Site icon Vistara News

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

Religious Freedom

India slams US body's religious freedom report: Biased, political agenda

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಅದರಲ್ಲೂ, ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಭಾರತ ಸರ್ಕಾರವು ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್‌ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕದ ವರದಿಯಲ್ಲಿ ಏನಿದೆ?

ಅಮೆರಿಕ ಸರ್ಕಾರದ ಆಯೋಗ ರಚಿಸಿದ ವರದಿಯಲ್ಲಿ ಭಾರತದ ಕುರಿತು ಉಲ್ಲೇಖವಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಂತೂ ತಾರತಮ್ಯದಿಂದ ಕೂಡಿರುವ ರಾಷ್ಟ್ರೀಯವಾದ ನೀತಿಗಳ ಹೇರಿಕೆಯಿಂದಾಗಿ ಧಾರ್ಮಿಕ ನಂಬಿಕೆ ಹೊಂದಿದವರಿಗೆ ಹಿನ್ನಡೆಯಾಗುತ್ತಿದೆ” ಎಂಬುದಾಗಿ ವರದಿ ತಿಳಿಸಿದೆ.

“ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡವರಿಗೆ ಅವುಗಳನ್ನು ಪಾಲಿಸಲು ಕಷ್ಟವಾಗುತ್ತಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂಬುದಾಗಿ ಅಮೆರಿಕದ ಆಯೋಗವು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರ ತಿರುಗೇಟು

ಅಮೆರಿಕದ ವರದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ತಿರುಗೇಟು ನೀಡಿದ್ದಾರೆ. “ಯುಎಸ್‌ಸಿಐಆರ್‌ಎಫ್‌ ಎಂಬುದು ಪಕ್ಷಪಾತದ ಧೋರಣೆಗಳಿಂದ ಕೂಡಿದ ಸಂಘಟನೆಯಾಗಿದ್ದು, ರಾಜಕೀಯದಿಂದ ಪ್ರೇರೇಪಿತವಾಗಿದೆ. ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್‌ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

Exit mobile version