ಭಾರತದಲ್ಲಿ ಕೊರೊನಾ ಸೋಂಕಿನ (Coronavirus) ಸನ್ನಿವೇಶ ಕೈಮೀರುತ್ತಿರುವಂತೆ ಭಾಸವಾಗುತ್ತಿದೆ. ಕಳೆದ 24ಗಂಟೆಯಲ್ಲಿ 6050 ಕೋವಿಡ್ ಕೇಸ್ಗಳು ದಾಖಲಾಗಿವೆ. ನಿನ್ನೆ ಗುರುವಾರ 5,333 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆಗಿಂತಲೂ ಇಂದು ಕೋವಿಡ್ 19 ಸೋಂಕಿತರ (Covid 19 Updates) ಸಂಖ್ಯೆಯಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 28,303. ಹಾಗೇ, 24ಗಂಟೆಯಲ್ಲಿ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇಲ್ಲಿಯವರೆಗೆ ಸೋಂಕಿನಿಂದ ಜೀವ ಕಳೆದುಕೊಂಡವರು 5,30,943 ಮಂದಿ.
ದೇಶದಲ್ಲಿ ಕೊರೊನಾ ಮತ್ತೊಂದು ಅಲೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಗ ಸೋಂಕು ಹರಡುತ್ತಿದ್ದರೂ ಅಷ್ಟೊಂದು ಮಾರಣಾಂತಿಕವಾಗಿಲ್ಲ. ಕೋವಿಡ್ 19ನಿಂದ ಸಾವನ್ನಪ್ಪುವವರ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಹೇಳಲಾಗಿದ್ದರೂ, ಹರಡುವಿಕೆ ಜೋರಾಗಿಯೇ ಇದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.3.39ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ ಶೇ.3.0 ಇದೆ. ಜತೆಜತೆಗೆ ಲಸಿಕೀಕರಣ ಕೂಡ ನಡೆಯುತ್ತಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಕೋವಿಡ್ 19 ಲಸಿಕೆ ಸಿಗುವಂತೆ ಮಾಡುವುದೇ ಕೇಂದ್ರದ ಸಂಕಲ್ಪವಾಗಿದೆ.
ಇಂದು ಉನ್ನತ ಮಟ್ಟದ ಸಭೆ
ದೇಶದಲ್ಲಿ ಪ್ರತಿದಿನ ದಾಖಲಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ 1000 ಗಳಷ್ಟು ಹೆಚ್ಚುತ್ತಿದೆ. ಹೀಗಾಗಿ ದೇಶದಲ್ಲಿನ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ನಡೆಸಲು ಇಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಟ್ಟಿಗೆ ವರ್ಚ್ಯುವಲ್ ಸಭೆ ನಡೆಸಲಿದ್ದಾರೆ. ‘ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇಂದು ಆರೋಗ್ಯ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ, ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪರಿಸ್ಥಿತಿಯ ಬಗ್ಗೆ ವರದಿ ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಈಗಾಗಲೇ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: Covid 19 Updates: ಇಂದು 5000ಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲು; ಐದು ತಿಂಗಳಲ್ಲೇ ಗರಿಷ್ಠ ಸಂಖ್ಯೆ ಇದು!
ಮಹಾರಾಷ್ಟ್ರ-ದೆಹಲಿಯಲ್ಲಿ ಕೊರೊನಾ ಹೆಚ್ಚಳ
ಇಡೀ ದೇಶದಲ್ಲಿ ಕೊರೊನಾ ವೈರಸ್ ಮಿತಿಮೀರುತ್ತಿದ್ದು, ಒಟ್ಟಾರೆ ಹೆಚ್ಚಳದಲ್ಲಿ ಬಹುಪಾಲು ಮಹಾರಾಷ್ಟ್ರ ಮತ್ತು ದೆಹಲಿಯಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಯಲ್ಲಿ 803 ಕೊರೊನಾ ಕೇಸ್ಗಳು ಪತ್ತೆಯಾಗಿದ್ದಾರೆ. ಹಾಗೇ, ಮೂವರು ಮೃತಪಟ್ಟಿದ್ದಾರೆ. ಇದರಲ್ಲಿ 216 ಸೋಂಕಿತರು ಮುಂಬಯಿಯಲ್ಲಿ ಪತ್ತೆಯಾಗಿದ್ದಾರೆ. ಅದು ಬಿಟ್ಟರೆ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 606 ಕೊರೊನಾ ಕೇಸ್ಗಳು ದಾಖಲಾಗಿವೆ. ಕಳೆದ ವರ್ಷದ ಆಗಸ್ಟ್ನಲ್ಲಿ ಬಿಟ್ಟರೆ, ದೆಹಲಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಸೋಂಕಿತರು ಇಂದಿನವರೆಗೆ ಪತ್ತೆಯಾಗಿರಲಿಲ್ಲ. ಅದರಾಚೆ, ಉತ್ತರ ಪ್ರದೇಶ, ಕೇರಳ, ಕರ್ನಾಟಕಗಳಲ್ಲೂ ಕೊರೊನಾ ಪ್ರಮಾಣ ಜಾಸ್ತಿ ಇದೆ.