Site icon Vistara News

Amit Kshatriya: ಚಂದ್ರನಿಂದ ಮಂಗಳನ ಅಂಗಳಕ್ಕೆ ನಾಸಾ ಯೋಜನೆ; ಭಾರತ ಮೂಲದ ಅಮಿತ್‌ ಮುಖ್ಯಸ್ಥ

Indian-Origin Engineer Amit Kshatriya To Head NASA's New Moon To Mars Programme

Indian-Origin Engineer Amit Kshatriya To Head NASA's New Moon To Mars Programme

ವಾಷಿಂಗ್ಟನ್‌: ಚಂದ್ರನ ಅಂಗಳದಿಂದ ಮಂಗಳನ ಅಂಗಳಕ್ಕೆ ಮಾನವಸಹಿತ ಗಗನಯಾನ ಕೈಗೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸಿರುವ ಯೋಜನೆಯ (Moon to Mars Programme) ಮುಖ್ಯಸ್ಥರಾಗಿ ಭಾರತ ಮೂಲದ ಸಾಫ್ಟ್‌ವೇರ್‌ ಹಾಗೂ ರೋಬೊಟಿಕ್‌ ಎಂಜಿನಿಯರ್‌ ಅಮಿತ್‌ ಕ್ಷತ್ರಿಯ (Amit Kshatriya) ನೇಮಕಗೊಂಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಿತ್‌ ಕ್ಷತ್ರಿಯ ಅವರನ್ನು ನೇಮಿಸಿ ನಾಸಾ ಆದೇಶ ಹೊರಡಿಸಿದೆ.

ನಾಸಾದ ಸಾಮಾನ್ಯ ಪರಿಶೋಧನೆ ವ್ಯವಸ್ಥೆಗಳ ಅಭಿವೃದ್ಧಿ ವಿಭಾಗದ ಪ್ರಭಾರ ಉಪ ಸಹಾಯಕ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್‌ ಕ್ಷತ್ರಿಯ ಅವರನ್ನು ಉನ್ನತ ಹುದ್ದೆಗೆ ನೇಮಿಸಲಾಗಿದೆ. ಮನುಕುಲದ ಒಳಿತಿಗಾಗಿ ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಮೂನ್‌ ಟೂ ಮಾರ್ಸ್‌ ಯೋಜನೆಯು ಹೊಂದಿದೆ. ಹಾಗಾಗಿ, ಅಮಿತ್‌ ಕ್ಷತ್ರಿಯ ಅವರ ಕಾರ್ಯಕ್ಷಮತೆ, ಚಾಣಾಕ್ಷತೆಯನ್ನು ಗಮನಿಸಿ ನಾಸಾ ನೇಮಕ ಮಾಡಿದೆ ಎಂದು ತಿಳಿದುಬಂದಿದೆ. ಮಾನವ ಸಹಿತ ಗಗನಯಾನವನ್ನು ಮೊದಲು ಚಂದ್ರನ ಅಂಗಳಕ್ಕೆ ಕೈಗೊಂಡು, ಅಲ್ಲಿಯೇ ಸುದೀರ್ಘವಾಗಿ ನೆಲೆಸಿ, ಬಳಿಕ ಚಂದ್ರನ ಅಂಗಳಕ್ಕೆ ಗಗನಯಾನ ಕೈಗೊಳ್ಳುವುದು ಯೋಜನೆಯ ಗುರಿಯಾಗಿದೆ.

ಯಾರಿದು ಅಮಿತ್‌ ಕ್ಷತ್ರಿಯ?

ಭಾರತ ಮೂಲದ ಅಮಿತ್‌ ಕ್ಷತ್ರಿಯ ಅವರು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಟೆಕ್ಸಾಸ್‌ ವಿವಿಯಿಂದ ಗಣಿತದಲ್ಲಿ ಎಂಎ ಪದವಿ ಗಳಿಸಿದ್ದಾರೆ. ಭಾರತ ಮೂಲದ ದಂಪತಿಗೆ ಜನಿಸಿರುವ ಅಮಿತ್‌ ಕ್ಷತ್ರಿಯ, 2003ರಲ್ಲಿ ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ, ರೋಬೊಟಿಕ್ಸ್‌ ಎಂಜಿನಿಯರ್‌ ಆಗಿ ವೃತ್ತಿ ಆರಂಭಿಸಿದರು. 2014ರಿಂದ 2017ರ ಅವಧಿಯಲ್ಲಿ ಸ್ಪೇಸ್‌ ಸ್ಟೇಷನ್‌ನ ಫ್ಲೈಟ್‌ ಡೈರೆಕ್ಟರ್‌ ಆಗಿ, 2017ರಿಂದ 2021ರವರೆಗೆ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ನ ಡೆಪ್ಯುಟಿ, ಕಾರ್ಯಕಾರಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರಿಗೆ ನಾಸಾ ಯೋಜನೆಯ ಮಹೋನ್ನತ ಉದ್ದೆ ಲಭಿಸಿದೆ.

ಭಾರತ ಮೂಲದವರೇ ಚೀಫ್‌ ಟೆಕ್ನಾಲಜಿಸ್ಟ್‌

ಕೆಲ ತಿಂಗಳ ಹಿಂದಷ್ಟೇ ಏರೋಸ್ಪೇಸ್ ತಜ್ಞರಾಗಿರುವ ಭಾರತ ಮೂಲದ ಎ ಸಿ ಚರಾನಿಯಾ (AC Charania) ಅವರು ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಚೀಫ್ ಟೆಕ್ನಾಲಜಿಸ್ಟ್ (NASA Chief Technologist) ಆಗಿ ನೇಮಕಗೊಂಡಿದ್ದಾರೆ. ನಾಸಾದ ಟೆಕ್ನಾಲಜಿ, ಪಾಲಿಸಿ ಮತ್ತು ಸ್ಟ್ರಾಟರ್ಜಿ ವ್ಯಾಪ್ತಿಯಲ್ಲಿ ಚರಾನಿಯಾ ಅವರು ಕೆಲಸ ಮಾಡಲಿದ್ದಾರೆಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಎಸಿ ಚರಾನಿಯಾ ಅವರು ಆರು ಮಿಷನ್ ನಿರ್ದೇಶನಾಲಯಗಳಾದ್ಯಂತ ಮಿಷನ್ ಅಗತ್ಯತೆಗಳೊಂದಿಗೆ ನಾಸಾದ ಏಜೆನ್ಸಿಯಾದ್ಯಂತ ತಂತ್ರಜ್ಞಾನ ಹೂಡಿಕೆಗಳನ್ನು ಒಟ್ಟುಗೂಡಿಸಲಿದ್ದಾರೆ. ಇತರ ಫೆಡರಲ್ ಏಜೆನ್ಸಿಗಳು, ಖಾಸಗಿ ವಲಯ ಮತ್ತು ಬಾಹ್ಯ ಮಧ್ಯಸ್ಥಗಾರರೊಂದಿಗೆ ತಂತ್ರಜ್ಞಾನ ಸಹಯೋಗದ ಮೇಲ್ವಿಚಾರಣೆ ಹೊಣೆಯನ್ನು ನಿರ್ವಹಿಸುತ್ತಾರೆ ಎಂದು ಹೇಳಿತ್ತು.

ಇದನ್ನೂ ಓದಿ: NASA Chief Technologist | ಇಂಡಿಯನ್- ಅಮೆರಿಕನ್ ಎ ಸಿ ಚರಾನಿಯಾ ಈಗ ನಾಸಾದ ಚೀಫ್ ಟೆಕ್ನಾಲಜಿಸ್ಟ್

Exit mobile version