೆ, ಅಲ್ಲದೆ ಬೇರೆ ರಾಜ್ಯಗಳಿಂದ, ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ವಹಿಸುವಂತೆ ಸೂಚನೆ ನೀಡಿದೆ. ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇಕಡ 2 ರಷ್ಟು ಮಂದಿಯಲ್ಲಿ ಕೊರೊನಾ ಪತ್ತೆಯಾಗುತ್ತಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಆರ್ಟಿಪಿಸಿಆರ್ ಟೆಸ್ಟ್ ನಡೆಸುವಂತೆ ಸೂಚಿಸಿದೆ. ಪರೀಕ್ಷೆ ಬಳಿಕ, ವರದಿ ಬರುವವರೆಗೆ ಐಸೋಲೇಶನ್ಗೆ ಒಳಗಾಗುವಂತೆ ನಿರ್ದೇಶನ ನೀಡುವಂತೆ ಸೂಚಿಸಿದೆ.
ಕೊರೊನಾ ಹೆಚ್ಚಾಗುತ್ತಿರುವುದರಿಂದ ದೇಶದಲ್ಲಿ ಲಸಿಕಾ ಅಭಿಯಾನವನ್ನು ಹೆಚ್ಚಿಸಲಾಗಿದೆ. ಕಳೆದ 24 ಗಂಟೆಯಲ್ಲೇ 14 ಲಕ್ಷ ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಒಟ್ಟಾರೆ 197.61 ಕೋಟಿ ಕೊರೊನಾ ಡೋಸ್ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ| ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ: 24 ಗಂಟೆಯಲ್ಲಿ17,073 ಹೊಸ ಕೇಸ್ಗಳು ಪತ್ತೆ, 21 ಜನರು ಸಾವು