ಮುಂಬೈ: ಭಾರತವನ್ನು ಅಭಿವೃದ್ದಿಪಡಿಸುತ್ತಿರುವಾಗ ನಾವು ಇತರ ದೇಶಗಳನ್ನು ಅನುಕರಿಸಲು ಹೋಗಬಾರದು. ಒಂದು ವೇಳೆ ಅನುಕರಣೆ ಮಾಡಿದರೆ ದೇಶದ ಪ್ರಗತಿ ಸಾಧ್ಯವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದ್ದಾರೆ. ಭಾರತ ವಿಕಾಸ್ ಪರಿಷತ್ ಸಂಸ್ಥಾಪಕ ಸೂರಜ್ ಪ್ರಕಾಶ್ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದ್ದು, ಬಲಶಾಲಿಯಾಗುತ್ತಿದೆ. ಇದು ಎಲ್ಲ ಭಾರತೀಯರಿಗೆ ಹೆಮ್ಮೆಯಾಗಿದೆ ಎಂದು ಹೇಳಿದರು.
ಒಂದು ದೇಶವಾಗಿ ಭಾರತವು ಅಭಿವೃದ್ಧಿಯನ್ನು ಸಾಧಿಸುತ್ತಿರುವಾಗ, ಭಾರತೀಯರು ತಮ್ಮ ತಲೆಯನ್ನು ಹೆಮ್ಮೆಯಿಂದ ಎತ್ತಿ ನಡೆಯುತ್ತಾರೆ. ಈ ಮೊದಲು ಯಾರೂ ನಮ್ಮನ್ನು ಕೇರ್ ಮಾಡುತ್ತಿರಲಿಲ್ಲ. ಇಂದು ನಾವು ಜಿ20ಗೆ ಆತಿಥ್ಯ ನೀಡುತ್ತಿದ್ದೇವೆ. ಈ ಮೊದಲು, ಒಂದು ವೇಳೆ ನಾವು ರಷ್ಯಾಗೆ ಯುದ್ಧಕ್ಕೆ ಹೋಗಬೇಡ ಹೇಳಿದರೆ, ನೀವು(ಭಾರತ) ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳುತ್ತಿದ್ದರು ಎಂದು ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟರು.
ಭಾರತ್ ವಿಕಾಸ್ ಪರಿಷತ್ ಕೂಡ ಸಂಘ ಪರಿವಾರದ ಸಂಸ್ಥೆಯಾಗಿದ್ದು, ಸೂರಜ್ ಪ್ರಕಾಶ್ ಅವರು ಈ ಸಂಸ್ಥೆಯ ಹುಟ್ಟು ಹಾಕಿದ್ದರು. ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಮುಂಬೈನ ಬಿರ್ಲಾ ಮಾತೋಶ್ರೀ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಕೈಗಾರಿಕೋದ್ಯಮಿ ಕುಮಾರ ಮಂಗಲಮ್ ಬಿರ್ಲಾ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ | RSS | ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂ: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್