Site icon Vistara News

Indian Constitution: ಕೇಂದ್ರ ಸರ್ಕಾರ ಹಂಚಿದ ಸಂವಿಧಾನದ ಪ್ರತಿಯಲ್ಲಿ ʼಸಮಾಜವಾದಿʼ, ʼಜಾತ್ಯತೀತʼ ಪದಗಳನ್ನು ಕೈಬಿಡಲಾಗಿದೆಯಾ?

preamble

ಹೊಸದಿಲ್ಲಿ: ನೂತನ ಸಂಸತ್ ಭವನಕ್ಕೆ (New parliament building) ಪ್ರವೇಶಿಸುವ ಮೊದಲು ಸಂಸದರಿಗೆ ನೀಡಿದ ಸಂವಿಧಾನದ (Indian Constitution) ಹೊಸ ಪ್ರತಿಗಳ ಮುನ್ನುಡಿಯಲ್ಲಿ (preamble) ‌ʼಸಮಾಜವಾದಿ ಜಾತ್ಯತೀತ’ (socialist secular) ಎಂಬ ಪದಗಳನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

“ಸೆ.19ರಂದು ನಮಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳ ಪೀಠಿಕೆಯಲ್ಲಿ ʼಸಮಾಜವಾದಿ ಜಾತ್ಯತೀತ’ ಪದಗಳಿಲ್ಲ. 1976ರಲ್ಲಿ ತಿದ್ದುಪಡಿಯ ನಂತರ ಪದಗಳನ್ನು ಸೇರಿಸಲಾಗಿದೆ ಎಂದು ನಮಗೆ ತಿಳಿದಿದೆ. ಆದರೆ ಯಾರಾದರೂ ಇಂದು ನಮಗೆ ಸಂವಿಧಾನವನ್ನು ನೀಡಿದರೆ ಮತ್ತು ಅದರಲ್ಲಿ ಆ ಪದಗಳಿಲ್ಲದಿದ್ದರೆ ಅದು ಕಳವಳದ ವಿಷಯ” ಎಂದು ಚೌಧರಿ ಆಕ್ಷೇಪಿಸಿದ್ದಾರೆ.

“ಇದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಉದ್ದೇಶ ಅನುಮಾನಾಸ್ಪದವಾಗಿದೆ. ಇದನ್ನು ಜಾಣತನದಿಂದ ಮಾಡಲಾಗಿದ್ದು, ಕಳವಳದ ವಿಷಯವಾಗಿದೆ. ನಾನು ಈ ವಿಷಯವನ್ನು ಎತ್ತಲು ಪ್ರಯತ್ನಿಸಿದೆ; ಆದರೆ ಈ ವಿಷಯ ಪ್ರಸ್ತಾಪಿಸಲು ನನಗೆ ಅವಕಾಶ ಸಿಗಲಿಲ್ಲ” ಎಂದು ಅವರು ದೂರಿದ್ದಾರೆ.

1976ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನಕ್ಕೆ ಮಾಡಿದ 42ನೇ ತಿದ್ದುಪಡಿಯ ಭಾಗವಾಗಿ ಪೀಠಿಕೆಯಲ್ಲಿ ʼಸಮಾಜವಾದಿ’ ಮತ್ತು ʼಜಾತ್ಯತೀತ’ ಪದಗಳನ್ನು ಸೇರಿಸಲಾಗಿತ್ತು.

ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಅಧೀರ್ ಚೌಧರಿ ಅವರು ಸಂವಿಧಾನದ ಕುರಿತು ಪ್ರಸ್ತಾಪಿಸಿದರು. ಪ್ರೆಸಿಡೆಂಟ್‌ ಆಫ್‌ ಭಾರತʼ ಎಂಬ ಹೆಸರಿನಲ್ಲಿ ಜಿ20 ಶೃಂಗಸಭೆಯ ಔತಣಕೂಟಕ್ಕೆ ಕಳುಹಿಸಲಾದ ಆಹ್ವಾನವನ್ನು ಉಲ್ಲೇಖಿಸಿ, ʼಇಂಡಿಯಾ’ ಮತ್ತು ʼಭಾರತ’ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.

“ಈ ಸಂವಿಧಾನವು ನಮಗೆ ಗೀತಾ, ಕುರಾನ್ ಮತ್ತು ಬೈಬಲ್‌ಗಿಂತ ಕಡಿಮೆಯಿಲ್ಲ. 1ನೇ ವಿಧಿ ಹೇಳುವಂತೆ, “ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ” ಅಂದರೆ ಇಂಡಿಯಾ ಮತ್ತು ಭಾರತಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಅನಗತ್ಯವಾಗಿ ಎರಡರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸದಿದ್ದರೆ ಉತ್ತಮ” ಎಂದು ಚೌಧರಿ ಹೇಳಿದರು.

ಮಂಗಳವಾರ ಹೊಸ ಕಟ್ಟಡದಲ್ಲಿ ಸಂಸತ್ತಿನ ವಿಶೇಷ ಅಧಿವೇಶನದ 2ನೇ ದಿನ ಸಂಪನ್ನಗೊಂಡಿತು. ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಹಳೆಯ ಕಟ್ಟಡ 96 ವರ್ಷಗಳಿಂದ ಕಲಾಪಗಳಿಗೆ ಆಶ್ರಯವಾಗಿತ್ತು. ಇನ್ನು ಮುಂದೆ ಅದನ್ನು ʼಸಂವಿಧಾನ ಸದನ’ (samvidhan sadan) ಎಂದು ಕರೆಯಲಾಗುತ್ತದೆ. ಹೊಸ ನಾಲ್ಕು ಅಂತಸ್ತಿನ ತ್ರಿಕೋನ ಆಕಾರದ ಸಂಕೀರ್ಣವನ್ನು ಅಧಿಕೃತ ಅಧಿಸೂಚನೆಯ ಪ್ರಕಾರ ʼಭಾರತದ ಸಂಸತ್ತು’ ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ: Special Parliament Session: ಹಳೆಯ ಸಂಸತ್‌ ಭವನ ಇನ್ನು ʼಸಂವಿಧಾನ ಸದನʼ: ಪಿಎಂ ನರೇಂದ್ರ ಮೋದಿ

Exit mobile version