ಹೊಸದಿಲ್ಲಿ: ಗಾಜಾದಲ್ಲಿ ನಡೆಯುತ್ತಿರುವ (Gaza War) ಇಸ್ರೇಲ್- ಹಮಾಸ್ ಸಂಘರ್ಷಕ್ಕೆ (Israel Palestine war) ಮಾನವೀಯ ದೃಷ್ಟಿಯಿಂದ ಕೂಡಲೇ ಕದನ ವಿರಾಮ (ceasefire) ನೀಡುವಂತೆ ಹಾಗೂ ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯ (United nations) ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಭಾರತವು ಈ ನಿರ್ಣಯದ ಪರವಾಗಿ ಮತ ಚಲಾಯಿಸಿದೆ.
ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆಯ ನಿರ್ಣಯವನ್ನು ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ತೀನ್ ಸೇರಿದಂತೆ ಹಲವಾರು ದೇಶಗಳು ಪ್ರಾಯೋಜಿಸಿದ್ದವು. ಭಾರತ ಇದರ ಪರವಾಗಿ ಮತ ಹಾಕಿತು. ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಹತ್ತು ದೇಶಗಳು ಅದರ ವಿರುದ್ಧ ಮತ ಚಲಾಯಿಸಿದರೆ, 23 ದೇಶಗಳು ಗೈರುಹಾಜರಾಗಿದ್ದವು.
“ಸಾಮಾನ್ಯ ಸಭೆಯಿಂದ ನೀಡಲಾದ ಪ್ರಬಲ ಸಂದೇಶ ಇದಾಗಿದ್ದು, ಇದು ಐತಿಹಾಸಿಕ ದಿನವಾಗಿದೆ” ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಹೇಳಿದ್ದಾರೆ. ಕರಡು ನಿರ್ಣಯವು ಹಮಾಸ್ ಅನ್ನು ಉಲ್ಲೇಖಿಸಿಲ್ಲ. ಇಸ್ರೇಲ್‌ನ ಪ್ರಬಲ ಮಿತ್ರರಾಷ್ಟ್ರವಾದ ಅಮೆರಿಕ, ಕರಡಿಗೆ ಹೀಗೆ ತಿದ್ದುಪಡಿಯನ್ನು ಸೇರಿಸಲು ಒತ್ತಾಯಿಸಿದೆ: “2023ರ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್‌ನಿಂದ ನಡೆದ ಹೇಯ ಭಯೋತ್ಪಾದಕ ದಾಳಿಗಳನ್ನು ಖಂಡಿಸುತ್ತದೆ, ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯಿಸುತ್ತದೆ.”
ಭಾರತವು ಈ ತಿದ್ದುಪಡಿಯ ಪರವಾಗಿ ಮತ ಹಾಕಿತು. “ಭಾರತವು ಸಾಮಾನ್ಯ ಸಭೆಯು ಅಂಗೀಕರಿಸಿದ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಸಂಸ್ಥೆಯು ಚರ್ಚಿಸುತ್ತಿರುವ ಪರಿಸ್ಥಿತಿಯು ಹಲವು ಆಯಾಮಗಳನ್ನು ಹೊಂದಿದೆ. ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು ಮತ್ತು ಆ ಸಮಯದಲ್ಲಿ ಒತ್ತೆಯಾಳುಗಳ ಬಗ್ಗೆ ಕಾಳಜಿ ಇತ್ತು. ಇಂದು ಅಲ್ಲಿ ಅಗಾಧವಾದ ಮಾನವೀಯ ಬಿಕ್ಕಟ್ಟು ಮತ್ತು ದೊಡ್ಡ ಪ್ರಮಾಣದ ನಾಗರಿಕ ಜೀವ ಹಾನಿಯಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಜೀವನಷ್ಟ. ಎಲ್ಲಾ ಸಂದರ್ಭಗಳಲ್ಲಿ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಬೇಕಿದೆ. ಶಾಂತಿಯುತವಾಗಿ ಎರಡೂ ಪ್ರಭುತ್ವಗಳು ಬಹುಕಾಲದ ಪ್ಯಾಲೆಸ್ತೀನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಯುದ್ಧದ ಗಂಭೀರ ಪರಿಣಾಮಗಳನ್ನು ಪರಿಹರಿಸಲು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಅಂತಾರಾಷ್ಟ್ರೀಯ ಸಮುದಾಯ ತೋರಿಸಿರುವ ಏಕತೆಯನ್ನು ಭಾರತ ಸ್ವಾಗತಿಸುತ್ತದೆ ಎಂದು ಕಾಂಬೋಜ್ ಹೇಳಿದರು. “ಈ ಅಸಾಧಾರಣ ಕಷ್ಟಕರ ಸಮಯದಲ್ಲಿ ಸರಿಯಾದ ಸಮತೋಲನವನ್ನು ಪಡೆಯುವುದು ಸವಾಲು. ಅಂತಾರಾಷ್ಟ್ರೀಯ ಸಮುದಾಯವು ಈ ಪ್ರದೇಶವು ಇದೀಗ ಎದುರಿಸುತ್ತಿರುವ ಬಹು ಸವಾಲುಗಳನ್ನು ಪರಿಹರಿಸಲು ಕಂಡುಕೊಂಡಿರುವ ಏಕತೆಯ ಸಾಮಾನ್ಯ ನೆಲೆಯನ್ನು ಭಾರತ ಸ್ವಾಗತಿಸುತ್ತದೆ” ಎಂದು ಅವರು ಹೇಳಿದರು.
ಅಕ್ಟೋಬರ್‌ನಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಒಪ್ಪಂದಕ್ಕೆ ಕರೆ ನೀಡಿದ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ದೂರ ನಿಂತಿತ್ತು. ಆದರೆ ಗಾಜಾ ಪಟ್ಟಿಯಲ್ಲಿ ಮಾನವೀಯ ಪರಿಹಾರದ ಪ್ರವೇಶಕ್ಕಾಗಿ ಕರೆ ನೀಡಿತ್ತು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇದೇ ರೀತಿಯ ನಿರ್ಣಯವನ್ನು ಯುಎಸ್ ವೀಟೋ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮಂಡಿಸಿದ UNSC ನಿರ್ಣಯ 90 ಸದಸ್ಯ ರಾಷ್ಟ್ರಗಳ ಬೆಂಬಲದೊಂದಿಗೆ 13 ಅನುಕೂಲಕರ ಮತಗಳನ್ನು ಪಡೆಯಿತು. ಯುನೈಟೆಡ್ ಕಿಂಗ್‌ಡಮ್ ದೂರ ಉಳಿಯಿತು.
ಇದನ್ನೂ ಓದಿ: Israel- Palestine War: ಗಾಜಾದಲ್ಲಿ ಕದನ ವಿರಾಮದ ವಿಶ್ವಸಂಸ್ಥೆ ನಿರ್ಣಯಕ್ಕೆ ತಡೆಹಾಕಿದ ಅಮೆರಿಕ