Site icon Vistara News

3 ವರ್ಷದಲ್ಲಿ ಭಾರತ ಜಗತ್ತಲ್ಲೇ 3ನೇ ಬೃಹತ್‌ ಆರ್ಥಿಕ ರಾಷ್ಟ್ರ; ಜಾಗತಿಕ ಸಂಸ್ಥೆ ವರದಿ

Indian Economy

Indian Economy Growth Against China Is Phenomenal

ನವದೆಹಲಿ: “ಭಾರತವು ಶೀಘ್ರದಲ್ಲಿಯೇ ಜಗತ್ತಿನಲ್ಲಿ ಮೂರನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ (Largest Economy) ಹೊರಹೊಮ್ಮಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶ-ವಿದೇಶಗಳ ಕಾರ್ಯಕ್ರಮಗಳಲ್ಲಿ ಪ್ರಸ್ತಾಪಿಸುತ್ತಿರುತ್ತಾರೆ. ಹತ್ತಾರು ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಿರುತ್ತಾರೆ. ಈ ಮಾತಿಗೆ ಪುಷ್ಟಿ ನೀಡುವಂತೆ, “ಭಾರತವು 2027ರ ವೇಳೆಗೆ ಜಗತ್ತಿನಲ್ಲೇ ಮೂರನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಲಿದೆ” ಎಂದು ಜಾಗತಿಕ ಬ್ರೋಕರೇಜ್‌ ಸಂಸ್ಥೆ ಜೆಫರೀಸ್‌ (Jefferies) ತಿಳಿಸಿದೆ.

ಭಾರತದ ಆರ್ಥಿಕತೆಯ ಒಟ್ಟು ಮೌಲ್ಯವು 3.6 ಲಕ್ಷ ಕೋಟಿ ಡಾಲರ್‌ ಇದೆ. ಅಮೆರಿಕನ್‌ ಡಾಲರ್‌ ಲೆಕ್ಕದಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.7ರಷ್ಟಿದೆ. ಭಾರತದ ಜಿಡಿಪಿ ಬೆಳವಣಿಗೆ ಲೆಕ್ಕಾಚಾರ, ಜಾಗತಿಕ ರಾಜಕೀಯ ಬೆಳವಣಿಗೆಗಳು ಹಾಗೂ ಭಾರತದಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಫಲವಾಗಿ ದೇಶವು 2027ರ ವೇಳೆಗೆ ಜಗತ್ತಿನಲ್ಲೇ ಮೂರನೇ ಬೃಹತ್‌ ರಾಷ್ಟ್ರವಾಗಲಿದೆ. ಕೆಲವೇ ವರ್ಷದಲ್ಲಿ ಭಾರತದ ಆರ್ಥಿಕತೆ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ಮೀರಲಿದೆ ಎಂದು ಜೆಫರೀಸ್‌ ಮಾಹಿತಿ ನೀಡಿದೆ.

ದೇಶದ ಜನ ಸಂಪನ್ಮೂಲ, ಸಾಂಸ್ಥಿಕ ಸಾಮರ್ಥ್ಯ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಫಲವಾಗಿ ಭಾರತದ ಆರ್ಥಿಕತೆಯು ಏಳಿಗೆಯ ಹಾದಿ ಹಿಡಿಯಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕವು ವಿಶ್ವದಲ್ಲೇ ಬೃಹತ್‌ ಆರ್ಥಿಕತೆ ಹೊಂದಿರುವ ದೇಶ ಎನಿಸಿದೆ. ನಂತರದ ಸ್ಥಾನದಲ್ಲಿ ಚೀನಾ, ಜರ್ಮನಿ ಹಾಗೂ ಜಪಾನ್‌ ಇವೆ. ಮೂರ್ನಾಲ್ಕು ವರ್ಷದಲ್ಲಿ ಭಾರತವು ಜರ್ಮನಿ ಹಾಗೂ ಜಪಾನ್‌ಅನ್ನು ಹಿಂದಿಕ್ಕಿ, ಆರ್ಥಿಕತೆಯಲ್ಲಿ ಮೈಲುಗಲ್ಲು ಸಾಧಿಸಲಿದೆ ಎಂದು ಅಂದಾಜಿಸಿದೆ.

