ಹೊಸದಿಲ್ಲಿ: ಜಿ20 ಶೃಂಗಸಭೆಯನ್ನು (G20 Summit 2023) ಆರಂಭಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮುಂದಿದ್ದ ನಾಮಫಲಕದಲ್ಲಿ ‘ಭಾರತ್’ ಎಂದು ಬರೆದಿರುವುದು ಈಗ ದೇಶದ ಗಮನ ಸೆಳೆದಿದೆ. `India’ ಬದಲು ʼಭಾರತʼ (india vs bharat) ಹೆಸರನ್ನು ಬಳಸಲು ಮೋದಿ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂಬುದು ಇದರಲ್ಲೂ ವ್ಯಕ್ತವಾಗಿದೆ. ಇದೀಗ, ವಿಶ್ವಸಂಸ್ಥೆಯಲ್ಲೂ ಹೆಸರನ್ನೂ ಬದಲಾಯಿಸುವ ಪ್ರಸ್ತಾಪ ಇರುವುದು ಗೊತ್ತಾಗಿದೆ.
ಇತ್ತ G20 ಸಮಾವೇಶದಲ್ಲಿ ವಿದೇಶಿ ಪ್ರತಿನಿಧಿಗಳಿಗೆ ನೀಡಲಾಗಿರುವ ಪುಸ್ತಕ- ಕ್ಯಾಟಲಾಗ್‌ನಲ್ಲಿ ಕೂಡ “ಭಾರತ್” ಅನ್ನು ಬಳಸಲಾಗಿದೆ. “ಭಾರತ, ಪ್ರಜಾಪ್ರಭುತ್ವದ ತಾಯಿ” ಎಂಬ ಮಾತಿದೆ. “ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಮತ್ತು 1946-48ರ ಚರ್ಚೆಗಳಲ್ಲಿಯೂ ಉಲ್ಲೇಖಿಸಲಾಗಿದೆ” ಎಂದು ಕಿರುಪುಸ್ತಕದಲ್ಲಿ ಬರೆದಿದೆ.
ವಿಶ್ವಸಂಸ್ಥೆ ಕೂಡ ನಿನ್ನೆ ಈ ಕುರಿತು ಹೇಳಿಕೆ ನೀಡಿತ್ತು. ʼʼಹೆಸರು ಬದಲಾವಣೆಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಮುಗಿಸಿದ ಬಳಿಕ ಅವರು ನಮಗೆ ಮಾಹಿತಿ ನೀಡಬಹುದು. ಆಗ ನಾವು ಹೆಸರನ್ನು ʼಇಂಡಿಯಾʼ ಬದಲು ʼಭಾರತʼ ಎಂದು ಬದಲಿಸುತ್ತೇವೆʼʼ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಮುಖ್ಯ ವಕ್ತಾರ ಸ್ಟೆಫಾನೀ ದುಜಾರಿಕ್ ಅವರು ನಿನ್ನೆ ಭಾರತದ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿ20 ಸಭೆಯಲ್ಲಿ ಮೋದಿಯವರ ಮುಂದಿನ ಫಲಕದಲ್ಲಿ ʼಇಂಡಿಯಾʼ ಬದಲು ʼಭಾರತʼ ಎಂದಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ. ಕೆಲವು ದಿನಗಳ ಹಿಂದೆ ಜಿ20 ನಿಮಿತ್ತ ಗಣ್ಯರಿಗೆ ರಾಷ್ಟ್ರಪತಿಗಳು ಇಂದು ರಾತ್ರಿ ಏರ್ಪಡಿಸಿರುವ ಔತಣಕೂಟದ ಆಹ್ವಾನ ಹೋಗಿದ್ದು, ಅದರಲ್ಲಿ ʼಪ್ರೆಸಿಡೆಂಟ್ ಆಫ್ ಭಾರತʼ ಎಂದು ಅಚ್ಚು ಹಾಕಿಸಲಾಗಿತ್ತು.
ಇದಾದ ಬಳಿಕ ವಿಪಕ್ಷ ಕಾಂಗ್ರೆಸ್‌ನ ಮುಖಂಡರು ಇದನ್ನು ಟೀಕಿಸಿದ್ದರು. ವಿಪಕ್ಷ ಒಕ್ಕೂಟವು ʼಇಂಡಿಯಾʼ ಎಂದು ಹೆಸರಿಟ್ಟುಕೊಂಡ ಬಳಿಕ ಆತಂಕಗೊಂಡಿರುವ ಮೋದಿ ಸರ್ಕಾರ, ಇಂಡಿಯಾ ಬದಲು ಭಾರತ ಎಂದು ಬಳಸಲು ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿವೆ. ಇದೇ ತಿಂಗಳು ಕರೆಯಲಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೂಡ ದೇಶಕ್ಕೆ ʼಭಾರತʼ ಎಂಬ ಹೆಸರನ್ನು ಸ್ಥಿರಗೊಳಿಸುವ ವಿಧೇಯಕವನ್ನು ತರಲು ಉದ್ದೇಶಿಸಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.
ಆದರೆ ಈ ಕುರಿತು ಸ್ಪಷ್ಟೀಕರಣ ನೀಡಿರುವ ಕೇಂದ್ರ ಸರ್ಕಾರ, ʼಅಂಥ ಯಾವುದೇ ಪ್ರಸ್ತಾಪವಿಲ್ಲ. ಇದು ಬರೀ ಗಾಳಿಸುದ್ದಿ ಅಷ್ಟೇʼ ಎಂದು ಹೇಳಿದೆ.
ಇಂಡಿಯಾ ಬದಲು ಭಾರತ ಬಳಕೆಯಲ್ಲಿ ಪ್ರಾಧಾನ್ಯ ಪಡೆಯಬೇಕು ಎಂದು ಬಿಜೆಪಿ ಬಯಸಿದೆ. ವಿಪಕ್ಷಗಳ ಟೀಕೆಗೆ ಉತ್ತರಿಸಿರುವ ಅದು, ಸಂವಿಧಾನದ 1ನೇ ಪರಿಚ್ಛೇದದ ಉಲ್ಲೇಖವನ್ನು ಸಮರ್ಥನೆಗೆ ಬಳಸಿಕೊಂಡಿದ್ದಾರೆ. ಒಂದನೇ ಪರಿಚ್ಛೇದದಲ್ಲಿ, ʼʼಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿದೆʼʼ ಎಂದು ಬರೆಯಲಾಗಿದೆ.
ʼಭಾರತ’ವನ್ನು ಬಳಸುವ ನಿರ್ಧಾರ ವಸಾಹತುಶಾಹಿ ಮನಸ್ಥಿತಿಯ ವಿರುದ್ಧದ ದೊಡ್ಡ ನಿಲುವು. ಇದು ಮೊದಲೇ ಆಗಬೇಕಿತ್ತು. ʼಭಾರತʼದ ಬಳಕೆ ನಮಗೆ ಹೆಮ್ಮೆʼʼ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯೂ ‘ಭಾರತ’ಮಯ; ಮೋದಿ ಮುಂದಿನ ನೇಮ್‌ಪ್ಲೇಟ್‌ನಲ್ಲಿ ‘ಭಾರತ’