Site icon Vistara News

ವಿಸ್ತಾರ ಸಂಪಾದಕೀಯ: ಜಿ20 ಶೃಂಗಸಭೆ ವೇದಿಕೆಯಲ್ಲಿ ಚೀನಾಗೆ ಸೆಡ್ಡು ಹೊಡೆದ ಭಾರತ

G20 summit

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆ ಅನೇಕ ವಿಚಾರಗಳಲ್ಲಿ ಭಾರತದ ಹೆಮ್ಮೆಯನ್ನು ಎತ್ತಿ ಹಿಡಿದು, ಸಾರ್ಥಕವಾಗಿದೆ. ಭಾರತದ ಸಂಘಟನಾ ಶಕ್ತಿ, ಕರ್ತೃತ್ವಶಕ್ತಿಗಳನ್ನು ಜಗತ್ತಿಗೆ ತೋರಿದೆ. ಇದರೊಂದಿಗೆ ಆಗಿರುವ ಇನ್ನೊಂದು ಬೆಳವಣಿಗೆ ಎಂದರೆ, ನೆರೆ ದೇಶ ಚೀನಾಗೆ ಸೆಡ್ಡು ಹೊಡೆಯುವ ಒಪ್ಪಂದವೊಂದು ಏರ್ಪಟ್ಟಿರುವುದು. ಚೀನಾ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್‌ಗೆ ಮುಂದಿನ ವರ್ಷ 10 ವರ್ಷದ ತುಂಬಲಿದ್ದು, ಈ ಕಾರಿಡಾರ್‌ಗೆ ಠಕ್ಕರ್ ಕೊಡಲು ಭಾರತ, ಅಮೆರಿಕ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ʼಇಂಡಿಯಾ-ಮಿಡಲ್ ಈಸ್ಟ್ ಯುರೋಪ್ ಎಕಾನಾಮಿಕ್ ಕಾರಿಡಾರ್ʼ (IMME-EC)‌ ರಚಿಸುವ ಸಂಬಂಧ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕಿವೆ. ಇದು ನಿಜವಾಗಿಯೂ ಚೀನಾ ಮತ್ತು ಪಾಕಿಸ್ತಾನಗಳನ್ನು ಕಂಗಾಲಾಗಿಸುವ ಬೆಳವಣಿಗೆಯೇ ಹೌದು. ಭಾರತದ ರಾಜನೀತಿ ಜಿ20ಯಲ್ಲಿ ಫಲಪ್ರದವಾಗಿರುವುದು ಹೀಗೆ.

ಇದೇ ವೇಳೆಗೆ, ಇಟೆಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ದೇಶ ಚೀನಾದ ಬಿಆರ್‌ಐ ಯೋಜನೆಯಿಂದ ಹಿಂದೆ ಸರಿಯುವುದಾಗಿ ಚೀನಾ ಪ್ರಧಾನಿಗೆ ತಿಳಿಸಿದ್ದಾರೆ. ಇದನ್ನು ತಡೆಯಲು ಚೀನಾ ಪ್ರಧಾನಿ ಲಿ ಕಿಯಾಂಗ್‌ ಕೊನೆಯ ಗಳಿಗೆಯ ಪ್ರಯತ್ನಗಳನ್ನು ಮಾಡಿದರಾದರೂ ಅದು ಫಲ ನೀಡಲಿಲ್ಲ. ಈ ಯೋಜನೆ ಇಟೆಲಿಯ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಇಟೆಲಿ ಪ್ರಧಾನಿ ತಿಳಿಸಿದ್ದಾರೆ. ಇದೇ ವೇಳೆ ಅವರು ಭಾರತದ ಕಾರಿಡಾರ್‌ ಜತೆಗೆ ಕೈಜೋಡಿಸುತ್ತಿದ್ದಾರೆ. ಚೀನಾದ ಜತೆಗೆ ಹೋಗಲಿದ್ದವರು ಆ ದೇಶದ ಸ್ಕೀಮ್‌ನ ವೈಫಲ್ಯಗಳನ್ನು ಅರ್ಥ ಮಾಡಿಕೊಂಡು ಭಾರತದ ಜತೆ ಕೈ ಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಕೈಜೋಡಿಸಲು ಮುಂದಾಗುತ್ತಿರುವಾಗಲೇ, ಈ ಹೊಸ ಎಕಾನಾಮಿಕ್ ಕಾರಿಡಾರ್‌ ಯೋಜನೆಯನ್ನು ದೃಢವಾಗಿ ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಆಗ್ರಹ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಭಾರತದ ಈ ಪ್ರಯತ್ನಕ್ಕೆ ಪಾಕಿಸ್ತಾನದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ಸಹಜ. ಈ ಹೊಸ ಕಾರಿಡಾರ್‌ನಿಂದಾಗಿ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ 25 ಬಿಲಿಯನ್ ಅಮೆರಿಕನ್ ಡಾಲರ್ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಿಕಟ ಸ್ನೇಹಿತ ಹಾಗೂ ಭಾರತದ ಮಿತ್ರರೂ ಆಗಿರುವ ಯುಎಇ ಅಧ್ಯಕ್ಷರು ಈ ಯೋಜನೆಯ ಆದ್ಯ ಪ್ರವರ್ತಕರಾಗಿದ್ದಾರೆ. ಅಲ್ಲದೇ, ಈ ಯೋಜನೆಯು ಅರೇಬಿಯನ್ ಉಪಖಂಡವು ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ದೃಢ ನಂಬಿಕೆಯನ್ನು ಹೊಂದಿದ್ದಾರೆ. ಮೋದಿ ಅವರ ಮತ್ತೊಬ್ಬ ಆಪ್ತ ಸ್ನೇಹಿತ ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರನ್ ಬೆಂಬಲ ನೀಡಿದ್ದಾರೆ. ಜರ್ಮನಿ ಕೂಡ ಕೈಜೋಡಿಸಿವೆ. ಮಧ್ಯಪ್ರಾಚ್ಯ ಕಾರಿಡಾರ್ ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿದೆ. ಪೂರ್ವ ಕಾರಿಡಾರ್ ಪಶ್ಚಿಮ ಕರಾವಳಿಯಲ್ಲಿರುವ ಮುಂದ್ರಾ ಬಂದರನ್ನು ಫುಜೈರಾ ಬಂದರಿಗೆ ಸಂಪರ್ಕಿಸುತ್ತದೆ. ನಂತರ ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಮೂಲಕ ಇಸ್ರೇಲಿ ಬಂದರು ಹೈಫಾಗೆ ಪ್ರಮಾಣಿತ ಕಂಟೈನರ್‌ಗಳ ಮೂಲಕ ಸರಕುಗಳನ್ನು ಸಾಗಿಸುತ್ತದೆ. ಪಶ್ಚಿಮ ಕಾರಿಡಾರ್ ಹೈಫಾದಿಂದ ಭಾರತೀಯ ಸರಕುಗಳು ಫ್ರಾನ್ಸ್‌ನ ಮಾರ್ಸೆಲ್ಲೆ, ಇಟಲಿ ಮತ್ತು ಗ್ರೀಸ್‌ನ ಇತರ ಬಂದರುಗಳನ್ನು ತಲುಪುತ್ತವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜಿ 20 ಶೃಂಗ ಸಭೆ; ಉದಾತ್ತ ಘೋಷಣೆಗಳು ಅನುಷ್ಠಾನಕ್ಕೆ ಬರುವಂತಾಗಲಿ