ಮಾರುಕಟ್ಟೆ ಬಂಡವಾಳ ಮೌಲ್ಯದ ಏರಿಕೆ

ಜಾಗತಿಕ ಮಾರುಕಟ್ಟೆಯ ಬಂಡವಾಳ ಮೌಲ್ಯದ ಲೆಕ್ಕಾಚಾರದಲ್ಲಿ 4.5 ಲಕ್ಷ ಕೋಟಿ ಡಾಲರ್‌ ಮೌಲ್ಯ ಹೊಂದಿರುವ ಭಾರತವು ಐದನೇ ಸ್ಥಾನದಲ್ಲಿದೆ. ಮುಂಬರುವ ವರ್ಷಗಳಲ್ಲಿ ಭಾರತದ ಮಾರುಕಟ್ಟೆ ಬಂಡವಾಳ ಮೌಲ್ಯವು 10 ಲಕ್ಷ ಕೋಟಿ ಡಾಲರ್‌ ದಾಟಲಿದೆ. ಇನ್ನು, ಜಗತ್ತಿನ ಹಲವು ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತವು ಉತ್ತಮ ವ್ಯಾಪಾರ ಒಪ್ಪಂದಗಳ ಮೂಲಕವೂ ಆರ್ಥಿಕ ಏಳಿಗೆ ಹೊಂದಲಿದೆ. ಜಪಾನ್‌, ಆಸ್ಟ್ರೇಲಿಯಾ, ಮಧ್ಯ ಏಷ್ಯಾ ದೇಶಗಳೊಂದಿಗೆ ಭಾರತ ಹೊಂದಿರುವ ದ್ವಿಪಕ್ಷೀಯ ಸಂಬಂಧವು ಅನುಕೂಲವಾಗಲಿದೆ.

ಇದನ್ನೂ ಓದಿ: Baba Vanga: ಕ್ಯಾನ್ಸರ್‌ ಲಸಿಕೆ, ಆರ್ಥಿಕ ಬಿಕ್ಕಟ್ಟು; ನಿಜವಾದ ಬಾಬಾ ವಂಗಾ ಭವಿಷ್ಯಗಳಿವು

ಉದ್ಯಮ, ಮೂಲ ಸೌಕರ್ಯ ಆಧಾರ

ಭಾರತದ ಆರ್ಥಿಕತೆ ಏಳಿಗೆಗೆ ಔದ್ಯಮಿಕ ಬೆಳವಣಿಗೆ ಹಾಗೂ ಡಿಜಿಟಲ್‌ ಮೂಲ ಸೌಕರ್ಯಗಳು ಕೂಡ ನೆರವಾಗಲಿವೆ ಎಂದು ಜೆಫರೀಸ್‌ ವರದಿ ತಿಳಿಸಿದೆ. ದೇಶದಲ್ಲಿ ಯುನಿಕಾರ್ನ್‌ಗಳ (1 ಶತಕೋಟಿ ಡಾಲರ್‌ ಅಥವಾ 7,500 ಕೋಟಿ ರೂ. ವಹಿವಾಟು ಇರುವ ನವೋದ್ಯಮಗಳು) ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೂಡಿಕೆಯ ಪ್ರಮಾಣವೂ ಜಾಸ್ತಿಯಾಗಿದೆ. ಡಿಜಿಟಲ್‌ ಮೂಲ ಸೌಕರ್ಯ, ಕೌಶಲಗಳುಳ್ಳ ಯುವಕರು, ನಾವೀನ್ಯತೆಯಿಂದಾಗಿ ಭಾರತವು ಜಾಗತಿಕ ನವೋದ್ಯಮಗಳ ಮಳಿಗೆಯಾಗಲಿದೆ ಎಂದು ಜೆಫರೀಸ್‌ ವರದಿ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version