ನವ ದೆಹಲಿ: ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದಾಗ ಅದನ್ನು ಮೊಟ್ಟಮೊದಲು ಖಂಡಿಸಿ, ನೂಪುರ್ ಶರ್ಮಾ ಶಿರಚ್ಛೇದಕ್ಕೆ ಕರೆಕೊಟ್ಟಿದ್ದು ಪಾಕಿಸ್ತಾನದ ಇಸ್ಲಾಂ ಮುಖಂಡರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಕೂಡ ಟ್ವೀಟ್ ಮಾಡಿ, ಬಿಜೆಪಿ ನಾಯಕಿ ಆಡಿದ ಮಾತುಗಳು ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂಥದ್ದಾಗಿದೆ. ನರೇಂದ್ರ ಮೋದಿ ಸರ್ಕಾರ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುತ್ತಿದೆ. ಇಸ್ಲಾಂ ಸಮುದಾಯಕ್ಕೆ ಸೇರಿದವರನ್ನು ಪ್ರತಿ ಹಂತದಲ್ಲೂ ಹಿಂಸಿಸುತ್ತಿದೆ. ನಮ್ಮ ಪ್ರೀತಿಯ, ಗೌರವಾನ್ವಿತ ಪ್ರವಾದಿ ಮೊಹಮ್ಮದರ ಬಗ್ಗೆ ಬಿಜೆಪಿ ನಾಯಕಿ ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದರು. ಪಾಕಿಸ್ತಾನ ವಿದೇಶಾಂಗ ಇಲಾಖೆಯೂ ಕೂಡ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿತ್ತು. ಭಾರತದ ರಾಯಭಾರಿಗೆ ಈ ದೇಶವೂ ಸಮನ್ಸ್ ನೀಡಿತ್ತು.
ತನ್ನ ಕಾಲಬುಡದಲ್ಲಿ ನೂರೆಂಟು ಸಮಸ್ಯೆಯಿದ್ದರೂ ಭಾರತದ ವಿಚಾರಕ್ಕೆ ಬಂದ ಪಾಕಿಸ್ತಾನಕ್ಕೆ ನಮ್ಮ ರಾಷ್ಟ್ರದ ವಿದೇಶಾಂಗ ಸಚಿವಾಲಯ ಖಡಕ್ ತಿರುಗೇಟು ನೀಡಿದೆ. ʼನಮ್ಮ ಭಾರತ ಸರ್ಕಾರ ಇಲ್ಲಿರುವ ಎಲ್ಲ ಧರ್ಮೀಯರಿಗೂ ಸಮಾನ ಗೌರವ ನೀಡುತ್ತದೆ. ಮೊದಲು ನಿಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಗಂಭೀರವಾಗಿ ಗಮನಹರಿಸಿ. ಅವರಿಗೆ ಸೂಕ್ತ ಭದ್ರತೆ ನೀಡಿ, ಒಳ್ಳೆಯ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ. ಅದು ಬಿಟ್ಟು ಸುಮ್ಮನೆ ಪ್ರಚಾರ ಪಡೆಯಬೇಡಿʼ ಎಂದು ಹೇಳಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಹೇಳಿಕೆಗೆ ನೀಡಿದ ಉತ್ತರದ ಪ್ರತಿಯನ್ನು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಭಗ್ಚಿ ಟ್ವೀಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?
ʼಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕು-ಸ್ವಾತಂತ್ರ್ಯಕ್ಕೆ ಚ್ಯುತಿ ಬರುತ್ತಿದೆ ಎಂದು ಪಾಕಿಸ್ತಾನ ಕಮೆಂಟ್ ಮಾಡಿದ್ದು ಗಮನಕ್ಕೆ ಬಂದಿದೆ. ತಾನೇ ಸ್ವತಃ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ರಾಷ್ಟ್ರವಾದ ಪಾಕಿಸ್ತಾನ ಈಗ ಭಾರತಕ್ಕೆ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಪಾಠ ಹೇಳುತ್ತಿರುವುದು ತುಂಬ ಅಸಂಬದ್ಧವಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದು, ಕ್ರಿಶ್ಚಿಯನ್ ಮತ್ತು ಅಹ್ಮದಿಯ್ಯಾಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಪಾಕಿಸ್ತಾನದಲ್ಲಿ ಮತಾಂಧತೆಯನ್ನು ಪ್ರಶಂಸಿಸಲಾಗುತ್ತದೆ. ಮತಾಂಧರ ಗೌರವಾರ್ಥ ಸ್ಮಾರಕಗಳೂ ನಿರ್ಮಾಣವಾಗುತ್ತದೆ. ಆದರೆ ಭಾರತ ವಿಭಿನ್ನ. ಇಲ್ಲಿ ಪ್ರತಿ ಧರ್ಮವನ್ನೂ ಗೌರವಿಸಿ, ಆದರಿಸಲಾಗುತ್ತದೆʼ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಟಿವಿ ಚಾನಲ್‌ವೊಂದಕ್ಕೆ ಡಿಬೇಟ್‌ಗೆ ಹೋಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ (ಈಗ ಅಮಾನತುಗೊಂಡಿದ್ದಾರೆ) ನೂಪುರ್ ಶರ್ಮಾ, ನಮ್ಮ ಹಿಂದೂ ದೇವರನ್ನು ಮುಸ್ಲಿಮರು ಅವಮಾನಿಸುವ ಬಗ್ಗೆ ಮಾತನಾಡಿದ್ದರು. ಹಾಗೇ, ಪ್ರವಾದಿ ಮೊಹಮ್ಮದರ ವಿರುದ್ಧ ಹೇಳಿಕೆ ನೀಡಿದ್ದರು. ಆಗಿನಿಂದಲೂ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ. ಮುಸ್ಲಿಂ ರಾಷ್ಟ್ರಗಳೂ ಅದನ್ನು ಗಂಭೀರವಾಗಿ ಪರಿಗಣಿಸಿವೆ.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು