Site icon Vistara News

C R Rao: ಕರ್ನಾಟಕ ಮೂಲದ ಗಣಿತಜ್ಞ ಸಿ.ಆರ್‌.ರಾವ್‌ಗೆ 102ನೇ ವಯಸ್ಸಿನಲ್ಲಿ ನೊಬೆಲ್‌ಗೆ ಸಮನಾದ ಪ್ರಶಸ್ತಿ

Indian-American mathematician CR Rao awarded International Prize in Statistics at 102

Indian-American mathematician CR Rao awarded International Prize in Statistics at 102

ವಾಷಿಂಗ್ಟನ್‌: ಕರ್ನಾಟಕ ಮೂಲದ ಗಣಿತಶಾಸ್ತ್ರಜ್ಞ, ಗಣಿತ ಕ್ಷೇತ್ರದಲ್ಲಿ ಸಾಧಿಸಿದ ಪಾರಮ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಲ್ಯಂಪುಡಿ ರಾಧಾಕೃಷ್ಣ ರಾವ್‌ (C R Rao) ಅವರಿಗೆ 102ನೇ ವಯಸ್ಸಿನಲ್ಲಿ 2023ನೇ ಸಾಲಿನ ಸಂಖ್ಯಾಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ (International Prize in Statistics) ಲಭಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಈ ಪ್ರಶಸ್ತಿಯು ನೊಬೆಲ್‌ಗೆ ಸಮ ಎಂದೇ ಹೇಳಲಾಗುತ್ತಿದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಅಮೆರಿಕದಲ್ಲಿಯೇ ನೆಲೆಸಿರುವ ಸಿ.ಆರ್.ರಾವ್‌ ಅವರು ಭಾಜನರಾಗಿದ್ದಾರೆ.

ಸಂಖ್ಯಾಶಾಸ್ತ್ರಕ್ಕೆ ಕಳೆದ 75 ವರ್ಷದಿಂದ ನೀಡಿದ ಕೊಡುಗೆಯನ್ನು ಪರಿಗಣಿಸಿ ಇಂಟರ್‌ನ್ಯಾಷನಲ್‌ ಪ್ರೈಜ್‌ ಇನ್‌ ಸ್ಟ್ಯಾಟಿಸ್ಟಿಕ್ಸ್‌ ಫೌಂಡೇಷನ್‌ ಪ್ರಶಸ್ತಿ ನೀಡಿದೆ. ಇವರಿಗೆ 102ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಕೆನಡಾದ ಒಟ್ಟಾವದಲ್ಲಿರುವ ಇಂಟರ್‌ನ್ಯಾಷನಲ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ವರ್ಲ್ಡ್‌ ಸ್ಟ್ಯಾಟಿಸ್ಟಿಕ್ಸ್‌ ಕಾಂಗ್ರೆಸ್‌ನಲ್ಲಿ ಜುಲೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿಯ ಮೊತ್ತವು 64.80 ಲಕ್ಷ ರೂಪಾಯಿ ಆಗಿದೆ.

“ಸಿ.ಆರ್.‌ ರಾವ್‌ ಅವರು ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆ ಜತೆಗೆ ಜಾಗತಿಕವಾಗಿ ಮನುಷ್ಯರು ವಿಜ್ಞಾನವನ್ನು ಅರ್ಥೈಸಿಕೊಳ್ಳುವಲ್ಲಿ ರಾವ್‌ ಅವರ ಪಾತ್ರವನ್ನು ಪರಿಗಣಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ” ಎಂದು ಇಂಟರ್‌ನ್ಯಾಷನಲ್‌ ಪ್ರೈಜ್‌ ಇನ್‌ ಸ್ಟ್ಯಾಟಿಸ್ಟಿಕ್ಸ್‌ ಫೌಂಡೇಷನ್‌ ಅಧ್ಯಕ್ಷ ಗಯ್‌ ನೇಸನ್‌ (Guy Nason) ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಸಿ.ಆರ್‌.ರಾವ್‌ ಜನನ

1920ರಲ್ಲಿ ಕರ್ನಾಟಕದ ಹಡಗಲಿಯಲ್ಲಿ ಸಿ.ಆರ್‌. ರಾವ್‌ ಅವರು ಜನಿಸಿದರು. ಇವರ ತಂದೆಯವರ ನಿವೃತ್ತಿಯ ನಂತರ ಆಂಧ್ರಪ್ರದೇಶಕ್ಕೆ ಕುಟುಂಬವು ತೆರಳಿತು. ಹಾಗಾಗಿ, ರಾವ್‌ ಅವರು ಆಂಧ್ರಪ್ರದೇಶದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಗಣಿತದಲ್ಲಿ ಅಪಾರ ಆಸಕ್ತಿ ಇದ್ದ ಕಾರಣ ರಾವ್‌ ಅವರು 1941 ರಲ್ಲಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ಸಿ, 1943ರಲ್ಲಿ ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರ ಗಳಲ್ಲಿ ಎಂಎ ಮತ್ತು ಪಿಎಚ್‌.ಡಿ ಪಡೆದರು. 1948ರಲ್ಲಿ ಕೆಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ಕಿಂಗ್ಸ್ ಕಾಲೇಜಿನಲ್ಲಿ ಪದವಿ ಪಡೆದರು.

ಇದನ್ನೂ ಓದಿ: ನೆನಪು | ಗಣಿತದ ಗಣಿ ಶ್ರೀನಿವಾಸ ರಾಮಾನುಜನ್‌

ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು 1965 ರಲ್ಲಿ ಅವರಿಗೆ ಪ್ರತಿಷ್ಠಿತ Sc.D ಪದವಿ ನೀಡಿ ಗೌರವಿಸಿದೆ. ಇವರು 31 ದೇಶಗಳ ವಿಶ್ವವಿದ್ಯಾಲಯಗಳಿಂದ 18 ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರವೂ ಇವರಿಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ. ಸಂಖ್ಯಾ ಶಾಸ್ತ್ರದಲ್ಲಿ ಇವರನ್ನು ಜೀವಂತ ದಂತಕತೆ ಎಂದೇ ಪರಿಗಣಿಸಲಾಗಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯು ಸಂಖ್ಯಾಶಾಸ್ತ್ರಗಳಲ್ಲಿ ಸಿ.ಆರ್. ಮತ್ತು ಭಾರ್ಗವಿ ರಾವ್ ಪ್ರಶಸ್ತಿಯನ್ನು ಸ್ಥಾಪಿಸಿದೆ. ಸಿಆರ್ ರಾವ್ ಅಡ್ವಾನ್ಸ್ಡ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್, ಸ್ಟ್ಯಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಹೈದರಾಬಾದ್‌ನಲ್ಲಿ ಒಂದು ರಸ್ತೆಗೆ ‘ಪ್ರೊ. ಸಿ.ಆರ್. ರಾವ್ ರಸ್ತೆ’ ಎಂದು ಹೆಸರಿಡಲಾಗಿದೆ.

Exit mobile version