Site icon Vistara News

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rachita Taneja

Indian, Hong Kong Cartoonists Win Kofi Annan Courage Award

ನವದೆಹಲಿ: ಭಾರತದ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದೆ, ಮೊನಚು ಕಾರ್ಟೂನ್‌ಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ರಚಿತಾ ತನೇಜಾ (Rachita Taneja) ಅವರಿಗೆ ಪ್ರತಿಷ್ಠಿತ ‘ಕೋಫಿ ಅನ್ನಾನ್‌ ಕರೇಜ್‌ ಇನ್‌ ಕಾರ್ಟೂನಿಂಗ್‌ ಅವಾರ್ಡ್‌’ (Kofi Annan Courage in Cartooning Award) ಲಭಿಸಿದೆ. ರಚಿತಾ ತನೇಜಾ ಹಾಗೂ ಹಾಂಕಾಂಗ್‌ನ ಜುಂಜಿ ಅವರಿಗೆ (Zunzi) ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾಧ್ಯಮ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ರಚಿತಾ ತನೇಜಾ ಹಾಗೂ ಜುಂಜಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಮೊನಚು ಕಾರ್ಟೂನ್‌ಗಳ ಮೂಲಕವೇ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದ, ಜನರಲ್ಲಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಇವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು 180 ರಾಷ್ಟ್ರಗಳ ಪಟ್ಟಿಯಲ್ಲಿ 161ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಹಾಂಕಾಂಗ್‌ 140ನೇ ಸ್ಥಾನದಲ್ಲಿದೆ.

ಯಾರಿವರು ರಚಿತಾ ತನೇಜಾ?

ರಚಿತಾ ತನೇಜಾ ಅವರು ಕಾರ್ಟೂನಿಸ್ಟ್‌ ಆಗಿದ್ದು, ಸ್ಯಾನಿಟರಿ ಪ್ಯಾನೆಲ್ಸ್‌ ಎಂಬ ವೆಬ್‌ಕಾಮಿಕ್‌ ಆನ್‌ಲೈನ್‌ ವೇದಿಕೆ ಮೂಲಕವೇ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಾರೆ. ಕಿರುಕುಳ, ಹೆಣ್ಣುಮಕ್ಕಳ ಮುಟ್ಟು, ಸರ್ವಾಧಿಕಾರ ಸೇರಿ ಹಲವು ವಿಷಯಗಳ ಕುರಿತು ಇವರ ಕಾರ್ಟೂನ್‌ಗಳು ಚರ್ಚೆಯನ್ನು ಹುಟ್ಟುಹಾಕಿವೆ. ಇವರ ವಿರುದ್ಧ ಎಬಿವಿಪಿ ಕೇಸ್‌ ಕೂಡ ದಾಖಲಿಸಿದೆ. ನ್ಯಾಯಾಂಗ ನಿಂದನೆಯ ಪ್ರಕರಣದ ವಿಚಾರಣೆಯೂ ನಡೆಯುತ್ತಿದ್ದು, ಪ್ರಕರಣ ಸಾಬೀತಾದರೆ ಇವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

“ಮುಖ್ಯವಾಹಿನಿಯಲ್ಲಿರುವ ಪತ್ರಕರ್ತರು ಪಾರದರ್ಶಕವಾಗಿ ಕೆಲಸ ಮಾಡಲು ಆಗದಿದ್ದರೆ ಅಥವಾ ಅವರು ಆಡಳಿತ ಪಕ್ಷದಿಂದ ಪ್ರಭಾವಿತರಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಾರ್ಟೂನಿಸ್ಟ್‌ಗಳು ಮಾಧ್ಯಮ ಸ್ವಾತಂತ್ರ್ಯವನ್ನು ಮುನ್ನಡೆಸಬೇಕು, ನಿಷ್ಪಕ್ಷಪಾತವಾಗಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಬೇಕು” ಎಂಬುದಾಗಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ರಚಿತಾ ತನೇಜಾ ಹೇಳಿದರು. ಹಾಂಕಾಂಗ್‌ನ ಜುಂಜಿ ಅವರು ಪತ್ರಿಕೆಯೊಂದರಲ್ಲಿ ಕಾರ್ಟೂನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಚೀನಾ ನೂತನ ಭದ್ರತಾ ಕಾನೂನುಗಳನ್ನು ಅಳವಡಿಸಿಕೊಂಡ ಬಳಿಕ ಪತ್ರಿಕೆಯು ಇವರನ್ನು ಕೆಲಸದಿಂದ ವಜಾಗೊಳಿಸಿತ್ತು.

ಇದನ್ನೂ ಓದಿ: Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Exit mobile version