Site icon Vistara News

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Religious Freedom

India slams US govt's report on religious freedom in country: Deeply biased

ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ನಕಾರಾತ್ಮಕವಾಗಿ ವರದಿ ಮಾಡಿದ ಅಮೆರಿಕ ಸರ್ಕಾರಕ್ಕೆ ಭಾರತವು ಸರಿಯಾಗಿಯೇ ತಿರುಗೇಟು ನೀಡಿದೆ. “ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರವು (US Government) ಬಿಡುಗಡೆಗೊಳಿಸಿದ ವರದಿಯು ಪಕ್ಷಪಾತದಿಂದ ಕೂಡಿದೆ. ಭಾರತದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರಬೇಕು ಎಂಬ ಕಾರಣಕ್ಕಾಗಿಯೇ ವರದಿಯನ್ನು ಬಿಡುಗಡೆ ಮಾಡಲಾಗಿದೆ: ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ (Randhir Jaiswal) ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತದ ಸಾಮಾಜಿಕ ಚೌಕಟ್ಟಿನ ಕುರಿತು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಮೆರಿಕ ಸರ್ಕಾರವು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ. ಮತ ಬ್ಯಾಂಕ್‌ ಹಾಗೂ ಸೂಚಿತ ದೃಷ್ಟಿಕೋನವನ್ನು ಆಧರಿಸಿ ವರದಿಯನ್ನು ತಯಾರಿಸಲಾಗಿದೆ. ಹಾಗಾಗಿ, ನಾವು ಈ ವರದಿಯನ್ನು ತಿರಸ್ಕರಿಸುತ್ತೇವೆ. ಪಕ್ಷಪಾತದ ಮೂಲಗಳನ್ನು ಅವಲಂಬಿಸಿ ವರದಿಯನ್ನು ತಯಾರಿಸಲಾಗಿದೆ. ಅಪೂರ್ಣ, ಅಸತ್ಯ, ತಪ್ಪಾಗಿ ಅರ್ಥೈಸಿಕೊಂಡು ಮಾಡಲಾದ ನಿರೂಪಣೆಗಳೇ ವರದಿಯಲ್ಲಿ ತುಂಬಿವೆ” ಎಂಬುದಾಗಿ ಹೇಳಿದರು.

ಭಾರತದ ನ್ಯಾಯಾಲಯಗಳ ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರದಿಯನ್ನು ತಯಾರಿಸಲಾಗಿದೆ. ಭಾರತೀಯ ಕೋರ್ಟ್‌ಗಳು ನೀಡಿದ ತೀರ್ಪುಗಳನ್ನು ಪ್ರಶ್ನಿಸುವ ಹಾಗೆ ವರದಿ ತಯಾರಿಸಲಾಗಿದೆ. 2023ರಲ್ಲಿ ಅಮೆರಿಕದಲ್ಲಿ ನಡೆದ ದ್ವೇಷದ ಅಪರಾಧಗಳು, ವರ್ಣಾಧಾರಿತವಾಗಿ ಭಾರತೀಯರ ಮೇಲೆ ನಡೆದ ದಾಳಿಗಳು, ಶ್ರದ್ಧಾ ಕೇಂದ್ರಗಳ ಮೇಲೆ ನಡೆದ ಆಕ್ರಮಣಗಳು, ಬೇರೆ ಅಲ್ಪಸಂಖ್ಯಾತರ ನಂಬಿಕೆಯ ಕೇಂದ್ರಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಭಾರತವು ಅಧಿಕೃತವಾಗಿ ಗಮನ ಸೆಳೆದಿತ್ತು. ಈ ಬಗ್ಗೆ ಅಮೆರಿಕ ಸರ್ಕಾರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಹೇಳಿದರು.

ಅಮೆರಿಕದ ವರದಿಯಲ್ಲೇನಿತ್ತು?

ಜಾಗತಿಕ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರವು ವರದಿ ಬಿಡುಗಡೆ ಮಾಡಿದ್ದು, ಭಾರತದ ಕುರಿತು ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು, ದ್ವೇಷ ಭಾಷಣದಂತಹ ಪ್ರಕರಣಗಳು, ಅಲ್ಪಸಂಖ್ಯಾತರ ನಿವಾಸಗಳನ್ನು ನೆಲಸಮಗೊಳಿಸುವುದು ಹಾಗೂ ಶ್ರದ್ಧಾಕೇಂದ್ರಗಳನ್ನು ತೆರವುಗೊಳಿಸುವುದು ಹೆಚ್ಚಾಗಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂಬುದಾಗಿ ಅಮೆರಿಕ ತಿಳಿಸಿತು. ಬೇರೆ ದೇಶಗಳ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಕೂಡ ಅಮೆರಿಕ ವರದಿಯಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಮತಾಂತರ ನಿಷೇಧ | ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿ; ರಾಜ್ಯ ಸರ್ಕಾರ ಅಧಿಕೃತ ಆದೇಶ

Exit mobile version