Site icon Vistara News

India Canada Row: ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು

Indian Visa And Narendra Modi

India suspends visa services for Canadians amid heightened diplomatic tensions

ನವದೆಹಲಿ: ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿ, ಭಾರತದ ರಾಯಭಾರಿಯನ್ನು ಉಚ್ಚಾಟಿಸಿ, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದೆಲ್ಲ ಆರೋಪ ಮಾಡುತ್ತಿರುವ ಕೆನಡಾ ಸರ್ಕಾರಕ್ಕೆ (India Canada Row) ಭಾರತ ಸರ್ಕಾರ ಮತ್ತೊಂದು ಪೆಟ್ಟು ನೀಡಿದೆ. ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೇ (Visa Services) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ದಿನಕ್ಕೊಂದು ಉಪಟಳ ಮಾಡುತ್ತಿರುವ ಕೆನಡಾಗೆ ತಿರುಗೇಟು ನೀಡಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಕೆನಡಾ ಸರ್ಕಾರ ಭಾರತದ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮುಂದಿನ ಆದೇಶದವರೆಗೆ ಅಥವಾ ಅನಿರ್ದಿಷ್ಟಾವಧಿವರೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಈ ಕುರಿತು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸದಿದ್ದರೂ, ಕೆನಡಾದಲ್ಲಿ ವೀಸಾ ಅಪ್ಲಿಕೇಶನ್‌ ಸೆಂಟರ್‌ ಹೊಂದಿರುವ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: Khalistani Terrorist: ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನ ಹತ್ಯೆ

ಕೆನಡಾದಿಂದ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಜಸ್ಟಿನ್‌ ಟ್ರುಡೊ ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾದ ರಾಯಭಾರಿಯನ್ನು ಭಾರತ ಆಚೆಗಟ್ಟಿದೆ. ಇದರೊಂದಿಗೆ ಭಾರತ- ಕೆನಡಾ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ. ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೆಲ ದಿನಗಳ ಹಿಂದಷ್ಟೇ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್‌ ಟ್ರುಡೋ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತಕತೆ ನಡೆಸಿದ್ದರು. ಇದೇ ವೇಳೆ, “ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು” ಎಂದು ಹೇಳಿದ್ದರು. ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಆಗ್ರಹಿಸಿದ್ದರು. ಇದೇ ಕಾರಣಕ್ಕಾಗಿ ಕೆನಡಾ ಸರ್ಕಾರವು ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದೆ ಹಾಗೂ ಶೀತಲ ಸಮರ ಸಾರಿದೆ ಎಂದು ಹೇಳಲಾಗುತ್ತಿದೆ.

Exit mobile version