ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲು ಇನ್ನೊಂದು ವರ್ಷ ಬಾಕಿ ಇದ್ದರೂ, ಅಧ್ಯಕ್ಷ ಗಾದಿ ಮೇಲೆ ಕುಳಿತುಕೊಳ್ಳಲು ಬಯಸುತ್ತಿರುವ ಭಾರತ ಮೂಲದವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವಸಂಸ್ಥೆ ಮಾಜಿ ರಾಯಭಾರಿ, ಭಾರತ ಮೂಲದ ನಿಕ್ಕಿ ಹ್ಯಾಲೆ, ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಈಗಾಗಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಭಾರತ ಮೂಲದ ಉದ್ಯಮಿ ಹರ್ಷವರ್ಧನ್ ಸಿಂಗ್ (Hirsh Vardhan Singh) ಅವರು ಕೂಡ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಹರ್ಷವರ್ಧನ್ ಸಿಂಗ್ ಅವರು ಟ್ವಿಟರ್‌ನಲ್ಲಿ (ಈಗ X) ವಿಡಿಯೊ ಪೋಸ್ಟ್ ಮಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. “ನಾನು ಜೀವನಪೂರ್ತಿ ರಿಪಬ್ಲಿಕನ್ ಆಗಿರುತ್ತೇನೆ ಹಾಗೂ ಅಮೆರಿಕ ಮೊದಲು ಎಂಬ ತತ್ವವನ್ನು ಅನುಸರಿಸುತ್ತೇನೆ” ಎಂಬುದಾಗಿ ಅವರು ಹೇಳಿದ್ದಾರೆ.
ಹರ್ಷವರ್ಧನ್ ಸಿಂಗ್ ವಿಡಿಯೊ
“ಅಮೆರಿಕದ ಕೌಟುಂಬಿಕ ಮೌಲ್ಯಗಳ ಮೇಲೆ ಇತ್ತೀಚೆಗೆ ದಾಳಿಯಾಗುತ್ತಿದೆ. ಪೋಷಕರ ಹಕ್ಕುಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಅಮೆರಿಕದ ಮೌಲ್ಯಗಳನ್ನು ಎತ್ತಿಹಿಡಿಯಲು ಬಲಿಷ್ಠ ನಾಯಕತ್ವದ ಅಗತ್ಯವಿದೆ. ಹಾಗಾಗಿ ನಾನು 2024ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸುತ್ತೇನೆ” ಎಂದು ಘೋಷಿಸಿದ್ದಾರೆ.
ಭಾರತ ಮೂಲದ ಹರ್ಷವರ್ಧನ್ ಸಿಂಗ್ ಅವರು ವೃತ್ತಿಯಲ್ಲಿ ಏರೋನಾಟಿಕಲ್ ಎಂಜಿನಿಯರ್ ಆಗಿದ್ದು, ಉದ್ಯಮ, ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ನ್ಯೂಜೆರ್ಸಿಯಲ್ಲಿ ಅಧ್ಯಯನ ಮಾಡಿ, ಅಲ್ಲಿಯೇ ನೆಲೆಸಿರುವ ಇವರು 2017ರಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. ನ್ಯೂಜೆರ್ಸಿ ರಾಜ್ಯಪಾಲ ಹುದ್ದೆಗೆ ಸ್ಪರ್ಧಿಸಿ ಸೋತ ಇವರು ನಂತರ ಅಮೆರಿಕ ಸಂಸತ್ ಪ್ರವೇಶಿಸಲು ಯತ್ನಿಸಿದರೂ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಈಗ ಅವರು ಅಮೆರಿಕ ಅಧ್ಯಕ್ಷ ಹುದ್ದೆ ಮೇಲೆಯೇ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: Nikki Haley: ಅಧ್ಯಕ್ಷೀಯ ಚುನಾವಣೆಯಲ್ಲಿ ನಾನೇ ರಿಪಬ್ಲಿಕನ್ ಅಭ್ಯರ್ಥಿ, ಟ್ರಂಪ್‌ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ ಸವಾಲು
ಅಮೆರಿಕದ ಅತ್ಯಂತ ಹಳೇ ಪಕ್ಷ ಆಗಿರುವ ರಿಪಬ್ಲಿಕನ್ ಪಾರ್ಟಿ ಸದಸ್ಯನಾಗಿರುವ ವಿವೇಕ್ ರಾಮಸ್ವಾಮಿ ಮಾಧ್ಯಮದೊಂದಿಗೆ ಮಾತನಾಡುತ್ತ ‘ಅಮೆರಿಕದಲ್ಲಿ ಈ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ನಿಕ್ಕಿ ಹ್ಯಾಲೆ ಕೂಡ ರಿಪಬ್ಲಿಕನ್ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ನಾಯಕ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಈಗಾಗಲೇ ನಾನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿ ಎಂಬುದಾಗಿ ಘೋಷಿಸಿದ್ದಾರೆ. ಆದರೆ, ಭಾರತ ಮೂಲದವರೇ ಮೂವರು ರೇಸ್‌ನಲ್ಲಿದ್ದು, ಈ ಬಿಕ್ಕಟ್ಟನ್ನು ಟ್ರಂಪ್ ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಮೂಡಿದೆ.