ನವ ದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ (Ukrain Students) ಇದು ಶುಭ ಸುದ್ದಿ. ಈ ವೈದ್ಯಕೀಯ ವಿದ್ಯಾರ್ಥಿಗಳು ಜಗತ್ತಿನ ಬೇರೆ ಬೇರೆ ಮೆಡಿಕಲ್ ಕಾಲೇಜುಗಳಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಬಹುದಾಗಿದೆ. ವಿಶೇಷ ಸಂದರ್ಭವನ್ನು ಎಂದು ಪರಿಗಣಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್(ಎನ್ಎಂಸಿ), ಉಕ್ರೇನ್ ನೀಡುವ ಅಕಾಡೆಮಿಕ್ ಮೊಬಿಲಿಟಿ ಪ್ರೋಗ್ರಾಮ್‌ಗೆ ಮಾನ್ಯತೆ ನೀಡಲು ಒಪ್ಪಿದ್ದು, ವಿದ್ಯಾರ್ಥಿಗಳು ಬೇರೆ ವಿವಿಗಳಿಗೆ ಸ್ಥಳಾಂತರಗೊಂಡು ಓದಬಹುದಾಗಿದೆ. ಆದರೆ, ವಿದ್ಯಾರ್ಥಿಗಳು ದಾಖಲಾಗಿರುವ ಉಕ್ರೇನಿಯನ್ ಮೂಲ ವಿಶ್ವವಿದ್ಯಾಲಯಗಳೇ ಡಿಗ್ರಿಯನ್ನು ನೀಡಲಿವೆ.
ಎನ್ಎಂಸಿ ಕಾಯಿದೆಯ ಪ್ರಕಾರ, ವಿದೇಶಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಲ್ಲಿಯೇ ಪೂರ್ತಿ ಮಾಡಬೇಕು. ಒಂದೇ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಳ್ಳಬೇಕು. ಆದರೆ, ಈಗ ಉಕ್ರೇನ್ ನೀಡುತ್ತಿರುವ ಮೊಬಿಲಿಟಿ ಪ್ರೋಗ್ರಾಮ್‌ವನ್ನು ಪರಿಗಣಿಸಲಾಗಿದ್ದು, ಈ ಬಗ್ಗೆ ಆಯೋಗವು ವಿದೇಶಾಂಗ ಸಚಿವಾಲಯದ ಜತೆಯೂ ಚರ್ಚಿಸಿದೆ. ಅಕಾಡೆಮಿಕ್ ಮೊಬಿಲಿಟಿ ಪ್ರೋಗ್ರಾಮ್ ಎಂಬುದು ಜಾಗತಿಕವಾಗಿ ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಚಟುವಟಿಕೆಯ ತಾತ್ಕಾಲಿಕ ಸ್ಥಳಾಂತರಗೊಳಿಸುವ ಪ್ರಯತ್ನವಾಗಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಆದರೆ, ಹೀಗೆ ಸ್ಥಳಾಂತರಗೊಂಡ ವಿದ್ಯಾರ್ಥಿಗೆ ಶಿಕ್ಷಣ ಪೂರೈಸಿದ ವಿವಿಯಿಂದ ಪದವಿ ಪತ್ರ ನೀಡಲಾಗುವುದಿಲ್ಲ. ಬದಲಿಗೆ ಮೂಲಕ ಉಕ್ರೇನಿಯನ್ ವಿಶ್ವವಿದ್ಯಾಲಯವೇ ಪದವಿಯನ್ನು ನೀಡಬೇಕಾಗುತ್ತದೆ ಎಂದು ಎನ್ಎಂಸಿ ತನ್ನ ಅಧಿಕೃತ ನೋಟಿಸ್‌ನಲ್ಲಿ ತಿಳಿಸಿದೆ. ವಿಶೇಷ ಸಂದರ್ಭ ಎಂದು ಪರಿಗಣಿಸಿ, ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ 2002ರ ಪ್ರವೇಶ ಟೆಸ್ಟ್ ನಿಯಮಗಳಡಿಯಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಆರಂಭವಾದಾಗ ಭಾರತದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ ತೊರೆದು ತಾಯ್ನಾಡಿಗೆ ಹಿಂದಿರುಗಿದ್ದರು. ಉಕ್ರೇನ್‌ನಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಕರ್ನಾಟಕದ ಹಾವೇರಿಯ ಚಳಗೇರಿಯ ನವೀನ್ ಶಂಕರಪ್ಪ ಎಂಬ ವಿದ್ಯಾರ್ಥಿ ಅಸುನೀಗಿದ್ದರು. ಆ ಬಳಿಕ ಭಾರತ ಸರ್ಕಾರದ ಮೇಲೆ ಭಾರೀ ಒತ್ತಡ ಸೃಷ್ಟಿಯಾಗಿತ್ತು. ಉಕ್ರೇನ್‌ನಿಂದ ಹಿಂದಿರುಗಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯ ಕೇಳಿ ಬಂದಿತ್ತು.
ಇದನ್ನೂ ಓದಿ | ರಷ್ಯಾ ಮತ್ತು ಉಕ್ರೇನ್ ಕದನ ವಿರಾಮಕ್ಕೆ ಸದ್ದಿಲ್ಲದೆ ಭಾರತದ ಪ್ರಯತ್ನ: ಮಾಸ್ಕೋದಲ್ಲಿ ದೋವಲ್