ಸಿಡ್ನಿ: ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ (Indian Australian senator) ಒಬ್ಬರು ಇತಿಹಾಸದಲ್ಲೇ ಮೊದಲ ಬಾರಿಗೆ ಭಗವದ್ಗೀತೆಯ (Bhagavad Gita) ಮೇಲೆ ಕೈಯಿಟ್ಟು ಪ್ರಮಾಣ ವಚನ (taking oath) ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಭಾರತೀಯ ಮೂಲದ ಬ್ಯಾರಿಸ್ಟರ್ ವರುಣ್ ಘೋಷ್ ಅವರು ಮಂಗಳವಾರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಹೀಗೆ ಮಾಡಿದ ಮೊದಲ ಭಾರತ ಸಂಜಾತ ಸದಸ್ಯರಾಗಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಾದಿಂದ ಬಂದಿರುವ ವರುಣ್, ಫೆಡರಲ್ ಸಂಸತ್ತಿನ ಸೆನೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಲೆಜಿಸ್ಲೇಟಿವ್ ಅಸೆಂಬ್ಲಿ ಮತ್ತು ಲೆಜಿಸ್ಲೇಟಿವ್ ಕೌನ್ಸಿಲ್ ಎರಡರಿಂದಲೂ ಬೆಂಬಲವನ್ನು ಪಡೆದ ನಂತರ ಘೋಷ್ ಅವರನ್ನು ಸೆನೆಟರ್ ಆಗಿ ನೇಮಿಸಲಾಯಿತು.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ವರುಣ್‌ಗೆ ಶುಭ ಹಾರೈಸಿದ್ದಾರೆ. “ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸ್ವಾಗತ. ತಂಡದಲ್ಲಿ ನಿಮ್ಮನ್ನು ಹೊಂದಲು ಸಂತೋಷವಾಗಿದೆ” ಎಂದು ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಘೋಷ್ ಅವರನ್ನು ಲೇಬರ್ ಸೆನೆಟ್ ತಂಡಕ್ಕೆ ಸ್ವಾಗತಿಸಿದರು. “ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ್ ಅವರಿಗೆ ಸುಸ್ವಾಗತ. ಸೆನೆಟರ್ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಆಗಿದ್ದಾರೆ. ನಾನು ಆಗಾಗ್ಗೆ ಹೇಳುತ್ತಿದ್ದೆ, ನೀವು ಯಾವುದಾದರೂ ವಿಷಯದಲ್ಲಿ ಮೊದಲಿಗರಾದಾಗ, ನೀವು ಕೊನೆಯವರೂ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೆನೆಟರ್ ಘೋಷ್ ಅವರ ಸಮುದಾಯಕ್ಕೆ ಮತ್ತು ಪಶ್ಚಿಮ ಆಸ್ಟ್ರೇಲಿಯನ್ನರಿಗೆ ಬಲವಾದ ಧ್ವನಿಯಾಗುತ್ತಾರೆ” ಎಂದು ಅವರು ಹೇಳಿದ್ದಾರೆ.
ಯಾರು ವರುಣ್ ಘೋಷ್?
1980ರ ದಶಕದಲ್ಲಿ ವರುಣ್ ಅವರ ಪೋಷಕರು ಭಾರತದಿಂದ ಸ್ಥಳಾಂತರಗೊಂಡಿದ್ದರು. 1985ರಲ್ಲಿ ಜನಿಸಿದ ಘೋಷ್ 1997ರಲ್ಲಿ ಪರ್ತ್‌ಗೆ ತೆರಳಿದರು. ಕ್ರೈಸ್ಟ್ ಚರ್ಚ್ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ ಪದವಿಗಳನ್ನು ಪಡೆದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಮನ್‌ವೆಲ್ತ್ ಸ್ಕಾಲರ್ ಆಗಿದ್ದರು. ಅವರು ಹಿಂದೆ ನ್ಯೂಯಾರ್ಕ್‌ನಲ್ಲಿ ಹಣಕಾಸು ವಕೀಲರಾಗಿ ಮತ್ತು ವಾಷಿಂಗ್ಟನ್ DCಯಲ್ಲಿ ವಿಶ್ವ ಬ್ಯಾಂಕ್‌ನ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಪರ್ತ್‌ನಲ್ಲಿ ಆಸ್ಟ್ರೇಲಿಯಾದ ಲೇಬರ್ ಪಾರ್ಟಿಯನ್ನು ಸೇರಿದಾಗ ಅವರ ರಾಜಕೀಯ ಪಯಣ ಪ್ರಾರಂಭವಾಯಿತು.
ಕಳೆದ ಕೆಲವು ವರ್ಷಗಳಿಂದ ಘೋಷ್ ಅವರು ನ್ಯಾಯವಾದಿಯಾಗಿ ಕೆಲಸ ಮಾಡಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಮತ್ತು ಅಂತಾರಾಷ್ಟ್ರೀಯವಾಗಿ ವಿಶ್ವ ಬ್ಯಾಂಕ್‌ನಲ್ಲಿ ಕಾನೂನು ವಿಷಯಗಳೊಂದಿಗೆ
ವ್ಯವಹರಿಸಿದ್ದಾರೆ. 2019ರ ಫೆಡರಲ್ ಚುನಾವಣೆಯಲ್ಲಿ, ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯ ಸೆನೆಟ್ ಟಿಕೆಟ್‌ನಲ್ಲಿ ಘೋಷ್ ಐದನೇ ಸ್ಥಾನ ಪಡೆದರು. ಆದರೆ ಆಯ್ಕೆಯಾಗಲಿಲ್ಲ. ಅವರು ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿದ್ದಾರೆ. ಬ್ಯಾಂಕ್‌ಗಳು, ಸಂಪನ್ಮೂಲ ಕಂಪನಿಗಳು ಮತ್ತು ನಿರ್ಮಾಣ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ.
ಇದನ್ನೂ ಓದಿ: PM Narendra Modi: ಮೋದಿ ಭೇಟಿ ಹಿನ್ನೆಲೆಯಲ್ಲಿ ತಿರಂಗಾ ಬಣ್ಣಗಳಲ್ಲಿ ಮಿನುಗಿದ ಸಿಡ್ನಿ ಹಾರ್ಬರ್, ಓಪೇರಾ ಹೌಸ್!