ನವದೆಹಲಿ: ಫ್ರಾನ್ಸ್ ಬಳಿಕ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೇವೆಗಳನ್ನು ಸೋಮವಾರ ಶ್ರೀಲಂಕಾ (Sri Lanka) ಮತ್ತು ಮಾರಿಷಸ್‌ನಲ್ಲಿ (Mauritius) ವರ್ಚುವಲ್ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ವರ್ಚುವಲ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi), ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್(PM Pravind Jugnauth) ಮತ್ತು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ( President Ranil Wickremesinghe) ಭಾಗಿಯಾಗಿದ್ದರು.
ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಭಾರತೀಯ ಸೇವೆಗಳ ಪ್ರಾರಂಭವು ನವದೆಹಲಿಯ ಉಭಯ ದೇಶಗಳೊಂದಿಗೆ ಹೆಚ್ಚುತ್ತಿರುವ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ದ್ಯೋತಕವಾಗಿದೆ. ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ಹಾಗೂ ಭಾರತಕ್ಕೆ ಪ್ರಯಾಣಿಸುವ ಮಾರಿಷಸ್ ಪ್ರಜೆಗಳಿಗೆ ಯುಪಿಐ ಸೇವೆಗಳು ದೊರೆಯಲಿವೆ.
ಯುಪಿಐ ಸೇವೆಗಳ ಆರಂಭವು ನಮ್ಮ (ಭಾರತ, ಶ್ರೀಲಂಕಾ ಮತ್ತು ಮಾರಿಷಸ್) ನಡುವಿನ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಭಾರತೀಯ ಪ್ರವಾಸಿಗರು ಯುಪಿಐ ಸೇವೆಗಳು ಲಭ್ಯವಿರುವ ಸ್ಥಳಗಳಿಗೆ ಆದ್ಯತೆ ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಳೆದ ವರ್ಷ (ಶ್ರೀಲಂಕಾ) ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಎರಡು ರಾಷ್ಟ್ರಗಳು ವಿಷನ್ ಡಾಕ್ಯುಮೆಂಟ್ ಅನ್ನು ಅಳವಡಿಸಿಕೊಂಡಿವೆ. ಹಣಕಾಸಿನ ಸಂಪರ್ಕವನ್ನು ಹೆಚ್ಚಿಸುವುದು ಅದರ ಪ್ರಮುಖ ಭಾಗವಾಗಿತ್ತು. ಕಳೆದ ವರ್ಷ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರೊಂದಿಗೆ ವಿವರವಾದ ಚರ್ಚೆಯನ್ನು ನಡೆಸಲಾಯಿತು. ಎರಡು ರಾಷ್ಟ್ರಗಳು – ಶ್ರೀಲಂಕಾ ಮತ್ತು ಮಾರಿಷಸ್ – ಇದರಿಂದ ಪ್ರಯೋಜನ ಪಡೆಯುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಹೇಳಿದರು.
ಡಿಜಿಟಲ್ ಮೂಲಸೌಕರ್ಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನಮ್ಮ ಚಿಕ್ಕ ಹಳ್ಳಿಯ ಸಣ್ಣ ಉದ್ಯಮಿ ಕೂಡ ಡಿಜಿಟಲ್ ಪಾವತಿಗಳನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಯುಪಿಐ ಕಾರ್ಯವಿಧಾನದ ಮೂಲಕ ಟಿಕೆಟ್ ಖರೀದಿಸಲು ಫ್ರಾನ್ಸ್ ಅನುಮತಿ ನೀಡಿತ್ತು. ಯುಪಿಐ ಪಾವತಿಗಳನ್ನು ಸ್ವೀಕರಿಸಿದ ಮೊದಲ ಯುರೋಪಿಯನ್ ದೇಶ ಫ್ರಾನ್ಸ್. ಈ ಯುಪಿಐ ಸೇವೆಯನ್ನು ಯುರೋಪಿಯನ್ ರಾಷ್ಟ್ರದ ಇತರ ಪ್ರವಾಸೋದ್ಯಮ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವಿಸ್ತರಿಸಲಾಗುವುದು.
ಈ ಸುದ್ದಿಯನ್ನೂ ಓದಿ: Modi On UPI: ಭಾರತದ ಯುಪಿಐ, ಲಂಕಾ ಪೇ ಭಾಯಿ ಭಾಯಿ; ಮೋದಿ ಘೋಷಣೆಯ ಮಹತ್ವ ಏನು?