Site icon Vistara News

G20 Summit 2023: ಚೀನಾಗೆ ಭಾರತ ಸೆಡ್ಡು, ಅಸ್ತಿತ್ವಕ್ಕೆ ಬಂತು ಮಧ್ಯ ಪ್ರಾಚ್ಯ ಆರ್ಥಿಕ ಕಾರಿಡಾರ್! ಪಾಕಿಸ್ತಾನಕ್ಕೆ ದಿಗಿಲು

India-Middle-East Corridor Mou signed by stakeholders nations at G20 Summit 2023

ನವದೆಹಲಿ: ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ (G20 Summit 2023) ನೆರೆ ಚೀನಾಗೆ ಸೆಡ್ಡು ಹೊಡೆಯುವ ಒಪ್ಪಂದವೊಂದು ಏರ್ಪಟ್ಟಿದೆ. ಚೀನಾ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್‌ಗೆ (China Belt and Road Initiative) ಮುಂದಿನ ವರ್ಷ 10 ವರ್ಷದ ತುಂಬಲಿದೆ. ಚೀನಾದ ಈ ಕಾರಿಡಾರ್‌ಗೆ ಠಕ್ಕರ್ ಕೊಡಲು ಭಾರ, ಅಮೆರಿಕ ಯುಎಇ, ಸೌದಿ ಅರೆಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ‘ಇಂಡಿಯಾ-ಮಿಡಲ್ ಈಸ್ಟ್ ಯುರೋಪ್ ಎಕಾನಾಮಿಕ್ ಕಾರಿಡಾರ್(IMME-EC ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್)‌ ರಚಿಸುವ ಸಂಬಂಧ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕಿವೆ. ಈ ಮೂಲಕ ಚಿನಾ ಅಧ್ಯಕ್ಷ ಜಿನ್‌ಪಿಂಗ್ ಅವರಿಗೆ ಚೆಕ್‌ಮೆಟ್ ನೀಡಿವೆ. ಈ ಮಧ್ಯೆ, ಭಾರತದ ಈ ಪ್ರಯತ್ನಕ್ಕೆ ಪಾಕಿಸ್ತಾನದಲ್ಲಿ (Pakistan) ಆಕ್ರೋಶ ವ್ಯಕ್ತವಾಗಿದೆ. ಈ ಹೊಸ ಕಾರಿಡಾರ್‌ನಿಂದಾಗಿ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ(Saudi Arabia) 25 ಬಿಲಿಯನ್ ಅಮೆರಿಕನ್ ಡಾಲರ್ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದಲ್ಲಿ ಜಿ-7 ಶಕ್ತಿಯಾಗಿರುವ ಇಟಲಿ ಚೀನಾ ಪ್ರಾಯೋಜಿತ ಬಿಆರ್‌ಐನಿಂದ ಹಿಂದೆ ಸರಿಯಲು ಸಿದ್ಧವಾಗಿರುವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಕೈಜೋಡಿಸಲು ಮುಂದಾಗುತ್ತಿರುವಾಗಲೇ, ಈ ಹೊಸ ಎಕಾನಾಮಿಕ್ ಕಾರಿಡಾರ್‌ ಯೋಜನೆಯನ್ನು ದೃಢವಾಗಿ ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಆಗ್ರಹ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಿಕಟ ಸ್ನೇಹಿತ ಹಾಗೂ ಭಾರತದ ಮಿತ್ರರೂ ಆಗಿರುವ ಯುಎಇ ಅಧ್ಯಕ್ಷರು ಈ ಯೋಜನೆಯ ಆದ್ಯ ಪ್ರವರ್ತಕರಾಗಿದ್ದಾರೆ. ಅಲ್ಲದೇ, ಈ ಯೋಜನೆಯು ಅರೇಬಿಯನ್ ಪೆನಿನ್ಸುಲಾ ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ದೃಢ ನಂಬಿಕೆಯನ್ನು ಹೊಂದಿದ್ದಾರೆ. ಮೋದಿ ಅವರ ಮತ್ತೊಬ್ಬ ಆಪ್ತ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರನ್ ಬೆಂಬಲವನ್ನು ನೀಡುವುದರೊಂದಿಗೆ, ಯುರೋಪಿಯನ್ ಕಮಿಷನ್ ಜೊತೆಗೆ ಜರ್ಮನಿ ಮತ್ತು ಇಟಲಿ ಈ ಅದ್ಭುತ ಯೋಜನೆಯಲ್ಲಿ ಕೈಜೋಡಿಸಿವೆ.

ಮಧ್ಯಪ್ರಾಚ್ಯ ಕಾರಿಡಾರ್ ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿದೆ. ಪೂರ್ವ ಕಾರಿಡಾರ್ ಪಶ್ಚಿಮ ಕರಾವಳಿಯಲ್ಲಿರುವ ಮುಂದ್ರಾ ಬಂದರನ್ನು ಫುಜೈರಾ ಬಂದರಿಗೆ ಸಂಪರ್ಕಿಸುತ್ತದೆ ಮತ್ತು ನಂತರ ರೈಲ್ರೋಡ್ ಅನ್ನು ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಮೂಲಕ ಇಸ್ರೇಲಿ ಬಂದರು ಹೈಫಾಗೆ ಪ್ರಮಾಣಿತ ಕಂಟೈನರ್‌ಗಳ ಮೂಲಕ ಸರಕುಗಳನ್ನು ಸಾಗಿಸುತ್ತದೆ. ಪಶ್ಚಿಮ ಕಾರಿಡಾರ್ ಹೈಫಾದಿಂದ ಬರಲಿದೆ, ಅಲ್ಲಿಂದ ಭಾರತೀಯ ಸರಕುಗಳು ಫ್ರಾನ್ಸ್‌ನ ಮಾರ್ಸೆಲ್ಲೆ ಮತ್ತು ಇಟಲಿ ಮತ್ತು ಗ್ರೀಸ್‌ನ ಇತರ ಬಂದರುಗಳನ್ನು ತಲುಪುತ್ತವೆ.

ಈ ಸುದ್ದಿಯನ್ನೂ ಓದಿ: G20 Summit 2023: ಆರ್‌ಆರ್‌ಆರ್‌ ನನ್ನನ್ನು ಮೋಡಿ ಮಾಡಿತು; ಜಿ20 ಶೃಂಗಸಭೆಯಲ್ಲಿ ಹೊಗಳಿದ ಬ್ರೆಜಿಲ್ ಅಧ್ಯಕ್ಷ!

ಸೌದಿ ಅರೇಬಿಯಾ ನಿರ್ಮಿಸಬೇಕಾದ ಸಣ್ಣ ರೈಲುಮಾರ್ಗವನ್ನು ಹೊರತುಪಡಿಸಿ, ಸಂಪೂರ್ಣ ಕಾರಿಡಾರ್ ಪೂರ್ಣಗೊಂಡಿದೆ ಮತ್ತು ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಶುರುವಾಗಬಹುದು. ಚೀನಾದ ಪ್ರಭಾವದಿಂದ ಹೊರಬಂದು ಮ್ಯಾನ್ಮಾರ್ ಸೇನಾಡಳಿತವು ಈ ಯೋಜನೆಗೆ ಮೀಸಲಾದ ಬಂದರನ್ನು ಅನುಮತಿಸಿದರೆ, ವಿಯೆಟ್ನಾಂ, ಥಾಯ್ಲೆಂಡ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಂತಹ ದೇಶಗಳನ್ನು ಈ ಕಾರಿಡಾರ್‌ನೊಂದಿಗೆ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿರುವ ಯೋಜನೆಯು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version