ಸಿಂಗಾಪುರ: ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಮೂಲದ ಧರ್ಮನ್ ಷಣ್ಮುಗರತ್ನಂ (Tharman Shanmugaratnam) ಅವರು ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶೇ.70.4ರಷ್ಟು ಮತಗಳನ್ನು ಪಡೆಯುವ ಮೂಲಕ ಧರ್ಮನ್ ಷಣ್ಮುಗರತ್ನಂ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾ ಮೂಲದ ಇಬ್ಬರು ಅಭ್ಯರ್ಥಿಗಳನ್ನು ಹಿಂದಿಕ್ಕಿ ಇವರು ಮುನ್ನಡೆ ಸಾಧಿಸಿದ್ದಾರೆ.
ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವವರು ಯಾವುದೇ ಪಕ್ಷಕ್ಕೆ ಸೇರಿರಬಾರದು ಎಂಬ ನಿಯಮ ಇರುವ ಕಾರಣ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (PAP) ಹಾಗೂ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಈಗ ಅಭೂತಪೂರ್ವ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿಂಗಾಪುರದಲ್ಲಿ ಮತದಾನ ಕಡ್ಡಾಯವಾದ ಕಾರಣ 27 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದರು. ಇವರಲ್ಲಿ ಶೇ.70ರಷ್ಟು ಮಂದಿ ಧರ್ಮನ್ ಷಣ್ಮುಗರತ್ನಂ ಅವರನ್ನೇ ಬೆಂಬಲಿಸಿದ್ದಾರೆ. ಹಲಿಮಾಹ್ ಯಾಕೋಬ್ (Halimah Yacob) ಅವರು ಇದುವರೆಗೆ ಅಧ್ಯಕ್ಷೆಯಾಗಿದ್ದರು.
ನರೇಂದ್ರ ಮೋದಿ ಅಭಿನಂದನೆ
ಧರ್ಮನ್ ಷಣ್ಮುಗಂ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಧರ್ಮನ್ ಷಣ್ಮುಗಂ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ ಹಾಗೂ ಸಿಂಗಾಪುರ ವ್ಯೂಹಾತ್ಮಕ ಸಂಬಂಧಗಳ ಏಳಿಗೆಗೆ ಎದುರು ನೋಡುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್ ರಾಮಸ್ವಾಮಿಯನ್ನು ಹೊಗಳಿದ ಎಲಾನ್ ಮಸ್ಕ್
ಯಾರಿವರು ಧರ್ಮನ್ ಷಣ್ಮುಗಂ?
ಧರ್ಮನ್ ಷಣ್ಮುಗಂ ಅವರು ಸಿಂಗಾಪುರದಲ್ಲಿ 1957ರ ಫೆಬ್ರವರಿ 25ರಂದು ಜನಿಸಿದರು. ಇವರ ತಂದೆ ತಮಿಳುನಾಡು ಮೂಲದವರಾದರೆ, ತಾಯಿ ಚೀನಾ ಮೂಲದವರು. ಆರ್ಥಿಕ ತಜ್ಞರಾಗಿದ್ದ ಧರ್ಮನ್ ಷಣ್ಮುಗಂ, 2001ರಲ್ಲಿ ರಾಜಕೀಯ ಪ್ರವೇಶಿಸಿದರು. 2011ರಲ್ಲಿ ಸಿಂಗಾಪುರ ಉಪ ಪ್ರಧಾನಿಯಾಗಿ ಆಯ್ಕೆಯಾದ ಧರ್ಮನ್ ಷಣ್ಮುಗಂ ಅವರು 2019ರವರೆಗೆ ಇದೇ ಹುದ್ದೆಯಲ್ಲಿದ್ದರು. ಸಿಂಗಾಪುರ ಹಣಕಾಸು ಸಚಿವರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.