Site icon Vistara News

ಪ್ರವಾದಿ ನಿಂದನೆ: ಅಲ್‌ ಖೈದಾ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಹೈ ಅಲರ್ಟ್‌

al qaeda

ನವ ದೆಹಲಿ: ಪ್ರವಾದಿ ನಿಂದನೆ ಸಂಬಂಧಿಸಿ ಅಲ್ ಖೈದಾ ನೀಡಿರುವ ದಾಳಿ ಬೆದರಿಕೆಯ ಹಿನ್ನೆಲೆಯಲ್ಲಿ ದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.

ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಅವಹೇಳನಕಾರಿ ಹೇಳಿಕೆಗಳಿಂದ ರೊಚ್ಚಿಗೆದ್ದ ಉಗ್ರ ಸಂಘಟನೆ ಅಲ್-ಖೈದಾ, ಅವಮಾನದ ಪ್ರತೀಕಾರಕ್ಕಾಗಿ ಭಾರತೀಯ ನಗರಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಅದು ಹೇಳಿತ್ತು.

ನಿರ್ದಿಷ್ಟ ನಗರಗಳ ಹೆಸರುಗಳನ್ನು ಅಲ್-ಖೈದಾ ಉಲ್ಲೇಖಿಸಿರುವುದು ಇದೇ ಮೊದಲು. ಈ ಬೆದರಿಕೆಯನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಎಲ್ಲಾ ರಾಜ್ಯ ಪೊಲೀಸರನ್ನು ಎಚ್ಚರದಲ್ಲಿ ಇಡಲಾಗಿದೆ.

ಪಾಕ್ ಕೈವಾಡ ಸಾಧ್ಯತೆ

ಇದೇ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೆ ಕೂಡ ಇದೇ ರೀತಿಯ ಬೆದರಿಕೆ ಒಡ್ಡಲಾಗಿದೆ. ಅಧಿಕಾರಿಗಳು ವೆಬ್‌ಸೈಟ್‌ನ ಸರ್ವರ್‌ನ ಮೂಲವನ್ನು ಶೋಧಿಸುತ್ತಿದ್ದಾರೆ. ಇದು ಆಫ್ರಿಕಾ, ಇರಾನ್ ಅಥವಾ ಅಫ್ಘಾನಿಸ್ತಾನದಲ್ಲಿರಬಹುದು. ಪಾಕಿಸ್ತಾನವೂ ಇದರ ನೆಲೆಯಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಲ್‌ ಖೈದಾ ಭಾರತದಲ್ಲಿ ಸದಸ್ಯರನ್ನು ಹೊಂದಿದೆ. ಅನ್ಸರ್ ಘಜ್ವತ್ ಉಲ್ ಹಿಂದ್ – ಇದು ಅಲ್‌ ಖೈದಾದ ಭಾರತೀಯ ಆವೃತ್ತಿ. ಜಾಕಿರ್ ಮೂಸಾ ಆರಂಭದಲ್ಲಿ ಇದರ ಕಮಾಂಡರ್‌ ಆಗಿದ್ದ. ಆತನನ್ನು ಕಾಶ್ಮೀರ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಅಲ್‌ ಖೈದಾ ಈಗ ಮರಳಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಲೋನ್-‌ ವೂಲ್ಫ್‌ (ಒಂಟಿ ಉಗ್ರ) ದಾಳಿಗಳನ್ನು ಕಾರ್ಯಗತಗೊಳಿಸಲು ಅದು ಚಿಂತಿಸುತ್ತಿರಬಹುದು ಎಂದು ಹೇಳಲಾಗಿದೆ. ನೂಪುರ್‌ ಶರ್ಮಾ ಅವರಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಭದ್ರತೆ ಕೋರಿದ್ದಾರೆ.

ಇದನ್ನೂ ಓದಿ: ಗುಜರಾತ್‌, ಉತ್ತರಪ್ರದೇಶ, ಮುಂಬಯಿ, ದಿಲ್ಲಿಯಲ್ಲಿ ಆಲ್-ಖೈದಾ ಆತ್ಮಾಹುತಿ ದಾಳಿ ಬೆದರಿಕೆ

Exit mobile version