Site icon Vistara News

ಬೋರ್‌ವೆಲ್‌ನಿಂದ ಮಗು ಮೇಲೆತ್ತಿದ ಸೇನಾಯೋಧರ ಸಾಹಸ: ವಿಡಿಯೋ ಇಲ್ಲಿದೆ

child rescue

ಅಹಮದಾಬಾದ್: ಬೋರ್‌ವೆಲ್‌ಗೆ ಬಿದ್ದಿದ್ದ ಒಂದೂವರೆ ವರ್ಷದ ಮಗುವನ್ನು ಸಮಯಪ್ರಜ್ಞೆ, ಮೈ ನವಿರೆಬ್ಬಿಸುವ ಜಾಣ್ಮೆಯಿಂದ ಸಾಹಸಮಯವಾಗಿ ಮೇಲೆತ್ತಿ ಸೈ ಎನಿಸಿಕೊಂಡಿದೆ ಭಾರತೀಯ ಸೇನಾಯೋಧರ ತಂಡ.

ಇದು ನಡೆದಿರುವುದು ಗುಜರಾತ್‌ನ ಸುರೇಂದರ್‌ನಗರ್‌ ಜಿಲ್ಲೆಯ ಧ್ರಂಗ್‌ಧ್ರಾ ತಾಲೂಕಿನ ದೂಧ್‌ಪುರ ಗ್ರಾಮದಲ್ಲಿ. ಮಗುವಿನ ಜೀವ ಉಳಿಸಿ ಗ್ರಾಮದವರೆಲ್ಲರ ಹರ್ಷೋದ್ಗಾರಕ್ಕೆ ಕಾರಣರಾದವರು ಧ್ರಂಗ್‌ಧ್ರಾದ ಭೂಸೇನಾ ನೆಲೆಯ ಯೋಧರು.

https://vistaranews.com/wp-content/uploads/2022/06/child-rescue.mp4

ಮಂಗಳವಾರ ತಡರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಧ್ರಂಗ್‌ಧ್ರಾ ಪೊಲೀಸ್ ವರಿಷ್ಠಾಧಿಕಾರಿ ಶಿವಂ ವರ್ಮಾ ಅವರು ಸೇನಾ ಠಾಣೆಗೆ ಕರೆ ಮಾಡಿ, ಕಾರ್ಯಾಚರಣೆಯಲ್ಲಿ ನೆರವು ನೀಡುವ ಕುರಿತು ಮನವಿ ಮಾಡಿದರು. ಮಂಗಳವಾರ ರಾತ್ರಿ 9.21ರ ಸುಮಾರಿಗೆ ಈ ಕರೆ ಬಂದಿತ್ತು. ಶಿವಂ ಎಂಬ ಒಂದೂವರೆ ವರ್ಷದ ಮಗು ಕಿರಿದಾದ ಬೋರ್‌ವೆಲ್‌ ಒಳಗೆ ಬಿದ್ದಿತ್ತು. ದೂಧ್‌ಪುರ ಗ್ರಾಮ ಮಿಲಿಟರಿ ನೆಲೆಯಿಂದ 20 ಕಿಮೀ ದೂರದಲ್ಲಿತ್ತು. ತ್ವರಿತ ಪ್ರತಿಕ್ರಿಯೆ ತಂಡ 10 ನಿಮಿಷಗಳಲ್ಲಿ ಸಜ್ಜಾಗಿ ಸ್ಥಳ ತಲುಪಿತು.

ಮನಿಲಾ ಹಗ್ಗ, ಶೋಧ ದೀಪಗಳು, ಸುರಕ್ಷತಾ ಸರಂಜಾಮು ಮುಂತಾದ ಉಪಕರಣಗಳೊಂದಿಗೆ ಸ್ಥಳ ತಲುಪಿದ ತಂಡ ಪರಿಸ್ಥಿತಿಯನ್ನು ಅವಲೋಕಿಸಿ, ಕಾರ್ಯಾಚರಣೆಯ ರೂಪುರೇಷೆ ಕೈಗೊಂಡಿತು. ಮಗು ನೆಲದಿಂದ ಸುಮಾರು 20-25 ಅಡಿ ಆಳದಲ್ಲಿ ಸಿಲುಕಿಕೊಂಡಿತ್ತು. ಬೋರ್‌ವೆಲ್‌ನ ತಳ ಅದಕ್ಕಿಂತಲೂ ಇನ್ನೂ 300 ಅಡಿ ಕೆಳಗೆ ಇತ್ತು. ಆಗಲೇ ನೀರು ಮಗುವಿನ ಮೂಗಿನ ತನಕ ನೀರಿನ ಮಟ್ಟ ತಲುಪಿತ್ತು. ಮಗುವಿನ ಅಳು ಕೇಳಿ, ಅದು ಬದುಕಿದೆ ಎಂದು ಖಚಿತಪಡಿಸಿಕೊಳ್ಳಲಾಯಿತು.

ಸೇನಾ ತಂಡವು ಜಾಣ್ಮೆಯಿಂದ ಲೋಹದ ಹುಕ್ ತುದಿಗೆ ಬಟ್ಟೆಯನ್ನು ಬಿಗಿದು, ಅದನ್ನು ಮನಿಲಾ ಹಗ್ಗಕ್ಕೆ ಕಟ್ಟಿ, ಬೋರ್‌ವೆಲ್‌ಗೆ ಇಳಿಸಿತು. ಈ ಹುಕ್‌ ಮಗುವಿನ ಟಿ ಶರ್ಟ್‌ನ ಕಾಲರ್‌ಗೆ ಸಿಕ್ಕಿಹಾಕಿಕೊಂಡಿತು. ನಂತರ ತಂಡ ನಿಧಾನವಾಗಿ, ಎಚ್ಚರದಿಂದ ಹಗ್ಗವನ್ನು ಎಳೆದು, ಮಗುವನ್ನು ಹೊರತೆಗೆಯಿತು.

ನಂತರ ಪ್ರಥಮ ಚಿಕಿತ್ಸೆ ನೀಡಿ ಮಗುವನ್ನು ಧ್ರಂಗ್‌ಧ್ರಾದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪ್ರಸ್ತುತ ಮಗು ಅಪಾಯದಿಂದ ಚೇತರಿಸಿಕೊಂಡಿದೆ. ಸೇನಾಯೋಧರ ಜಾಣ್ಮೆ ಸಮಯಪ್ರಜ್ಞೆಗಳಿಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಗುಜರಾತ್‌, ಉತ್ತರಪ್ರದೇಶ, ಮುಂಬಯಿ, ದಿಲ್ಲಿಯಲ್ಲಿ ಆಲ್-ಖೈದಾ ಆತ್ಮಾಹುತಿ ದಾಳಿ ಬೆದರಿಕೆ

Exit mobile version