Site icon Vistara News

Indian Army: ಬೊಜ್ಜಿಗೆ ನೋ ಎಂದ ಸೈನ್ಯ, ಸೈನ್ಯಾಧಿಕಾರಿಗಳಿಗೆ ಇನ್ನಷ್ಟು ಕಠಿಣ ಪರೀಕ್ಷೆಗಳು ಜಾರಿ

INDIAN ARMY

ಹೊಸದಿಲ್ಲಿ: ಸೈನ್ಯಾಧಿಕಾರಿಗಳಲ್ಲಿ ಬೊಜ್ಜು ಹೆಚ್ಚುತ್ತಿರುವ ಹಾಗೂ ದೈಹಿಕ ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ಸರಿಪಡಿಸುವ ದೃಷ್ಟಿಯಿಂದ ಭಾರತೀಯ ಸೇನೆಯು (Indian Army) ಹೊಸ ಕಠಿಣ ಫಿಟ್‌ನೆಸ್ ನೀತಿಯನ್ನು (Fitness policy) ತಂದಿದೆ.

ಭಾರತೀಯ ಸೈನ್ಯದಲ್ಲಿ ಅಸ್ತಿತ್ವದಲ್ಲಿರುವ ದೈಹಿಕ ಫಿಟ್‌ನೆಸ್‌ ಪರೀಕ್ಷೆಗಳಿಗೆ ಇನ್ನಷ್ಟು ಬಗೆಯ ಪರೀಕ್ಷೆಗಳನ್ನು ಸೇರಿಸಲಾಗುತ್ತಿದೆ. ಪ್ರತಿ ಸೈನ್ಯಾಧಿಕಾರಿಗೂ ಫಿಸಿಕಲ್ ಫಿಟ್‌ನೆಸ್ ಅಸೆಸ್‌ಮೆಂಟ್ ಕಾರ್ಡ್ (APAC) ಪರೀಕ್ಷೆಯ ಅಗತ್ಯವನ್ನು ಇನ್ನು ಮುಂದೆ ಒಡ್ಡಲಾಗುತ್ತದೆ. ಹೊಸ ಬದಲಾವಣೆಗಳ ಪ್ರಕಾರ, ತ್ರೈಮಾಸಿಕ ದೈಹಿಕ ಪರೀಕ್ಷೆಗಳನ್ನು ಕಮಾಂಡಿಂಗ್ ಆಫೀಸರ್ ಬದಲಿಗೆ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ಮುನ್ನಡೆಸಲಿದ್ದಾರೆ.

ಹೊಸ ಪರೀಕ್ಷಾ ನೀತಿಯು ಹಲವು ಹೊಸ ದೈಹಿಕ ಟೆಸ್ಟ್‌ಗಳನ್ನು ಹೊಂದಿದೆ. ಜೊತೆಗೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಸ್ಥಿರತೆಯನ್ನು ತರಲು ಉದ್ದೇಶಿಸಿದೆ. ಜೀವನಶೈಲಿಗೆ ಸಂಬಂಧಿಸಿದ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ದೈಹಿಕವಾಗಿ ಅನರ್ಹತೆ ಹೊಂದುವ ಅಥವಾ ಬೊಜ್ಜು ಹೊಂದಿರುವ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಪ್ರಸ್ತುತ ನಿಯಮಗಳ ಪ್ರಕಾರ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಬ್ಯಾಟಲ್ ಫಿಸಿಕಲ್ ಎಫಿಷಿಯನ್ಸಿ ಟೆಸ್ಟ್ (ಬಿಪಿಇಟಿ) ಮತ್ತು ಫಿಸಿಕಲ್ ಪ್ರೊಫಿಷಿಯನ್ಸಿ ಟೆಸ್ಟ್ (ಪಿಪಿಟಿ) ನಡೆಸುವ ಅಗತ್ಯವಿದೆ. ಬಿಪಿಇಟಿಯಲ್ಲಿ ಪ್ರತಿ ಸಿಬ್ಬಂದಿ ಐದು ಕಿಲೋಮೀಟರ್ ಓಟ, 60 ಮೀಟರ್ ಸ್ಪ್ರಿಂಟ್, ಸಮತಲ ಹಗ್ಗ ಆರೋಹಣ, ಲಂಬ ಹಗ್ಗ ಆರೋಹಣ, ಸಿಬ್ಬಂದಿಯ ವಯಸ್ಸಿನ ಪ್ರಕಾರ ನಿರ್ದಿಷ್ಟ ಸಮಯದ ಮಿತಿಯೊಳಗೆ 9 ಅಡಿ ಆಳದ ಚಾನಲ್ ದಾಟುವಿಕೆಯನ್ನು ಪೂರ್ಣಗೊಳಿಸಬೇಕು. ಪಿಪಿಟಿಯಲ್ಲಿ ಯೋಧರು 2.4 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಬೇಕು. ಐದು ಮೀಟರ್ ತೆವಳುವಿಕೆ, ಪುಷ್-ಅಪ್‌ಗಳು, ಚಿನ್-ಅಪ್‌ಗಳು, ಬಸ್ಕಿ, 100 ಮೀಟರ್ ಸ್ಪ್ರಿಂಟ್‌, ಈಜು ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು.

