ನವ ದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಮತ್ತು ಮೇಲಿನ ರ‍್ಯಾಂಕ್‌ನ ಅಧಿಕಾರಿಗಳಿಗೆ ಆಗಸ್ಟ್ 1ರಿಂದ ಏಕರೂಪದ ಸಮವಸ್ತ್ರ ಜಾರಿಯಾಗಲಿದೆ. (Indian Army uniform ) ಸೇನಾಧಿಕಾರಿಗಳ ವಲಯದಲ್ಲಿ ಸಮಾನತೆಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಸೇನಾಧಿಕಾರಿಗಳ ಬೇರೆ ಬೇರೆ ರೆಜಿಮೆಂಟ್‌ಗಳಲ್ಲಿ ಭಿನ್ನ ಸಮವಸ್ತ್ರಗಳು ಇನ್ನು ಮುಂದೆ ಇರುವುದಿಲ್ಲ.
ಬ್ರಿಗೇಡಿಯರ್ ಹಾಗೂ ಅದಕ್ಕಿಂತ ಮೇಲಿನ ಸ್ತರದ ಸೇನಾಧಿಕಾರಿಗಳಿಗೆ ಇದು ಅನ್ವಯಿಸಲಿದೆ. ಮೇಜರ್ ಜನರಲ್ ಲೆಫ್ಟಿನೆಂಟ್ ಜನರಲ್ ಮತ್ತು ಜನರಲ್‌ಗಳಿಗೂ ಸಮಾನ ಸಮವಸ್ತ್ರ ಜಾರಿಯಾಗಲಿದೆ. ಈ ಮೇಲ್ಮಟ್ಟದ ಅಧಿಕಾರಿಗಳಿಗೆ ರೆಜಿಮೆಂಟ್‌ನ ಗಡಿ ಇರುವುದಿಲ್ಲ. ಸೇನೆಯಲ್ಲಿ ಸಮಾನತೆಯನ್ನು ಅನುಸರಿಸಲು ಇದು ಪೂರಕವಾಗಿದೆ.
ಸಮಾನ ಸಮ ವಸ್ತ್ರ ಏಕೆ?
ಇತ್ತೀಚೆಗೆ ಸೇನೆಯ ಕಮಾಂಡರ್‌ಗಳ ಮಟ್ಟದ ಸಭೆಯಲ್ಲಿ ವಿಸ್ತೃತ ಸಮಾಲೋಚನೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿರಸ್ತ್ರಾಣ, ರ‍್ಯಾಂಕ್ ಬ್ಯಾಡ್ಜ್‌ಗಳು, ಬೆಲ್ಟ್, ಶೂ ಸಾಮಾನ್ಯವಾಗಿ ಇರಲಿದೆ. ಪ್ರತ್ಯೇಕ ರೆಜಿಮೆಂಟ್ ಬೆಲ್ಟ್‌ಗಳು ಇರುವುದಿಲ್ಲ. ಕರ್ನಲ್‌ಗಳು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿಗಳ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸೇನೆಯಲ್ಲಿ ಸಮಾನ ಸಮ ವಸ್ತ್ರ ನೀತಿಯಿಂದ ಹಿರಿಯ ಅಧಿಕಾರಿಗಳ ನಡುವೆ ಸೌಹಾರ್ದತೆ, ಸಂಘಟನೆಯ ಮನೋಭಾವ ಹೆಚ್ಚಲಿದೆ. ಇದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಪ್ರೇರಣೆ ನೀಡಲಿದೆ ಎಂದು ರಕ್ಷಣಾ ವಲಯದ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Indian Military: ಭಾರತೀಯ ಸೇನೆಗೆ ಕೃತಕ ಬುದ್ಧಿಮತ್ತೆ ನೆರವು, ಎಲ್ಲೆಲ್ಲಿ ಬಳಕೆ?
ಈ ಬದಲಾವಣೆಯೊಂದಿಗೆ ಸೇನೆಯಲ್ಲಿ ಅಧಿಕಾರಿಯೊಬ್ಬ ಬ್ರಿಗೇಡಿಯರ್ ಆದ ಬಳಿಕ ಅಧಿಕಾರಿಗಳ ಗುಂಪಿನಲ್ಲಿ ಸಮಾನ ಸಮ ವಸ್ತ್ರ ಧರಿಸಿರುತ್ತಾರೆ.