Site icon Vistara News

ಭಾರತೀಯ ಹರಿಣಿ ಲೋಗನ್‌ Spelling Bee ವಿಜೇತೆ

spelling bee

ನ್ಯೂಯಾರ್ಕ್:‌ ಅಮೆರಿಕದ ಪ್ರತಿಷ್ಠಿತ spelling bee ಸ್ಪರ್ಧೆಯಲ್ಲಿ ಭಾರತೀಯ ಮೂಲದ ಹರಿಣಿ ಲೋಗನ್‌ ವಿಜೇತರಾಗಿದ್ದಾರೆ.

ಕಳೆದ 14 ವರ್ಷಗಳಿಂದ ಭಾರತೀಯ ಮೂಲದ ಮಕ್ಕಳು ಈ ಸ್ಪರ್ಧೆಯಲ್ಲಿ ವಿಜೇತರಾಗುತ್ತಿದ್ದಾರೆ. ಈ ಸಲವೂ ಅಂತಿಮ ಸುತ್ತಿಗೆ ಬಂದ ಬಹುತೇಕ ಮಕ್ಕಳು ಭಾರತೀಯ ಹಾಗೂ ದಕ್ಷಿಣ ಏಷ್ಯಾ ಮೂಲದವರಾಗಿದ್ದಾರೆ.

ಟೆಕ್ಸಾಸ್‌ನಲ್ಲಿರುವ ಸ್ಯಾನ್‌ ಆಂಟೋನಿಯೋ ಸ್ಕೂಲಿನ ವಿದ್ಯಾರ್ಥಿನಿ ಹರಿಣಿ ಲೋಗನ್‌ಗೆ ಈಗ 13 ವರ್ಷ. ಮೂರು ವರ್ಷಗಳ ಹಿಂದೆ ಕೂಡ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇವರು ಆ ಬಾರಿ ಗೆಲ್ಲಲಾಗದೆ ಹಿಂದಿರುಗಿದ್ದರು. ಈ ಬಾರಿ 21 ಇಂಗ್ಲಿಷ್‌ ಪದಗ ಸ್ಪೆಲ್ಲಿಂಗ್‌ಗಳನ್ನು ತಪ್ಪಿಲ್ಲದೆ ಹೇಳಿದ್ದಾರೆ. ಈ ಸಲದ ಫೈನಲ್‌ನ ರನ್ನರ್‌ ಅಪ್‌ ಕೂಡ ಭಾರತೀಯ ಮೂಲದ ವಿಕ್ರಮ್‌ ರಾಜು ಎಂಬ ವಿದ್ಯಾರ್ಥಿ.

ಇನ್ನಷ್ಟು ಓದಿಗಾಗಿ: Explainer: Spelling bee- 14 ವರ್ಷಗಳಿಂದ ಭಾರತೀಯರ ಗೆಲುವು, ಏನಿದರ ರಹಸ್ಯ?

ಈ ಗೆಲುವಿನೊಂದಿಗೆ ಹರಿಣಿ $ 5‌2,500 (₹ 40.74 ಲಕ್ಷ) ನಗದು, ಮೆಡಲ್ ಪಡೆದಿದ್ದಾರೆ. 2020ರಲ್ಲಿ ಕೊರೊನಾ ವೈರಸ್‌ ಸೋಂಕಿನ ಕಾರಣ ಸ್ಪರ್ಧೆ ನಡೆದಿರಲಿಲ್ಲ. ಕಳೆದ ವರ್ಷ ವರ್ಚುವಲ್‌ ಸ್ವರೂಪದಲ್ಲಿ ಸ್ಪರ್ಧೆ ನಡೆದು ಮೊದಲ ಆಫ್ರಿಕನ್‌ ಅಮೆರಿಕನ್‌ ವಿದ್ಯಾರ್ಥಿನಿ ಝಾಲಿಯಾ ಎಂಬಾಕೆ ಗೆದ್ದಿದ್ದಳು.

ವಿಶೇಷವೆಂದರೆ ಈ ಬಾರಿಯ ಸ್ಪರ್ಧೆಯಲ್ಲಿ ಹೊಸ ಸೇರ್ಪಡೆಯಾಗಿ, ಶಬ್ದದ ಸ್ಪೆಲ್ಲಿಂಗ್‌ ಹೇಳುವುದಲ್ಲದೆ, ಜ್ಯೂರಿಗಳು ಕೇಳಿದರೆ ಶಬ್ದಗಳಿಗೆ ಅರ್ಥವನ್ನೂ ವಿವರಿಸಿ ಹೇಳಬೇಕಿತ್ತು. ಇದರ ಮೊದಲ ಸುತ್ತುಗಳಲ್ಲಿ ಹರಿಣಿ ಲೋಗನ್‌ ಒಂದು ಬಾರಿ ಎಲಿಮಿನೇಟ್‌ ಆಗಿ ಹೊರಗೆ ಹೋಗಿದ್ದರು. ನಂತರ ಪುನರಾಗಮಿಸಿದ ಹರಿಣಿ ಹಾಗೂ ವಿಕ್ರಮ ರಾಜು ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. moorhen– ಎಂಬುದು ಕೊನೆಯದಾಗಿ ಹರಿಣಿ ಸರಿಯಾಗಿ ಸ್ಪೆಲ್‌ ಮಾಡಿದ ಪದವಾಗಿತ್ತು.

ಭಾರತೀಯ ಮೂಲದಿಂದ ಬಂದು ಇಂದು ಅಮೆರಿಕದ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್‌ ಅವರು ತನ್ನ ಸಾಧನೆಗೆ ಸ್ಫೂರ್ತಿ ಎಂದು ಹರಿಣಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ಭಾರತದ ಗೋಧಿಯನ್ನು ಟರ್ಕಿ ನಿರಾಕರಿಸಿದ್ದೇಕೆ? ದಡಾರ ಸೋಂಕು ಪತ್ತೆಯಾಯಿತೇ?

Exit mobile version