ಚೀನಾದ ಪ್ರಭಾವಕ್ಕೆ ತಿರುಗೇಟು ನೀಡಲು ಇಂಥದೊಂದು ವಾಣಿಜ್ಯ ಉಪಕ್ರಮ ಅತ್ಯಗತ್ಯವಾಗಿತ್ತು. ಹೇಗೆ ಪೆಸಿಫಿಕ್‌ ಸಮುದ್ರದಲ್ಲಿ ಸಾಗರಾಂತರ ವ್ಯವಹಾರ ಹಾಗೂ ಸುರಕ್ಷತೆಗಳನ್ನು ಕಾಪಾಡಿಕೊಳ್ಳಲು ಇಂಡೋ- ಪೆಸಿಫಿಕ್‌ ಒಕ್ಕೂಟವನ್ನು ಮಾಡಿಕೊಳ್ಳಲಾಗಿದೆಯೋ. ಅದೇ ರೀತಿ ಉತ್ತರದಲ್ಲಿ ಕೂಡ ಇಂಥದೊಂದು ಉಪಕ್ರಮ ನಡೆದಿದೆ. ಭಾರತವನ್ನು ದೊಡ್ಡ ವಾಣಿಜ್ಯ ಶಕ್ತಿ ಎಂದು ಭಾರಿ ರಾಷ್ಟ್ರಗಳೇ ಒಪ್ಪಿಕೊಂಡಿರುವುದು, ಭಾರತದ ಜತೆ ಎಲ್ಲ ಬಗೆಯ ವ್ಯೂಹಾತ್ಮಕ- ವಾಣಿಜ್ಯಾತ್ಮಕ ಒಪ್ಪಂದಗಳನ್ನು ಕುದುರಿಸಿಕೊಳ್ಳಲು ಮುಂದಾಗಿರುವುದು ಈ ಮೂಲಕ ವ್ಯಕ್ತವಾಗಿದೆ. ಚೀನಾದ ವ್ಯವಹಾರದ ಹಿಂದಿರುವ ಕುತಂತ್ರಗಳನ್ನೂ ಈಗ ಹೆಚ್ಚಿನ ದೇಶಗಳು ಅರ್ಥ ಮಾಡಿಕೊಂಡಿವೆ. ಶ್ರೀಲಂಕಾದಂಥ ದೇಶಗಳು ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದು ದಿವಾಳಿಯೆದ್ದು ಹೋಗಿವೆ. ವಿಯೆಟ್ನಾಂ, ಥಾಯ್ಲೆಂಡ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಂತಹ ದೇಶಗಳು ಇದನ್ನು ಅರ್ಥ ಮಾಡಿಕೊಂಡು ಚೀನಾದ ಹಿಡಿತದಿಂದ ಹೊರಬರುವ ಮನಸ್ಸು ಮಾಡಿದರೆ, ಆ ದೇಶಗಳನ್ನೂ ಈ ಮಧ್ಯಪ್ರಾಚ್ಯ ಕಾರಿಡಾರ್‌ನೊಂದಿಗೆ ಸಂಪರ್ಕಿಸುವ ಸಾಮರ್ಥ್ಯವನ್ನು ಈ ಯೋಜನೆಯು ಹೊಂದಿದ್ದು, ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಗ ಬಿಆರ್‌ಐ ಯೋಜನೆ ಪೂರ್ಣ ನನೆಗುದಿಗೆ ಬಿದ್ದು ಚೀನಾದ ಹುನ್ನಾರಗಳಿಗೆ ಸೋಲಾಗಬಹುದು. ಆ ಮೂಲಕ ಅದು ಭಾರತದ ಸುತ್ತ ಬಿಗಿಯಲು ಮುಂದಾದ ಉರುಳು ಸಡಿಲವಾಗಬಹುದು. ಭಾರತಕ್ಕೆ ಚೀನಾವನ್ನು ಮಣಿಸುವ ದುರುದ್ದೇಶವಿಲ್ಲ. ಆದರೆ ಚೀನಾದ ಕುತಂತ್ರಗಳಿಗೆ ಮಣಿಯದ ಘನತೆ, ಬುದ್ಧಿಶಕ್ತಿಯಂತೂ ಇದೆ. ಮುಂದಿನ ದಿನಗಳಲ್ಲಿ ಇದು ಮಹತ್ವದ ಜಾಗತಿಕ ವ್ಯಾಪಾರ ಕಾರಿಡಾರ್‌ ಆಗಲಿದೆ.

ಭಾರತದ ಮಟ್ಟಿಗೆ ಇದೇ ಜಿ20 ಶೃಂಗಸಭೆಯ ಸಾಫಲ್ಯ. ಜಾಗತಿಕ ವಲಯದಲ್ಲಿ ಭಾರತದ ವರ್ಚಸ್ಸು ಏರಿರುವುದು ಒಂದು; ಚೀನಾದ ಸೆಡ್ಡು ಹೊಡೆದು ಬಹು ದೇಶಗಳ ವಾಣಿಜ್ಯ ಹಿತಾಸಕ್ತಿಯನ್ನು ಸಾಧಿಸುವ ಕಾರಿಡಾರ್‌ ಒಪ್ಪಂದವನ್ನು ಮಾಡಿಕೊಂಡಿರುವುದು ಇನ್ನೊಂದು. ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಭಾರತ ಹೊಡೆದಿದೆ.

Exit mobile version