ಈ ಎರಡು ಪರೀಕ್ಷೆಗಳ ಫಲಿತಾಂಶಗಳನ್ನು ಕಮಾಂಡಿಂಗ್ ಆಫೀಸರ್ (CO) ನಿರ್ವಹಿಸುವ ವಾರ್ಷಿಕ ಗೌಪ್ಯ ವರದಿಯಲ್ಲಿ (ACR) ಸೇರಿಸಲಾಗುತ್ತದೆ. ಹೊಸದಾಗಿ ಪರಿಚಯಿಸಲಾದ ಮಾರ್ಗಸೂಚಿಗಳ ಅಡಿಯಲ್ಲಿ, ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಮಂಡಳಿಯು ನಿರ್ವಹಿಸುತ್ತದೆ. ತ್ರೈಮಾಸಿಕ ಪರೀಕ್ಷೆಗಳ ನೇತೃತ್ವವನ್ನು ಕನಿಷ್ಠ ಶ್ರೇಣಿಯ ಬ್ರಿಗೇಡಿಯರ್, ಇಬ್ಬರು ಕರ್ನಲ್‌ಗಳು ಮತ್ತು ವೈದ್ಯಕೀಯ ಅಧಿಕಾರಿ (MO) ವಹಿಸುತ್ತಾರೆ.

BPET ಮತ್ತು PPTಗೆ ಈಗ ಹೊಸದಾಗಿ ವಾರ್ಷಿಕ 50 ಮೀಟರ್ ಈಜು ಪರೀಕ್ಷೆ, ಅರ್ಧ ವಾರ್ಷಿಕ ಆಧಾರದ ಮೇಲೆ 10 ಕಿಮೀ ಸ್ಪೀಚ್ ಮಾರ್ಚ್ ಮತ್ತು 32 ಕಿಮೀ ರೂಟ್‌ ಮಾರ್ಚ್‌ ನಡೆಸಬೇಕಾಗುತ್ತದೆ. ಪ್ರತಿಯೊಬ್ಬ ಸೇನಾ ಸಿಬ್ಬಂದಿಯು APAC ಅನ್ನು ನಿರ್ವಹಿಸಬೇಕು. ಅವರ ಪ್ರಗತಿಯನ್ನು ಪತ್ತೆಹಚ್ಚಲು ಅವರ ಪರೀಕ್ಷೆಗಳ ಫಲಿತಾಂಶಗಳನ್ನು 24 ಗಂಟೆಗಳ ಒಳಗೆ ಸಲ್ಲಿಸಬೇಕು.

ಈ ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಪೂರೈಸಲು ವಿಫಲವಾದ ಮತ್ತು “ಅಧಿಕ ತೂಕ” ವರ್ಗಕ್ಕೆ ಸೇರುವವರಿಗೆ ಲಿಖಿತ ಸಮಾಲೋಚನೆ ಮತ್ತು ಸುಧಾರಣೆಯನ್ನು ತೋರಿಸಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರ ರಜೆಗಳು ರದ್ದಾಗುತ್ತವೆ ಹಾಗೂ ಟಿಡಿ ಕೋರ್ಸ್‌ಗಳು ಇರುವುದಿಲ್ಲ.

ಸುಧಾರಣೆಗೆ ನೀಡಲಾದ ಅವಧಿಯ ನಂತರವೂ ಪರೀಕ್ಷೆಗಳಲ್ಲಿ ಅಧಿಕಾರಿಯು ವಿಫಲವಾದರೆ, ನಂತರ ಸೇನಾ ನಿಯಂತ್ರಣ (ಎಆರ್) 15 ಮತ್ತು ಆರ್ಮಿ ಆಕ್ಟ್ 22ರ ಅಡಿಯಲ್ಲಿ ದಂಡನಾ ಕ್ರಮಗಳನ್ನು ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: Indian Army: ಗಡಿಯೊಳಗೆ ನುಸುಳುತ್ತಿದ್ದ ಉಗ್ರರ ಮೇಲೆ ಗುಂಡಿನ ಮಳೆ, ಒಬ್ಬ ಟೆರರಿಸ್ಟ್ ಖತಂ!

Exit mobile version