ಒಟ್ಟಾವ: ಅಮೆರಿಕದಲ್ಲಿ ಇತ್ತೀಚೆಗೆ ಭಾರತ ಮೂಲದ ಹಲವು ವಿದ್ಯಾರ್ಥಿಗಳು ಹತ್ಯೆಗೀಡಾಗುತ್ತಿರುವ ಪ್ರಕರಣಗಳು ಭಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕೆನಡಾದಲ್ಲಿ (Canada) ಭಾರತ ಮೂಲದ ದಂಪತಿ (Indian Couple), ಅವರ ಪುತ್ರಿಯು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ದಂಪತಿ ಹಾಗೂ ಪುತ್ರಿ ವಾಸಿಸುತ್ತಿದ್ದ ಮನೆಯಲ್ಲಿ ಮಾರ್ಚ್ 7ರಂದೇ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಾಗೆಯೇ, ಪೊಲೀಸರು ಅಗ್ನಿ ದುರಂತದ ಕುರಿತು ಹಲವು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರತ ಮೂಲದ ರಾಜೀವ್ ವಾರಿಕೂ (51), ಇವರ ಪತ್ನಿ ಶಿಲ್ಪಾ ಕೋಥಾ (47) ಹಾಗೂ ಪುತ್ರಿ ಮಹೇಕ್ ವಾರಿಕೂ (17) ಅವರು ಬಿಗ್ ಸ್ಕೈ ವೇ ಹಾಗೂ ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಇವರ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೂವರ ಶವಗಳು ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಹಲವು ರೀತಿಯ ಶಂಕೆ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿಲ್ಲ, ಉದ್ದೇಶಪೂರ್ವಕವಾಗಿ ನಡೆದಿರುವ ಕೃತ್ಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
“ರಾಜೀವ್ ವಾರಿಕೂ ಅವರ ಮನೆಯಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿರುವ ಸಾಧ್ಯತೆ ಕಡಿಮೆ ಇದೆ. ಇದೊಂದು ಉದ್ದೇಶಪೂರ್ವಕ ಘಟನೆ ಎಂದು ತೋರುತ್ತಿದೆ. ಹಾಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಉನ್ನತ ತನಿಖೆಯ ಬಳಿಕವೇ ಇವರ ಸಾವಿಗೆ ನಿಖರ ಕಾರಣ ದೊರೆಯಲಿದೆ. ಅಗ್ನಿ ದುರಂತವು ಆಕಸ್ಮಿಕವಾಗಿ ಸಂಭವಿಸಿಲ್ಲ ಎಂಬುದಾಗಿ ಒಂಟಾರಿಯೋ ಫೈರ್ ಮಾರ್ಷಲ್ ಕೂಡ ತಿಳಿಸಿದೆ” ಎಂದು ಪೊಲೀಸ್ ಕಾನ್‌ಸ್ಟೆಬಲ್ ಟರೈನ್ ಯಂಗ್ ಮಾಹಿತಿ ನೀಡಿದ್ದಾರೆ. ಇವರ ಮನೆಯಲ್ಲಿ ಸ್ಫೋಟದ ಸದ್ದು ಕೇಳಿಸಿತು ಎಂಬುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕುರಿತು ಕೂಡ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೋಲ್ಕೊತಾ ಮೂಲದ ನೃತ್ಯಪಟು ಹತ್ಯೆ; ಭಾರತೀಯರ ಪ್ರಾಣಕ್ಕಿಲ್ಲವೇ ಬೆಲೆ?
ರಾಜೀವ್ ವಾರಿಕೂ ಅವರು ಹಲವು ವರ್ಷಗಳಿಂದ ಕೆನಡಾದಲ್ಲಿಯೇ ನೆಲೆಸಿದ್ದಾರೆ. ಅವರು ಟೊರೊಂಟೊ ಪೊಲೀಸ್ ಇಲಾಖೆಯಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಿದ್ದು, ಅವರ ಅವಧಿಯು 2016ರಲ್ಲಿ ಮುಗಿದಿದೆ. ಇನ್ನು ಮಹೇಕ್ ವಾರಿಕೂ ಅವರು ಅಧ್ಯಯನ ಮಾಡುತ್ತಿದ್ದು, ಒಳ್ಳೆಯ ಫುಟ್‌ಬಾಲ್ ಆಟಗಾರ್ತಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತ ಮೂಲದ ನೃತ್ಯಪಟುವೊಬ್ಬರ ಹತ್ಯೆಯಾಗಿತ್ತು. ಇತ್ತೀಚೆಗೆ ಕೆಲ ವಿದ್ಯಾರ್ಥಿಗಳು ಕೂಡ ಹತ್ಯೆಗೀಡಾಗಿದ್ದು, ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