ಲಂಡನ್: ಬ್ರಿಟನ್‌ನ ಪ್ರತಿಷ್ಠಿತ, ಅತಿ ದುಬಾರಿ ಹಾಗೂ ಐಷಾರಾಮಿ ಮನೆ ಎಂದೇ ಖ್ಯಾತಿಯಾಗಿರುವ “ಲಂಡನ್ ಮ್ಯಾನ್ಶನ್”ಅನ್ನು (London Mansion) ಭಾರತ ಮೂಲದ ಉದ್ಯಮಿ ರವಿ ರೂಯಿಯಾ ಅವರು ಖರೀದಿಸಿದ್ದಾರೆ. ಆ ಮೂಲಕ ಬ್ರಿಟನ್‌ನ ವಿಲಾಸಿ ಮನೆಯೊಂದು ಭಾರತೀಯ ಉದ್ಯಮಿಯ ಪಾಲಾದಂತಾಗಿದೆ. ರವಿ ರೂಯಿಯಾ ಅವರು ವಿಲಾಸಿ ಮನೆಯನ್ನು 1,191 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಲಂಡನ್‌ನ ರೆಜೆಂಟ್ಸ್ ಪಾರ್ಕ್ ಬಳಿಯ 150 ಪಾರ್ಕ್ ರಸ್ತೆಯಲ್ಲಿರುವ ಬೃಹತ್ ಹಾಗೂ ಐಷಾರಾಮಿ ಮನೆಯು ಇದುವರೆಗೆ ರಷ್ಯಾದ ಖ್ಯಾತ ಉದ್ಯಮಿ ಆಂಡ್ರೆ ಗೊಂಚರೆಂಕೋ ಅವರ ಒಡೆತನದಲ್ಲಿತ್ತು. ರಷ್ಯಾ ಹೂಡಿಕೆದಾರ ಆಂಡ್ರೆ ಗೊಂಚರೆಂಕೋ ಅವರು ಈ ಮನೆಯನ್ನು 2012ರಲ್ಲಿ 1,264 ಕೋಟಿ ರೂ. ಕೊಟ್ಟು ಖರೀದಿಸಿದ್ದರು. ಆದರೆ, ಅವರು ಕಳೆದ ಎರಡು ವರ್ಷದಿಂದ ಮಾತ್ರ ಈ ಮನೆಯಲ್ಲಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ. ಈಗ ಅವರು ಮನೆಯನ್ನು ಭಾರತ ಮೂಲದ ಉದ್ಯಮಿಗೆ ಮಾರಾಟ ಮಾಡಿದ್ದಾರೆ.
“ಲಂಡನ್ ಮ್ಯಾನ್ಶನ್‌ಅನ್ನು ಮತ್ತಷ್ಟು ನವೀಕರಣ ಮಾಡಲಾಗುತ್ತಿದೆ. ಹಾಗಾಗಿ, ನಿಗದಿತ ಮೊತ್ತವು ರೂಯಿಯಾ ಕುಟುಂಬಸ್ಥರನ್ನು ಆಕರ್ಷಿಸಿದೆ. ಹಾಗಾಗಿ, ಒಳ್ಳೆಯ ಹೂಡಿಕೆ ಎಂದು ಮನೆ ಖರೀದಿಸಿದ್ದಾರೆ” ಎಂದು ರವಿ ರೂಯಿಯಾ ಕುಟುಂಬದ ವಕ್ತಾರ ವಿಲಿಯಂ ರೆಗೋ ತಿಳಿಸಿದ್ದಾರೆ. ಸುಮಾರು ನಾಲ್ಕು ಎಕರೆ ಜಾಗದಲ್ಲಿ ನಿರ್ಮಿಸಿರುವ, 45 ಕೋಣೆಗಳಿರುವ ಹಾಗೂ 205 ವರ್ಷ ಹಳೆಯ ಮನೆಯು ಜಗತ್ತನ್ನೇ ಆಕರ್ಷಿಸಿದೆ.
ಇದನ್ನೂ ಓದಿ: Samantha Ruth Prabhu : ಹೈದರಾಬಾದ್‌ನಲ್ಲಿ 7.8 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಸಮಂತಾ
ಯಾರಿವರು ರವಿ ರೂಯಿಯಾ?
ರವಿ ರೂಯಿಯಾ ಅವರು ಎಸ್ಸಾರ್ ಗ್ರೂಪ್‌ನ ಸಹ ಮಾಲೀಕರಾಗಿದ್ದಾರೆ. ಎಸ್ಸಾರ್ ಗ್ರೂಪ್ ಜಾಗತಿಕ ಮಟ್ಟದ ಕಂಪನಿಯಾಗಿದ್ದು, ಶಶಿ ರೂಯಿಯಾ ಹಾಗೂ ರವಿ ರೂಯಿಯಾ ಸಹೋದರರು ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಇಂಧನ, ಮೂಲ ಸೌಕರ್ಯ, ಮೆಟಲ್, ಶಿಪ್ಪಿಂಗ್ ಸೇರಿ ಹಲವು ಕ್ಷೇತ್ರಗಳಲ್ಲಿ ಇವರ ಹಿಡಿತವಿದೆ. ಅಮೆರಿಕ, ಆಫ್ರಿಕಾ ಸೇರಿ ಹತ್ತಾರು ರಾಷ್ಟ್ರಗಳಲ್ಲಿ ಇವರ ಉದ್ಯಮ ಗಟ್ಟಿಯಾಗಿ ನೆಲೆಯೂರಿದೆ.