Site icon Vistara News

Stock Market: ಹಾಂಕಾಂಗ್‌ ಅನ್ನು ಹಿಂದಿಕ್ಕಿದ ಭಾರತ; ನಾವೀಗ ಷೇರು ಮಾರುಕಟ್ಟೆಯಲ್ಲಿ ನಂ.4

BSE

ಹೊಸದಿಲ್ಲಿ: ಭಾರತದ ಷೇರು ಮಾರುಕಟ್ಟೆಯು (India Stock Market) ಹಾಂಕಾಂಗ್ (Hong Kong) ಅನ್ನು ಹಿಂದಿಕ್ಕಿ ಮೊದಲ ಬಾರಿಗೆ ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಬ್ಲೂಮ್‌ಬರ್ಗ್ ಮೀಡಿಯಾ ನೀಡಿರುವ ವರದಿಯ ಪ್ರಕಾರ, ಭಾರತೀಯ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಷೇರುಗಳ ಸಂಯೋಜಿತ ಮೌಲ್ಯ ಸೋಮವಾರದ ಮುಕ್ತಾಯದ ವೇಳೆಗೆ $4.33 ಲಕ್ಷ ಕೋಟಿಗೆ ತಲುಪಿದೆ. ಹಾಂಕಾಂಗ್‌ನಲ್ಲಿ ಅದು $4.29 ಲಕ್ಷ ಕೋಟಿಯಲ್ಲಿತ್ತು.

ಭಾರತದ ಷೇರುಪೇಟೆ ಬಂಡವಾಳೀಕರಣವು ಡಿಸೆಂಬರ್ 5ರಂದು ಮೊದಲ ಬಾರಿಗೆ $4 ಲಕ್ಷ ಕೋಟಿ ದಾಟಿತ್ತು. ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಹೂಡಿಕೆದಾರರ ಪ್ರಮಾಣ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ನಿರಂತರ ಒಳಹರಿವು, ಬಲವಾದ ಕಾರ್ಪೊರೇಟ್ ಗಳಿಕೆಗಳು ಮತ್ತು ದೃಢವಾದ ಆಡಳಿತದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಬೆಳವಣಿಗೆ ಬಂದಿದೆ.

ಇದಲ್ಲದೆ, ಭಾರತವು ಚೀನಾಕ್ಕೆ ಪರ್ಯಾಯವಾಗಿ ಸ್ಥಾನ ಪಡೆದಿದೆ. ಜಾಗತಿಕ ಹೂಡಿಕೆದಾರರು ಮತ್ತು ಕಂಪನಿಗಳಿಂದ ತಾಜಾ ಬಂಡವಾಳವನ್ನು ಆಕರ್ಷಿಸುತ್ತಿದೆ. ದೇಶದ ರಾಜಕೀಯ ಸ್ಥಿರತೆ, ವೇಗವಾಗಿ ಬೆಳೆಯುತ್ತಿರುವ ಬಳಕೆ- ಚಾಲಿತ ಆರ್ಥಿಕತೆ ಕಾರಣವಾಗಿದೆ. 2023ರಲ್ಲಿ ಭಾರತೀಯ ಷೇರುಗಳಿಗೆ ಸಾಗರೋತ್ತರ ನಿಧಿಗಳು $21 ಶತಕೋಟಿಗೂ ಹೆಚ್ಚು ಹರಿದುಬಂದಿವೆ. ದೇಶದ ಬೆಂಚ್‌ಮಾರ್ಕ್ BSE ಸೆನ್ಸೆಕ್ಸ್ ಸೂಚ್ಯಂಕ ಸತತ ಎಂಟನೇ ವರ್ಷದ ಲಾಭವನ್ನು ಗಳಿಸಿದೆ.

ಮತ್ತೊಂದೆಡೆ ಹಾಂಕಾಂಗ್ ಮಾರುಕಟ್ಟೆ ಕುಸಿದಿದೆ. ಅಲ್ಲಿ ಚೀನಾದ ಕೆಲವು ಅತ್ಯಂತ ಪ್ರಭಾವಶಾಲಿ ಮತ್ತು ಹೊಸ ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ಚೈನೀಸ್ ಮತ್ತು ಹಾಂಕಾಂಗ್‌ನ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ 2021ರ ಬಳಿಕ $6 ಲಕ್ಷ ಕೋಟಿಗಿಂತಲೂ ಹೆಚ್ಚು ಕುಸಿದಿದೆ.

ಬೀಜಿಂಗ್‌ನ ಕಟ್ಟುನಿಟ್ಟಾದ ಕೋವಿಡ್-19 ವಿರೋಧಿ ನಿರ್ಬಂಧಗಳು, ಸಂಸ್ಥೆಗಳ ಮೇಲಿನ ನಿಯಂತ್ರಕ ದಮನಕಾರಿ ಕ್ರಮಗಳು, ಆಸ್ತಿ- ವಲಯ ಬಿಕ್ಕಟ್ಟು, ಪಶ್ಚಿಮ ದೇಶಗಳ ಜತೆಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚೀನಾದ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಹಾಂಕಾಂಗ್‌ನಲ್ಲಿ ಹೊಸ ಲಿಸ್ಟಿಂಗ್‌ ಆಗುತ್ತಿಲ್ಲ. ಹೀಗಾಗಿ ಈ ಮೊದಲು ಐಪಿಒಗಳಿಗೆ ʼಏಷ್ಯಾದ ಹಣಕಾಸು ಕೇಂದ್ರʼ ಎಂದು ಕರೆಸಿಕೊಂಡಿದ್ದ ಹಾಂಕಾಂಗ್‌ ತನ್ನ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದೆ.

Exit mobile version